ಹೊಸಪೇಟೆ (ವಿಜಯನಗರ): ಮಲೆನಾಡು ಹಾಗೂ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 1.08 ಲಕ್ಷ ಕ್ಯುಸೆಕ್‌ಗೆ ಹೆಚ್ಚಳವಾಗಿದೆ.
105 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 40.13 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಲಾಶಯ ಬಹುತೇಕ ಭರ್ತಿಯಾಗುವ ಸಾಧ್ಯತೆ ಇದೆ.
1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿನ ನೀರಿನ ಮಟ್ಟ ಸದ್ಯ 1,611.27 ಅಡಿಯಷ್ಟಿದೆ. ಒಂದೇ ದಿನದಲ್ಲಿ ನೀರಿನ ಮಟ್ಟ 5 ಅಡಿಯಷ್ಟು ಹೆಚ್ಚಳವಾಗಿದೆ. ಜುಲೈ 3ರಂದು ನೀರಿನ ಮಟ್ಟ 1,576.50 ಅಡಿಗೆ ಕುಸಿದಿತ್ತು. ಅಂದು ಜಲಾಶಯದ ನೀರಿನ ಸಂಗ್ರಹ 3 ಟಿಎಂಸಿ ಅಡಿಯಷ್ಟು ಮಾತ್ರ ಇತ್ತು. ವಿಳಂಬವಾಗಿಯಾದರೂ ಉತ್ತಮ ಮಳೆ ಆಗುತ್ತಿರುವ ಕಾರಣ ಕೇವಲ 23 ದಿನಗಳಲ್ಲಿ ನೀರಿನ ಮಟಟ 35 ಅಡಿಗಳಷ್ಟು ಏರಿಕೆಯಾಗಿದೆ.
4 ತಾಲ್ಲೂಕುಗಳ ಶಾಲೆಗಳಿಗೆ ಇಂದೂ ರಜೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಮತ್ತು ಹೂವಿನಹಡಗಲಿ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬುಧವಾರವೂ ಈ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಮಧ್ಯೆ, ಹೊಸಪೇಟೆ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳು ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.