ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನೀಡದ ಅರಸು ಪ್ರಶಸ್ತಿ ಸಂಘದಿಂದ ಪ್ರದಾನ

Published 6 ಸೆಪ್ಟೆಂಬರ್ 2023, 9:45 IST
Last Updated 6 ಸೆಪ್ಟೆಂಬರ್ 2023, 9:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈ  ಬಾರಿ ರಾಜ್ಯ ಸರ್ಕಾರ ದೇವರಾಜ ಅರಸು ಪ್ರಶಸ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಪ್ರದಾನ ಮಾಡದೆ ಅನ್ಯಾಯ ಮಾಡಿದೆ. ಈ ಕೊರತೆ ನೀಗಿಸುವ ಸಲುವಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘದ ವತಿಯಿಂದಲೇ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಹೇಳಿದರು.

‘ರಾಜ್ಯದ ಐದು ವಿಭಾಗ ಮಟ್ಟದಲ್ಲಿ  224 ವಿಧಾನಸಭಾ ಕ್ಷೇತ್ರದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜತೆಗೆ ನೂತನ ಶಾಸಕ, ಸಚಿವರನ್ನೂ ಅಭಿನಂದಿಸಲಾಗುವುದು. ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಅಭಿನಂದನೆ ಮತ್ತು ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 23ರಂದು ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾರಂಭದಲ್ಲಿ ಪ್ರಮುಖವಾಗಿ ಕಾಂತರಾಜ್ ಆಯೋಗದ ವರದಿ ತಕ್ಷಣ ಜಾರಿಗೊಳಿಸಬೇಕು, ಹಿಂದುಳಿದ ವರ್ಗಗಳ 197 ಜಾರಿಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಲೋಕಸಭ, ವಿಧಾನಸಭೆ ಚುನಾವಣೆಗಳಲ್ಲಿ ಸ್ಥಳೀಯ ಚುನಾವಣೆ ಮಾದರಿಯಲ್ಲಿ ಅತಿ  ಹಿಂದುಳಿದವರಿಗೆ ಮೀಸಲಾತಿ ನೀಡಬೇಕು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಡಿ.ದೇವರಾಜ ಅರಸು ಸಮುದಾಯ ಭವನ ಸ್ಥಾಪಿಸಬೇಕು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ₹ 10 ಸಾವಿರ ಕೋಟಿ ಮೀಸಲಿಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿಶಂಕರ್ ದೇವರಮನೆ ಮಾತನಾಡಿ, ಅರಸು ಪ್ರಶಸ್ತಿ ಗಳಿಸಲಿರುವ, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸಿದ ವಿಜಯನಗರ ಜಿಲ್ಲೆಯ ಮಹನೀಯರ ಹೆಸರುಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದರು.

ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರಿಗಾಗಿ ಹೇಳಿಕೊಳ್ಳಬಹುದಾದಂತಹ ಒಂದೇ ಒಂದು ಕೆಲಸ ಮಾಡಿಲ್ಲ ಎಂದು ಜಿಲ್ಲಾ ಒಬಿಸಿ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್‌ ಆರೋಪಿಸಿದರು. 

ತಾಲ್ಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಯು.ಆಂಜನೇಯಲು,  ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಯರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT