ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನಹೊಸಹಳ್ಳಿ | ಪ್ರಕೃತಿ ಸವಿಯಲು ಸುಂದರ ತಾಣ

ಕಣ್ಮನ ಸೆಳೆಯುವ ವೀರನದುರ್ಗ ಕೋಟೆ
ಕರಿಬಸವರಾಜ ಜಿ
Published 7 ಜನವರಿ 2024, 6:13 IST
Last Updated 7 ಜನವರಿ 2024, 6:13 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಚಿತ್ರದುರ್ಗದ ಕಲ್ಲಿನ ಕೋಟೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅದೇ ಮಾದರಿಯಲ್ಲೇ ಪಾಳೇಗಾರ ವಂಶಸ್ಥರು ಆಳಿದ ವೀರನದುರ್ಗ ಕೋಟೆ ಸುಂದರವಾಗಿ ಕಂಗೊಳಿಸುತ್ತಿದೆ. ವೀರನದುರ್ಗ ಕೋಟೆ ಇರುವ ಈ ಬೆಟ್ಟವು ಪ್ರಕೃತಿ ಸವಿಯಲು ಸುಂದರ ತಾಣವಾಗಿದೆ. ಈ ಸುಂದರ ಕೋಟೆಯನ್ನು ನೋಡಬೇಕಾದರೆ ಕೂಡ್ಲಿಗಿಯಿಂದ ಮೊರಬನಹಳ್ಳಿ ಮೂಲಕ ಬೀರಲಗುಡ್ಡ ಗ್ರಾಮಕ್ಕೆ ಬರಬೇಕು.

ಸಮೀಪದ ವೀರನದುರ್ಗ ಪಾಳೇಗಾರರ ಕೋಟೆಯು ಎತ್ತರದ ಬೆಟ್ಟಗಳ ಸಾಲಿನಲ್ಲಿದೆ. ಈ ಬೃಹತ್ ಬೆಟ್ಟದ ಬುಡದಲ್ಲೇ ಬೀರಲಗುಡ್ಡ ಗ್ರಾಮವೂ ಇದೆ. ಮಳೆಗಾಲದಲ್ಲಂತೂ ಈ ಸುಂದರ ಬೆಟ್ಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬೆಟ್ಟದ ಇಳಿಜಾರು, ಮಳೆಗಾಲದಲ್ಲಿ ಹರಿಯುವ ನೀರಿನ ಝರಿ, ವಿಸ್ಮಯ ಮೂಡಿಸುವ ಬತೇರಿಗಳು, ಒನಕೆ ಕಿಂಡಿ, 15 ಅಡಿ ಎತ್ತರದ ಗುಪ್ತದ್ವಾರ, ಇತ್ತೀಚಿಗೆ ಕಟ್ಟಿರಬಹುದೇ ಎಂಬ ಭಾವನೆ ಮೂಡಿಸುವಂಥ ಸುಂದರ ಕಲ್ಲಿನ ಕೋಟೆಗಳು ನೋಡುಗರ ಕಣ್ಮನ ಸೆಳೆಯಲಿವೆ.

ಈ ಸ್ಥಳ ಪ್ರವಾಸಿ ತಾಣವಾಗಿ ಕಂಗೊಳಿಸಿ ಮುಂದಿನ ಪೀಳಿಗೆಗೂ ಇತಿಹಾಸ ತಿಳಿಯುವಂತಾಗಲಿ ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಏಳು ಮಹಾದ್ವಾರ: ಚಿತ್ರದುರ್ಗದ ಏಳು ಸುತ್ತಿನ ಕೋಟೆಯಂತೆ ಇತಿಹಾಸ ಪ್ರಸಿದ್ಧ ವೀರನದುರ್ಗ ಕೋಟೆಯಲ್ಲೂ ಏಳು ಮಹಾದ್ವಾರಗಳಿವೆ. ಪ್ರತಿ ದ್ವಾರದಲ್ಲೂ ಒಂದೊಂದು ಬತೇರಿಯನ್ನು ಕಾಣಬಹುದು. ಆದರೀಗ, ಈ ಬತೇರಿಗಳ ಕಲ್ಲುಗಳನ್ನು ಕಿಡಿಗೇಡಿಗಳು ಕಿತ್ತು ಹಾಕುತ್ತಿದ್ದಾರೆ. ಈ ಕೋಟೆಯ ಪ್ರಧಾನ ದ್ವಾರವನ್ನು ‘ಒನಕೆ ಕಿಂಡಿ’ ಎಂದು ಕರೆಯಲಾಗುತ್ತಿದ್ದು, ಈ ಕಿಂಡಿಯಿಂದ ಮೇಲೆ ಹತ್ತಿದರೆ ಪಾಳು ಬಿದ್ದ ಬತೇರಿಗಳ ನಗ್ನದರ್ಶನವಾಗಲಿದೆ. ಈ ಬೆಟ್ಟದ ಪೂರ್ವಕ್ಕೆ ಪಾಳೇಗಾರರು ಆಳ್ವಿಕೆ ಮಾಡಿದ ಬಗ್ಗೆ ಕಡತಗಳು, ನಗ, ನಾಣ್ಯ ಇತ್ಯಾದಿ ವಸ್ತುಗಳನ್ನಿಟ್ಟು ಎರಕ ಒಯ್ದಿರುವ ಕುರುಹುಗಳಿವೆ. ಪಂಚಗಣಾಧೀಶರಲ್ಲಿ ಒಬ್ಬರಾದ ಶ್ರೀ ಕೊಟ್ಟೂರು ಬಸವೇಶ್ವರ ಸ್ವಾಮಿಯು ಈ ಭಾಗದಲ್ಲಿ ನೆಲೆಸಿದ್ದರೆಂಬ ಕುರುಹಾಗಿ ಬೆಟ್ಟದ ಕೆಳಗೆ ಶ್ರೀ ಕೊಟ್ಟೂರೇಶ್ವರ ಮಠವಿದೆ.

ವಿಜಯನಗರ ಸಾಮ್ರಾಜ್ಯ, ಚಿತ್ರದುರ್ಗದ ಕೋಟೆ ಸೇರಿ ನಾನಾ ಸ್ಥಳಗಳ ಇತಿಹಾಸ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳವನ್ನು ನೋಡುತ್ತೇವೆ. ಆದರೆ, ಕೂಡ್ಲಿಗಿ ತಾಲ್ಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ನಮ್ಮದೇ ನೆಲದ ವೀರನದುರ್ಗ ಪಾಳೇಗಾರರ ಇತಿಹಾಸದ ಬಗ್ಗೆ ಬೆಳಕು ಚೆಲ್ಲಲು ಪ್ರವಾಸಿ ತಾಣವಾಗಿ ಮಾಡಲಿ ಎಂಬುದು ಬೀರಲಗುಡ್ಡ ಗ್ರಾಮಸ್ಥರಾದ ರಾಧಮ್ಮ ಅಂಜಿನಪ್ಪ ಅವರ ಆಗ್ರಹವಾಗಿದೆ.

ಕಾನಹೊಸಹಳ್ಳಿ ಸಮೀಪದ ಬೀರಲಗುಡ್ಡ ಗ್ರಾಮದ ಸಮೀಪವಿರುವ ವೀರನದುರ್ಗದ ಕೋಟೆ
ಕಾನಹೊಸಹಳ್ಳಿ ಸಮೀಪದ ಬೀರಲಗುಡ್ಡ ಗ್ರಾಮದ ಸಮೀಪವಿರುವ ವೀರನದುರ್ಗದ ಕೋಟೆ

ಪ್ರವಾಸಿ ತಾಣ ಮಾಡಬೇಕು 17ನೇ ಶತಮಾನದಲ್ಲಿ ಪಾಳೇಗಾರರು ಆಳ್ವಿಕೆ ನಡೆಸಿದ ವೀರನದುರ್ಗ ಸಂಸ್ಥಾನದಲ್ಲಿ ರಾಮಯ್ಯ ನಾಯಕ ಎನ್ನುವವರನ್ನು ಹರಪನಹಳ್ಳಿ ಪಾಳೇಗಾರರಾದ ವೀರ ಮುಮ್ಮಡಿ ನಾಯಕರು ನೇಮಿಸಿದ್ದರು. ಅಲ್ಲದೆ ವೀರಮ್ಮ ನಾಗತಿ ಎನ್ನುವವರೂ ಇಲ್ಲಿ ಆಳ್ವಿಕೆ ನಡೆಸಿದ್ದರು ಎನ್ನುವುದು ತಿಳಿದು ಬಂದಿದೆ. ವೀರನ ದುರ್ಗವು ಸುಂದರ ಗಿರಿದುರ್ಗವಾಗಿದ್ದು ಈ ಇತಿಹಾಸ ಪ್ರಸಿದ್ಧ ಕೋಟೆ ಕೊತ್ತಲು ಸಂರಕ್ಷಿಸಿ ಪ್ರವಾಸಿ ತಾಣವಾಗಿ ಮಾಡಬೇಕಿದೆ. - ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಪ್ರಾಧ್ಯಾಪಕರು ಚರಿತ್ರೆ ವಿಭಾಗ ಹಂಪಿ ಕನ್ನಡ ವಿವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT