ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಆ. 24ರಿಂದ ಡಿವೈಎಫ್‌ಐ ರಾಜ್ಯಮಟ್ಟದ ಕಾರ್ಯಾಗಾರ

Published 20 ಆಗಸ್ಟ್ 2024, 8:27 IST
Last Updated 20 ಆಗಸ್ಟ್ 2024, 8:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಹಕ್ಕಿಗಾಗಿ ಹಾಗೂ ವಿಜಯನಗರ–ಬಳ್ಳಾರಿ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತ ಪ್ರಜಾಸತ್ಮಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ವತಿಯಿಂದ ರಾಜ್ಯಮಟ್ಟದ ಕಾರ್ಯಾಗಾರ ಇದೇ 24 ಮತ್ತು 25ರಂದು ಇಲ್ಲಿನ ಉಮರ್ ಫಂಕ್ಷನ್‌ ಹಾಲ್‌ನಲ್ಲಿ ನಡೆಯಲಿದೆ.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್‌ ಪೂಜಾರ್ ಮಂಗಳವಾರ ಇಲ್ಲಿ ಕಾರ್ಯಾಗಾರದ ಲಾಂಛನ ಬಿಡುಗಡೆ ಮಾಡಿದ ಬಳಿಕ ಈ ವಿಷಯ ತಿಳಿಸಿದರು.

‘ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಇಂತಹ ಕಾರ್ಯಾಗಾರವನ್ನು ನಡೆಸುತ್ತ ಬರಲಾಗಿದೆ. ಈ ಹಿಂದೆ ದಾಂಡೇಲಿ, ಮಂಗಳೂರು ಮೊದಲಾದೆಡೆ ಕಾರ್ಯಾಗಾರ ನಡೆದಿದ್ದಾಗ ಉದ್ಯೋಗದ ಹಕ್ಕಿನ ಕುರಿತಂತೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲತೆ ಸಾಧಿಸಲಾಗಿತ್ತು. ಜಿಂದಾಲ್‌ನಂತಹ ಬೃಹತ್ ಕಂಪನಿಗಳು ಈ ಭಾಗದಲ್ಲಿದ್ದು, ಅಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕು ಎಂಬ ಹಕ್ಕೊತ್ತಾಯದೊಂದಿಗೆ ಈ ಕಾರ್ಯಾಗಾರ ನಡೆಯಲಿದ’ ಎಂದು ಅವರು ಮಾಹಿತಿ ನೀಡಿದರು.

ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಎ.ಎ.ರಹೀಂ ಸಹಿತ ಹಲವು ಮುಖಂಡರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡುವುದರಲ್ಲಷ್ಟೇ ತಲ್ಲೀನರಾಗದೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಬಲಪಡಿಸುವ ಕೆಲಸವನ್ನು ಮಾಡಬೇಕು ಎಂಬ ಒತ್ತಾಯವನ್ನು ಮಾಡಲಾಗುವುದು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಜನರು ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ, ಯುವಜನತೆ ಇನ್ನಷ್ಟು ಒತ್ತಡ ಹೇರಿ ಉದ್ಯೋಗ ಸೃಷ್ಟಿಗೆ ಯತ್ನಿಸಬೇಕು ಎಂಬ ಸಂದೇಶ ಸಾರಲು ಈ ಕಾರ್ಯಾಗಾರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಿದ್ಧತಾ ಸಮಿತಿಯ ಅಧ್ಯಕ್ಷ ಎ.ಕರುಣಾನಿಧಿ ಪೂರಕ ಮಾಹಿತಿ ನೀಡಿದರು. ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ್ ಕಡಗರ, ಭೀಮನಗೌಡ ಸುಂಕೇಶ್ವರ, ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ವಿ.ಸ್ವಾಮಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT