ಹರಪನಹಳ್ಳಿ : ಧಾರವಾಡ ಹೈಕೋರ್ಟ್ ಪೀಠ ನೀಡಿದ ತಡೆ ಆದೇಶದಿಂದಾಗಿ ಇಲ್ಲಿಯ ಪುರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದ ಕಾಂಗ್ರೆಸ್ ಮುಜುಗರ ಅನುಭವಿಸಿತು.
ಚುನಾವಣೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಪುರಸಭೆ ಆವರಣ ಪ್ರವೇಶಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿಯಿಂದ ಕೌಟಿ ಸುಮಾ ಮತ್ತು ಕಾಂಗ್ರೆಸ್‌ನಿಂದ ಫಾತಿಮಾಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ಎಚ್.ಕೊಟ್ರೇಶ್ ನಾಮಪತ್ರ ಸಲ್ಲಿಸಿ ತೆರಳಿದ್ದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸದಸ್ಯರು ಮತದಾನ ಪ್ರಕ್ರಿಯೆ ಸಮಯಕ್ಕೆ ಸಭಾಂಗಣ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ಹೈಕೋರ್ಟ್ ತಡೆಯಾಜ್ಞೆ ಸುದ್ದಿ ತಿಳಿದು ನಿರಾಸೆಗೊಂಡು ವಾಪಸ್ ತೆರಳಿದರು.
‘ಸಭೆ ಆರಂಭಕ್ಕೂ ಮುನ್ನವೇ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸದಸ್ಯೆ ಕೌಟಿ ಸುಮಾ, ಸದಸ್ಯರಾದ ಹರಾಳು ಅಶೋಕ, ಕಿರಣ್ ಶ್ಯಾನುಬೋಗ, ವಿನಯ್ ಕುಮಾರ, ಎಂ.ಕೆ.ಜಾವಿದ್, ರೊಕ್ಕಪ್ಪ ಅವರು, ಪುರಸಭೆ ಚುನಾವಣೆಗೆ ಧಾರವಾಡ ಪೀಠ ತಾತ್ಕಾಲಿಕ ತಡೆ ನೀಡಿದ್ದರಿಂದ ಚುನಾವಣೆ ಮುಂದೂಡುವಂತೆ ಲಿಖಿತ ದೂರು ಸಲ್ಲಿಸಿದ್ದರು. ಅವರ ಮನವಿ ಪರಿಶೀಲಿಸಿದಾಗ ನ್ಯಾಯಾಲಯವು ಆ 20ರಂದು ನೀಡಿರುವ ತಡೆ ಆದೇಶ ಗೌರವಿಸಿ ಸಭೆ ಮುಂದೂಡಲಾಗಿದೆ’ ಎಂದು ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಸ್ಪಷ್ಟಪಡಿಸಿದರು.
ನಿಕಟಪೂರ್ವ ಅಧ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ, ‘ಪುರಸಭೆ ಸದಸ್ಯ ವೆಂಕಟೇಶ್ ಅವರು ಮೀಸಲಾತಿ ಬದಲಾವಣೆ ಕೋರಿ ಧಾರವಾಡ ಪೀಠದಲ್ಲಿ ಆ.17ರಂದು ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ತಡೆ ನೀಡಿದೆ. ಇದರ ಆಧಾರದ ಮೇಲೆ ಸಭೆ ಚುನಾವಣೆ ಮುಂದುವರಿಸಬಾರದು ಎಂದು ಸಲ್ಲಿಸಿದ್ದ ಮನವಿಗೆ ಚುನಾವಣೆ ಅಧಿಕಾರಿಗಳು ಸ್ಪಂದಿಸಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಬಿಜೆಪಿ ಸದಸ್ಯರು ಸ್ವಾಗತಿಸಿದ್ದೇವೆ’ ಎಂದು ಹೇಳಿದರು.
ನಾವು ಚುನಾವಣೆ ಎದುರಿಸಲು ಒಗ್ಗಟ್ಟಾಗಿದ್ದೆವು. ಹರಪನಹಳ್ಳಿ ಸೇರಿ ಐದು ಪುರಸಭೆ ಚುನಾವಣೆಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವು ಬಳಿಕ ಇದೇ ಆಯ್ಕೆ ಪ್ರಕ್ರಿಯೆ ಮುಂದುವರಿಯುತ್ತದೆಎಂಪಿ.ಲತಾ ಮಲ್ಲಿಕಾರ್ಜುನ್. ಶಾಸಕಿ
ಮುಸ್ಲಿಂ ಮುಖಂಡರ ಅಸಮಾಧಾನ ಕಾಂಗ್ರೆಸ್‌ನಿಂದ 14 ಸದಸ್ಯರು ಗೆದ್ದಿದ್ದಾರೆ. ಫಾತಿಮಾಬಿ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಿರ್ಧರಿಸಲಾಗಿದೆ. ಆದರೂ ನಮ್ಮ ಪಕ್ಷದವರೇ ಹೈಕೋರ್ಟ್‍ಗೆ ಹೋಗಿದ್ದರಿಂದ ಕಾಂಗ್ರೆಸ್ ಗೆಲುವಿಗೆ ತೊಡಕು ಉಂಟಾಗಿದೆ. ಸಾಮಾನ್ಯ ಮಹಿಳೆ ಮೀಸಲಾತಿಯಡಿ ನಮ್ಮ ಸಮಾಜಕ್ಕೆ ಏಕೆ ನ್ಯಾಯ ಕಲ್ಪಿಸಲಿಲ್ಲ ಎಂದು ಶಾಸಕರ ಕಚೇರಿ ಆವರಣದಲ್ಲಿ ಗದ್ದಲ ನಡೆಸಿದ ಮುಸ್ಲಿ ಮುಖಂಡರನ್ನು ಶಾಸಕಿ ಲತಾ ಮಲ್ಲಿಕಾರ್ಜುನ್ ಸಮಾಧಾನಪಡಿಸಿ ಕಳಿಸಿದರು. ಇದರಿಂದ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಕೊರತೆ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.