ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗ್ರಾಮ ಸ್ವರಾಜ್ಯ’ಕ್ಕಾಗಿ ಗ್ರಾ.ಪಂ.ಸದಸ್ಯರ ಹೋರಾಟ

ಅಕ್ಟೋಬರ್‌ 2ರ ಗಡುವು, ಪದಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ
Published 2 ಸೆಪ್ಟೆಂಬರ್ 2024, 16:10 IST
Last Updated 2 ಸೆಪ್ಟೆಂಬರ್ 2024, 16:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಕಾಯ್ದೆ ಅನ್ವಯ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಬೇಡಿಕೆಗಳನ್ನು ಅಕ್ಟೋಬರ್‌ 2ರೊಳಗೆ ಈಡೇರಿಸದಿದ್ದರೆ ‘ಗ್ರಾಮ ಸ್ವರಾಜ್ಯಕ್ಕಾಗಿ ನಿರ್ಣಾಯಕ ಹೋರಾಟ’ ನಡೆಸುವುದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಎಚ್ಚರಿಸಿದ್ದಾರೆ.

ವಿಜಯನಗರ ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸದಸ್ಯರು ಈ ಸಂಬಂಧ ಸೋಮವಾರ ಇಲ್ಲಿನ ಸಾಯಿಬಾಬಾ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಟ್ಟರು.

ಒಕ್ಕೂಟದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್‍ ಮಾತನಾಡಿ, ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರಗಳನ್ನಾಗಿ ಕೆಲಸ ನಿರ್ವಹಿಸಲು ಬಿಡದೆ ರಾಜ್ಯ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡುತ್ತಿದೆ. ಅನುದಾನವನ್ನು ನೀಡದೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ, ಕೂಸಿನ ಮನೆ, ಗ್ರಂಥಾಲಯ ಹಾಗೂ ಇನ್ನಿತರೆ ಯೋಜನೆಗಳನ್ನು ರಾಜ್ಯ ಮಟ್ಟದಲ್ಲಿ ನಿರ್ಧರಿಸಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕೆಲಸ ನಿರ್ವಹಿಸಲು ಒತ್ತಡ ಹೇರುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸದೆ ಶಾಸಕರು ಮತ್ತು ಸಚಿವರು ಈ ಎರಡೂ ಸ್ಥಳೀಯಾಡಳಿತ ಸಂಸ್ಥೆಗಳ ಅನುದಾನವನ್ನು ಮನಬಂದಂತೆ ಬಳಸುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

‘ಗೃಹಲಕ್ಷ್ಮಿ ಯೋಜನೆಯಲ್ಲಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ₹ 2 ಸಾವಿರ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಸಹ ಸಿಗುವುದು ಇಷ್ಟೇ ಗೌರವಧನ. ಈ ಗೌರವಧನವನ್ನು ಹೆಚ್ಚಿಸಲೇಬೇಕು. ರಾಜ್ಯದ ಮಹಿಳಾ ಜನಪ್ರತಿನಿಧಿಗಳಿಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವಂತಹ ಶೋಷಣೆ ನಿರ್ಲಕ್ಷ್ಯ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಮಹಿಳಾ ಸಹಾಯವಾಣಿಯನ್ನು ತೆರೆಯಬೇಕು.
ಪಂಚಾಯಿತಿಗಳಲ್ಲಿ ಪಾರದರ್ಶಕತೆ ತರಲು, ಪ್ರತಿ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿ, ಬಿಲ್‍ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಬೇರೆ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಂಬಣ್ಣ, ಮುರಳಿರಾಜ್, ಮಮತಾ ತಳವಾರ್, ಗಡ್ಡಿ ನಾಗರಾಜ್, ಗೋವಿಂದ ನಾಯ್ಕ್, ದೂಪದಹಳ್ಳಿ ಮಂಜುನಾಥ, ರಮೇಶ್ ಗದ್ದಿಕೇರಿ, ಸುರೇಶ್, ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT