ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | 2.29 ಲಕ್ಷ ಹೆಕ್ಟೇರ್‌ನಲ್ಲಿ ನಷ್ಟ: ಪರಿಹಾರ ಎಷ್ಟು?

Published 15 ಸೆಪ್ಟೆಂಬರ್ 2023, 4:58 IST
Last Updated 15 ಸೆಪ್ಟೆಂಬರ್ 2023, 4:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳನ್ನು ತೀವ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ನಷ್ಟ ಪರಿಹಾರ ಯಾವಾಗ ಸಿಕ್ಕೀತು ಎಂಬ ನಿರೀಕ್ಷೆಯನ್ನು ಜಿಲ್ಲೆಯ ರೈತರಲ್ಲಿ ಹುಟ್ಟುಹಾಕಿದೆ.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಒಂದು ವರದಿ ಸಿದ್ಧಪಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ. ಬರಗಾಲ ಘೋಷಣೆಯಾಗಿರುವ ಕಾರಣ ಇನ್ನೊಮ್ಮೆ ವಿಸ್ತ್ರೃತ ಸಮೀಕ್ಷಾ ವರದಿ ಸಿದ್ಧಪಡಿಸಬೇಕಿದ್ದು, ಈ ನಾಲ್ಕೂ ಇಲಾಖೆಗಳ ಅಧಿಕಾರಿಗಳು ಅದರ ಸಿದ್ಧತೆಯಲ್ಲಿ ಈಗ ಇದ್ದಾರೆ.

‘ಬರಗಾಲ ಘೋಷಣೆ ಆದ ಮೇಲೆ ಹಲವು ಪ್ರಕ್ರಿಯೆಗಳು ಇವೆ. ಕೇಂದ್ರದ ತಂಡವೂ ರಾಜ್ಯಕ್ಕೆ ಭೇಟಿ ನೀಡಲಿದೆ. ಹೀಗಾಗಿ ವಿಸ್ತ್ರೃತ ಬರಗಾಲ ವರದಿಯನ್ನು ಸಿದ್ಧಪಡಿಸಬೇಕಿದೆ. ಆ ಎಲ್ಲ ಪ್ರಕ್ರಿಯೆಗಳೊಂದಿಗೆ ರೈತರಿಗೆ ಗರಿಷ್ಠ 2 ಹೆಕ್ಟೇರ್‌ನಷ್ಟು ಬೆಳೆ ಪರಿಹಾರ ಮೊತ್ತ ನೀಡಲು ಅವಕಾಶ ಇದ್ದು, ಅದನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡುವ ಪ್ರಕ್ರಿಯೆಯೂ ನಡೆಯುತ್ತದೆ‘ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಮೆಕ್ಕೆಜೋಳಕ್ಕೆ ಗರಿಷ್ಠ ನಷ್ಟ: ನಾಲ್ಕೂ ಇಲಾಖೆಗಳು ನಡೆಸಿದ ಬೆಳೆ ನಷ್ಟ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಭಾರಿ ನಷ್ಟ ಉಂಟಾದ ಬೆಳೆ ಎಂದರೆ ಮೆಕ್ಕೆಜೋಳ. 1,89.,252 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ಮೆಕ್ಕೆಜೋಳದ ಪೈಕಿ 1,86,372 ಹೆಕ್ಟೇರ್‌ ಪ್ರದೇಶದಲ್ಲಿನ ಮೆಕ್ಕೆಜೋಳ ಮಳೆ ಅಭಾವದಿಂದ ಶೇ 50ಕ್ಕಿಂತ ಅಧಿಕ ನಷ್ಟವಾಗಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಶೇಂಗಾ ಬೆಳೆಯನ್ನು 38,654 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದರೆ, 37,901 ಹೆಕ್ಟೇರ್‌ ಪ್ರದೇಶದಲ್ಲಿ ಶೇ 50ಕ್ಕಿಂತ ಅಧಿಕ ಬೆಳೆ ನಷ್ಟ ಉಂಟಾಗಿದೆ.

ಇಂದು ಸಭೆ: ಬರ ಘೋಷಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಆಯುಕ್ತರು ಶುಕ್ರವಾರ ವಿಡಿಯೊ ಕಾನ್‌ಫರೆನ್ಸ್ ಮೂಲಕ ರಾಜ್ಯದಾದ್ಯಂತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಬರಗಾಲ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ನೀಡುವ ನಿರೀಕ್ಷೆ ಇದೆ. 

ಬರಗಾಲದಲ್ಲಿ ಬೆಳೆಗಂತೂ ನೀರು ಇರುವುದಿಲ್ಲ, ಕುಡಿಯುವ ನೀರಿಗೂ ತತ್ವಾರ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿಲ್ಲಾಡಳಿತ ಕುಡಿಯುವ ನೀರಿನತ್ತ ವಿಶೇಷ ಗಮನ ಹರಿಸುವ ನಿಟ್ಟಿನಲ್ಲಿ ರಾಜ್ಯವು ಮಾರ್ಗಸೂಚಿ ನೀಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ಹೇಳಿವೆ.

ರೈತರಿಗೆ ಬಹಳ ನಷ್ಟ ಉಂಟಾಗಿದೆ. ಒಂದು ತಿಂಗಳ ಮೊದಲೇ ಈ ಘೋಷಣೆ ಮಾಡಬೇಕಿತ್ತು. ಪರಿಹಾರವನ್ನು ಬೇಗ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು
- ಸಣ್ಣಕ್ಕಿ ರುದ್ದಪ್ಪ, ಅಧ್ಯಕ್ಷರು ರಾಜ್ಯ ರೈತ ಸಂಘದ ಹೊಸಪೇಟೆ ತಾಲ್ಲೂಕು ಅಧ್ಯಕ್ಷ
ಬರ ಘೋಷಣೆಯಾದ ಕಾರಣ ನರೇಗಾ ಅಡಿಯಲ್ಲಿ 100 ದಿನದ ಬದಲಿಗೆ 150 ದಿನ ಉದ್ಯೋಗಕ್ಕೆ ಅವಕಾಶ ಸಿಗಲಿದೆ. ನಿಯಮ ಶೀಘ್ರ ಜಾರಿಯಾಗುವ ನಿರೀಕ್ಷೆ ಇದೆ
- ಸದಾಶಿವ ಪ್ರಭು, ಬಿ. ಸಿಇಒ ಜಿಲ್ಲಾ ಪಂಚಾಯಿತಿ
ಗರಿಷ್ಠ 2 ಹೆಕ್ಟೇರ್‌ಗಷ್ಟೇ ಪರಿಹಾರ!
ಬರಗಾಲ ಘೋಷಣೆಯಾದ ಬಳಿಕ ನಷ್ಟ ಪರಿಹಾರಕ್ಕೂ ಕೆಲವೊಂದು ನಿಯಮ ರೂಪಿಸಲಾಗುತ್ತದೆ. ಸದ್ಯ ಇರುವ ನಿಯಮದಂತೆ ಗರಿಷ್ಠ 2 ಹೆಕ್ಟೇರ್‌ಗಷ್ಟೇ ಪರಿಹಾರ ನೀಡಲು ಅವಕಾಶ ಇದೆ. ಒಬ್ಬ ರೈತನಿಗೆ 10 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದರೂ ಆತನಿಗೆ ಸಿಗುವುದು ಗರಿಷ್ಠ 2 ಹೆಕ್ಟೇರ್‌ನ ಬೆಳೆ ಪರಿಹಾರ. ಅದು ಸಹ ಸರ್ಕಾರ ನಿಗದಿಪಡಿಸಿದ ದರದಲ್ಲಿ. ಹೀಗಾಗಿ ಪರಿಹಾರದಿಂದ ರೈತರಿಗೆ ಆಗಿರುವ ನಷ್ಟ ಪೂರ್ತಿ ಭರ್ತಿಯಾಗದಿದ್ದರೂ ಒಂದಿಷ್ಟು ಸಾಂತ್ವನ ರೀತಿಯಲ್ಲಿ ಪರಿಹಾರ ಮೊತ್ತ ಬ್ಯಾಂಕ್‌ ಖಾತೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT