ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಜಯಂತಿ: ಉತ್ತರಾದಿ ಮಠಕ್ಕೆ ದಲಿತರ ಪ್ರವೇಶ

Published 15 ಏಪ್ರಿಲ್ 2024, 16:00 IST
Last Updated 15 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಲ್ಲಿನ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯಿಂದ ಭಾನುವಾರ ಉತ್ತರಾದಿ ಮಠಕ್ಕೆ ದಲಿತರ ಪ್ರವೇಶ ಕಾರ್ಯಕ್ರಮ ನಡೆಯಿತು.

ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ಹೋರಾಟ ಸಮಿತಿ ಸಂಚಾಲಕ ಎ.ಕರುಣಾನಿಧಿ, ಸಿಪಿಎಂ ಮುಖಂಡರಾದ ಮರಡಿ ಜಂಬಯ್ಯ ನಾಯಕ, ಭಾಸ್ಕರ ರೆಡ್ಡಿ ಇತರರು ಮೆರವಣಿಗೆ ಮೂಲಕ ರೈಲ್ವೆ ನಿಲ್ದಾಣ ರಸ್ತೆಯ ಉತ್ತರಾದಿ ಮಠದೊಳಗೆ ಪ್ರವೇಶಿಸಿ, ಕಾರ್ಯಕ್ರಮದ ಉದ್ದೇಶ ವಿವರಿಸಿದರು.

‘ಸಾಮಾಜಿಕ ಸೌಹಾರ್ದ ಮತ್ತು ಸಹೋದರತ್ವ ಸಂದೇಶ ಸಾರುವುದೇ ಈ ಕಾರ್ಯಕ್ರಮ ಉದ್ದೇಶ. ನಮ್ಮ ಮನಸ್ಸು ಬದಲಾಗಬೇಕೇ ಹೊರತು ಸಂವಿಧಾನವಲ್ಲ. ಇದು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದರು.

ಜಂಬಯ್ಯ ನಾಯಕ ಮಾತನಾಡಿ, ‘ಧರ್ಮ, ಅಸಮಾನತೆ ನಾವು ಒಪ್ಪಲ್ಲ. ಯಾರೋ ಕೆಲವರು ಸಮಾಜದಲ್ಲಿ ಮೇಲು, ಕೀಳು ಎಂಬ ವ್ಯವಸ್ಥೆ ಸೃಷ್ಟಿಸಿದ್ದಾರೆ. ಜನಸಾಮಾನ್ಯರು ಸೌಹಾರ್ದದಿಂದ ಬಾಳ್ವೆ ನಡಸಿದರೂ ರಾಜಕೀಯ ಶಕ್ತಿಗಳು ಜನರ ಒಗ್ಗಟ್ಟು ಮುರಿಯಲು ಯತ್ನಿಸುತ್ತವೆ. ಇದಕ್ಕೆ ಆಸ್ಪದ ಕೊಡಬಾರದು’ ಎಂದರು.

ಮಠದ ಪರವಾಗಿ ಬ್ರಾಹ್ಮಣ ಸಂಘದ ಅಧ್ಯಕ್ಷ  ದಿವಾಕರ್‌ ಭಟ್‌ ಮಾತನಾಡಿ, ‘ಬ್ರಾಹ್ಮಣ ಸಮಾಜ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಮಠ ಪ್ರವೇಶಕ್ಕೆ ಯಾವ ಅಡ್ಡಿಯೂ ಇಲ್ಲ. ಇದೇ ಪರಂಪರೆ ಮುಂದುವರಿಯಲಿದೆ’ ಎಂದರು.

ನಂತರ ಮಠದಲ್ಲಿನ ಜಯತೀರ್ಥರು, ರಾಘವೇಂದ್ರ ಯತಿಗಳು, ಸತ್ಯಪ್ರಮೋದ ತೀರ್ಥರ ಮೃತ್ತಿಕಾ ಬೃಂದಾವನಕ್ಕೆ ಆರತಿ ಬೆಳಗಿ ಬಂದವರಿಗೆಲ್ಲ ತೀರ್ಥ, ಮಂತ್ರಾಕ್ಷತೆ, ಫಲ ಪ್ರಸಾದ ನೀಡದರು.

ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ಅರ್ಚಕ ಹಾಗೂ ವ್ಯವಸ್ಥಾಪಕ ಕೃಷ್ಣಾಚಾರ್ಯ, ರಮೇಶ್‌ ನವರತ್ನ, ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಕಂಡಕ್ಟರ್ ಪಂಪಾಪತಿ, ಎನ್‌.ಯಲ್ಲಾಲಿಂಗು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT