ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟ ಕೊಡಿ

Last Updated 30 ಆಗಸ್ಟ್ 2021, 10:48 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಅರಣ್ಯ ಹಕ್ಕು ಅಧಿನಿಯಮ 2006 ಹಾಗೂ ಭೂಕಂದಾಯ ಕಾಯ್ದೆ 1964ರ ಅಕ್ರಮ-ಸಕ್ರಮ ಅಡಿಯಲ್ಲಿ ಸರ್ಕಾರಿ ಭೂಮಿಯ ಸಾಗುವಳಿದಾರರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಸೋಮವಾರ ರಾಜ್ಯ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಉಪವಿಭಾಗಧಿಕಾರಿ ಕಚೇರಿಯಿಂದ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಚೇರಿಗೆ ರ್‍ಯಾಲಿ ನಡೆಸಿದರು. ಪಹಣಿ ಸೇರಿದಂತೆ ಇತರೆ ಕೆಲಸಕ್ಕೆ ಬರುವ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ತಾಲ್ಲೂಕು ಕಚೇರಿಯ ಧೋರಣೆ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ಅಧ್ಯಕ್ಷ ಜಿ.ಕರೆಹನುಮಂತ ಮಾತನಾಡಿ, ‘ಹೊಸಪೇಟೆಗೆ ಸಂಬಂಧಪಟ್ಟ ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಅರಣ್ಯ ಹಕ್ಕು ಕಾಯ್ದೆ ಅಡಿ ಒಟ್ಟು 1,120 ಅರ್ಜಿ ಸಲ್ಲಿ‌ಸಿದ್ದಾರೆ. ಆದರೆ, ಇದುವರೆಗೂ ಒಂದೇ ಒಂದು ಅರ್ಜಿ ಪರಿಶೀಲಿಸಿ ಇತ್ಯರ್ಥ ಮಾಡಿ ಹಕ್ಕು ಪತ್ರ ನೀಡಿಲ್ಲ’ ಎಂದು ಆರೋಪಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಂಬಯ್ಯ ನಾಯಕ, ‘ನ್ಯಾಯಾಲಯದ ಆದೇಶ ಮತ್ತು ಸರ್ಕಾರಿ ಕಾಯ್ದೆಗಳನ್ನು ಜಾರಿಗೊಳಿಸದೆ ಭೂರಹಿತ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಸಾಗುವಳಿ ಭೂಮಿಗಳ ಪಹಣಿಯಲ್ಲಿ ದೊಡ್ಡ ಕೈಗಾರಿಕೆಗಳ ಹೆಸರನ್ನು ಅಕ್ರಮವಾಗಿ ಸೇರಿಸಲಾಗಿದೆ’ ಎಂದು ದೂರಿದರು.

‘ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಹೊಡೆಯುವಂತೆ ಆದೇಶಿಸಿದ್ದ ಅಲ್ಲಿನ ಜಿಲ್ಲಾಧಿಕಾರಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಎನ್.ಯಲ್ಲಾಲಿಂಗ, ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್ ರೆಡ್ಡಿ, ಮುಖಂಡರಾದ ಬೆಳಗೋಡು ತಾಯಪ್ಪ, ಬಾಣದ ರಾಮಣ್ಣ, ಅನ್ವೇರಿ ಸ್ವಾಮಿ, ಮೂರ್ತಿ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT