ಸೋಮವಾರ, ಏಪ್ರಿಲ್ 19, 2021
30 °C
ಸಮುದಾಯದ ಮುಖಂಡರು, ವರ್ತಕರೊಂದಿಗೆ ತುರ್ತು ಸಭೆ

ಹೆಚ್ಚಿದ ಕೋವಿಡ್‌: ಮುನ್ನೆಚ್ಚರಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಶನಿವಾರ ಸಂಜೆ ನಗರದಲ್ಲಿ ವಿವಿಧ ಸಮುದಾಯದ ಮುಖಂಡರು, ವರ್ತಕರೊಂದಿಗೆ ತುರ್ತು ಸಭೆ ನಡೆಸಿದರು.

‘ನಗರದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌–19 ಪ್ರಕರಣಗಳಲ್ಲಿ ಬಹುತೇಕರು ಪ್ರವಾಸಿಗರೇ ಆಗಿದ್ದಾರೆ. ಸ್ಥಳೀಯರು ಮುನ್ನೆಚ್ಚರಿಕೆ ವಹಿಸಬೇಕು. ಯಾರೂ ಭೀತಿಗೆ ಒಳಗಾಗಬಾರದು. ಯಾರು ಅನಗತ್ಯವಾಗಿ ಗುಂಪು ಗೂಡಬಾರದು. ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು. ಅಂತರದಿಂದ ವ್ಯವಹರಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ಸಿದ್ದರಾಮೇಶ್ವರ ಹೇಳಿದರು.

‘ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದವರಿಂದ ರಾಜ್ಯದಲ್ಲಿ ಸೋಂಕು ಹರಡುತ್ತಿದೆ. ಮುನ್ನೆಚ್ಚರಿಕೆಯ ಅವಶ್ಯಕತೆ ಹೆಚ್ಚಿದೆ. ಜನ ಸೇರುವ ಸ್ಥಳಗಳಲ್ಲಿ ಪ್ರಮುಖವಾಗಿ ಮಾರುಕಟ್ಟೆ, ವ್ಯಾಪಾರ ಮಳಿಗೆಗಳಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಸಮುದಾಯದ ಮುಖಂಡರು ಜನರಿಗೆ ಮಾರ್ಗದರ್ಶನ ಮಾಡಬೇಕು’ ಎಂದು ತಿಳಿಸಿದರು.

‘ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಒಳಾಂಗಣದಲ್ಲಿ 200 ಹಾಗೂ ದೊಡ್ಡ ಪ್ರದೇಶದಲ್ಲಿ 500 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆ ಸೇರಿ ಇತರೆ ಕಾರ್ಯಕ್ರಮಗಳಿಗೆ 100 ರಿಂದ 50 ಜನರಿಗೆ ಅವಕಾಶವಿದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ದಂಡ ಹಾಗೂ ಪ್ರಕರಣ ದಾಖಲಿಸಲು ಅಧಿಕಾರವಿದೆ. ಸಾರ್ವಜನಿಕರು ಸಹಕರಿಸಬೇಕಿದೆ’ ಎಂದರು.

‘ಈಗಾಗಲೇ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತಿದೆ. ಐವತ್ತು ವರ್ಷ ಮೇಲಿನ ನಾಗರಿಕರಿಗೆ ಲಸಿಕೆ ನೀಡಲಾಗುತ್ತದೆ. ಯಾವುದೇ ಭಯಪಡದೇ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಇಡೀ ನಗರದಲ್ಲಿ ಸುತ್ತು ಹಾಕಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ಭಾಗಗಳಲ್ಲಿ ಚಿಕ್ಕ ಮಳಿಗೆಗಳಿವೆ. ಅಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ. ಅಂತರವಿಲ್ಲದೆ ವ್ಯವಹರಿಸುತ್ತಿದ್ದಾರೆ. ಅದು ಸರಿಯಲ್ಲ’ ಎಂದು ಹೇಳಿದರು.

ತಹಶೀಲ್ದಾರ್ ಎಚ್.ವಿಶ್ವನಾಥ್, ‘ಸರ್ಕಾರದ ನಿಯಮ ಪಾಲಿಸದೆ ಬೇಕಾಬಿಟ್ಟಿ ವರ್ತಿಸಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು