ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಸಿ.ಮಹದೇವಪ್ಪ ಲೋಕಸಭಾ ಅಭ್ಯರ್ಥಿಯಾಗುವುದು ಬೇಡ: ಒತ್ತಾಯ

Published 7 ಫೆಬ್ರುವರಿ 2024, 7:25 IST
Last Updated 7 ಫೆಬ್ರುವರಿ 2024, 7:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಸೇವೆ ರಾಜ್ಯಕ್ಕೇ ಇರಬೇಕು. ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿ ಕಣಕ್ಕೆ ಇಳಿಸಿದ್ದೇ ಆದರೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ’ ಎಂದು ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಘ ಎಚ್ಚರಿಸಿದೆ.

‘ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಅವರನ್ನು ಈ ಹಿಂದೆ ಸೋಲಿಸಿ, ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಗಿತ್ತು ಎಂಬ ಆಪಾದನೆ ಕಾಂಗ್ರೆಸ್ ಪಕ್ಷದ ಮೇಲಿದೆ. ಮಹದೇವಪ್ಪ ಅವರನ್ನು ಸಹ ರಾಜ್ಯದಿಂದ ದೂರ ಇರಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರವೇ ಮಾಡುತ್ತಿರುವಂತೆ ಕಾಣಿಸುತ್ತಿದೆ. ಇಂತಹ ರಾಜಕೀಯ ಪಿತೂರಿಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ವಾಸುದೇವ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ವೇಳೆ ಸಚಿವ ಮಹದೇವಪ್ಪ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದ್ದೇ ಆದರೆ ದಲಿತ ಮತಗಳು ಅನಿವಾರ್ಯವಾಗಿ ಛಿದ್ರಗೊಳ್ಳಬಹುದು, ಇದರಿಂದ ಪಕ್ಷಕ್ಕೆ ತುಂಬಾ ನಷ್ಟವಾಗಲಿದೆ. ಈ ಕುತಂತ್ರದ ವಿರುದ್ಧ ರಾಜ್ಯದ ಎಲ್ಲಾ ದಲಿತ ಸಮುದಾಯ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ’ ಎಂದು ಅವರು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಮಾತನಾಡಿ, ‘ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನಲೆಗೆ ತರುವ ಕೆಲವನ್ನು ಸಚಿವ ಮಹದೇವಪ್ಪ ಮಾಡುತ್ತಿದ್ದಾರೆ. ಅವರನ್ನು ಕೇಂದ್ರಕ್ಕೆ ಕಳುಹಿಸಿ ಅವರು ಭವಿಷ್ಯದಲ್ಲಿ ರಾಜ್ಯದ ಸೇವೆಗೆ ಸಿಗದಂತೆ ಮಾಡುವ ಯಾವುದೇ ಪಿತೂರಿಯನ್ನು ಸಹಿಸಲಾಗದು. ಮಹದೇವಪ್ಪ ಅವರು ಚುನಾವಣಾ ಕಣಕ್ಕೆ ಇಳಿದರೆ ದಲಿತ ಮತಗಳು ಇತರ ಪಕ್ಷಗಳತ್ತ ಹೋಗದಿದ್ದರೂ, ತಟಸ್ಥವಾಗುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೇ ದೊಡ್ಡ ಹೊಡೆತ ಬೀಳಬಹುದು. ಸಚಿವರ ಪುತ್ರ ಸುನಿಲ್‌ ಬೋಸ್ ಅವರನ್ನು ಕಣಕ್ಕೆ ಇಳಿಸಿದರೆ ಸಂಘದ ಅಭ್ಯಂತರ ಇಲ್ಲ’ ಎಂದರು.

ಮಹದೇವಪ್ಪ ಅವರ ವಿರುದ್ಧ ನಡೆಯುವ ಪಿತೂರಿಯನ್ನು ಖಂಡಿಸಿ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ಚಿಂತನೆ ನಡೆದಿದ್ದು, ಎರಡ್ಮೂರು ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುವುದು ಎಂದರು.

ಸಂಘದ ಯುವ ಘಟಕದ ಅಧ್ಯಕ್ಷ ಜೆ.ಶಿವಕುಮಾರ್, ಮುಖಂಡರಾದ ಸಣ್ಣಮಾರಪ್ಪ, ಜಯಣ್ಣ, ಪಿ.ಚಂದ್ರಶೇಖರ್‌, ಎಚ್‌.ಜಿ.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT