ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ತಕ್ಷಣ ನೀರು ಹರಿಸಿ: ರೈತ ಸಂಘ

Published 27 ಜುಲೈ 2023, 12:52 IST
Last Updated 27 ಜುಲೈ 2023, 12:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದ್ದು, ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಲಕ್ಷಾಂತರ ಕೃಷಿಕರ ಹಿತದೃಷ್ಟಿಯಿಂದ ಇದೇ 31ರೊಳಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

‘2013 ಮತ್ತು 2019ರಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಸ್ತಿತ್ವದಲ್ಲಿ ಇಲ್ಲದಿದ್ದರೂ ರೈತರ ಹಿತದೃಷ್ಟಿಯಿಂದ ಕಾಲುವೆಗಳಿಗೆ ನೀರು ಹರಿಸುವ ಕ್ರಮ ಕೈಗೊಳ್ಳಲಾಗಿತ್ತು. ಈ ಬಾರಿ ಸಹ ಐಸಿಸಿ ಇನ್ನೂ ರಚನೆಗೊಂಡಿಲ್ಲ. ಮಳೆ ವಿಳಂಬದಿಂದಾಗಿ ಈಗಾಗಲೇ ರೈತರು ತೊಂದರೆಗೆ ಒಳಗಗಿದ್ದಾರೆ. ಅವರಿಗೆ ಇನ್ನಷ್ಟು ತೊಂದರೆ ಕೊಡದೆ ತಕ್ಷಣ ಕಾಲುವೆಗಳಿಗೆ ನೀರು ಹರಿಸಬೇಕು’ ಎಂದು ಸಂಘದ ಮುಖಂಡ ಜೆ.ಕಾರ್ತಿಕ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

‘2017ರಲ್ಲಿ ಕಾಲುವೆಗಳಿಗೆ ನೀರನ್ನು ವಿಳಂಬವಾಗಿ ಹರಿಸಲಾಗಿತ್ತು. ಇದರಿಂದ ಇಳುವರಿ ಕುಂಠಿತವಾಗಿತ್ತು. ಈ ಬಾರಿ ಮಳೆ ಸುರಿಯುವುದು ವಿಳಂಬವಾಗಿ ಜಲಾಶಯ ತುಂಬುವುದು ವಿಳಂಬವಾಗಿದೆ. ಕಾಲುವೆಯಲ್ಲಿ ನೀರು ಹರಿಸುವುದು ಇನ್ನಷ್ಟು ವಿಳಂಬವಾದರೆ ಈ ನೀರನ್ನೇ ನಂಬಿಕೊಂಡಿರುವ ಕರ್ನಾಟಕದ ನಾಲ್ಕು ಜಿಲ್ಲೆಗಳು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಲಕ್ಷಾಂತರ ರೈತ ಕುಟುಂಬಗಳಿಗೆ ತೊಂದರೆಯಾಗಲಿದೆ‘ ಎಂದು ಅವರು ನೆನಪಿಸಿದರು.

ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆಯಿಂದ 5.50 ಲಕ್ಷ ಎಕರೆ, ಎಚ್‌ಎಲ್‌ಸಿಯಿಂದ 3.80 ಲಕ್ಷ ಎಕರೆ, ಎಲ್‌ಬಿಎಸ್‌ನಿಂದ 6.02 ಲಕ್ಷ ಎಕರೆ, ವಿಜಯನಗರ ಕಾಲುವೆಗಳಿಂದ 26 ಸಾವಿರ ಎಕರೆ ಹಾಗೂ ತೆಲಂಗಾಣಕ್ಕೆ ನದಿ ಮೂಲಕ 76 ಸಾವಿರ ಎಕರೆ ಕೃಷಿ ಭೂಮಿಗೆ (ಒಟ್ಟು 16.38 ಲಕ್ಷ ಎಕರೆ) ನೀರುಣಿಸುವ ಯೋಜನೆ ಇಲ್ಲಿದೆ ಎಂದು ಅವರು ಮಾಹಿತಿ ನೀಡಿದರು. 

‍ಪರಿಹಾರ ನೀಡಿ: ಈಚೆಗೆ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 300 ಹೆಕ್ಟೇರ್‌ನಲ್ಲಿ ಬೆಳೆದ ಸಜ್ಜೆ, ಹತ್ತಿ, ಸೂರ್ಯಕಾಂತಿ, ಜೋಳ ಬೆಳೆಗಳು ನಾಶವಾಗಿದ್ದು, ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಕಳೆದ ಏಪ್ರಿಲ್‌ನಲ್ಲಿ ಗಾಳಿ, ಮಳೆ ಸಂಭವಿಸಿ ಉಂಟಾದ ಹಾನಿಗೂ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಹೇಮಾ ರೆಡ್ಡಿ ಆಗ್ರಹಿಸಿದರು.

ರೈತ ಮುಖಂಡರಾದ ಎಚ್‌.ಜಿ.ಮಲ್ಲಿಕಾರ್ಜುನ, ಜಿ.ಮಲ್ಲಪ್ಪ, ಅರ್‌.ಆರ್‌.ತಾಯಪ್ಪ, ಆರ್‌.ಮುತ್ತಯ್ಯ, ಯಮ್ನೂರಪ್ಪ ಇದ್ದರು.

1.13 ಲಕ್ಷ ಕ್ಯುಸೆಕ್‌ ನೀರು

ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಗುರುವಾರ 1.13 ಲಕ್ಷ ಕ್ಯುಸೆಕ್ಸ್‌ಗೆ ಹೆಚ್ಚಿದೆ. ಜಲಾಶಯದಲ್ಲಿ  49.76 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟೆಯ ನೀರಿನ ಮಟ್ಟ 1,615.56 ಅಡಿಗೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT