ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Holi 2024 | ಹಂಪಿಯಲ್ಲಿ ಸೃಷ್ಟಿಯಾಯ್ತು ಏಕಬಣ್ಣದ ಜಗತ್ತು

ಹೋಳಿ ರಂಗಿನ ಓಕುಳಿಯಲ್ಲಿ ಮಿಂದೆದ್ದ ವಿದೇಶಿಯರು, ಸ್ಥಳೀಯರು
Published 27 ಮಾರ್ಚ್ 2024, 4:56 IST
Last Updated 27 ಮಾರ್ಚ್ 2024, 4:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪಾರಂಪರಿಕ ತಾಣ ಹಂಪಿಗೆ ವಿದೇಶಿ ಪ್ರವಾಸಿಗರು ಬರುವುದು ಸಾಮಾನ್ಯ. ಹೋಳಿ ಹಬ್ಬದ ದಿನದಂದು ಇಲ್ಲಿ ಆಡುವ ರಂಗಿನಾಟ ಜಗದ್ವಿಖ್ಯಾತವಾಗಿದ್ದು, ಮಂಗಳವಾರ ಇಂತಹ ಓಕುಳಿಯಲ್ಲಿ ಮಿಂದೆದ್ದವರ ಬಣ್ಣವೆಲ್ಲಾ ಒಂದೇ ಆಗಿತ್ತು. ಹೀಗಾಗಿ ಅಪರೂಪಕ್ಕೆ ಏಕಬಣ್ಣದ ಜಗತ್ತು ಇಲ್ಲಿ ಸೃಷ್ಟಿಯಾಗಿತ್ತು.

ವಿರೂಪಾಕ್ಷ ದೇವಸ್ಥಾನದ ಮುಂಭಾಗದಿಂದ ಜನತಾ ಪ್ಲಾಟ್‌ನಲ್ಲಿ ಒಂದು ಸಣ್ಣ ಸುತ್ತು ಹಾಕಿದ ವಿದೇಶಿಯರು ಹಾಗೂ ಸ್ಥಳೀಯ ಯುವಕ, ಯುವತಿಯರು, ಮತ್ತೊಮ್ಮೆ ದೇವಸ್ಥಾನದ ಮುಂಭಾಗದಿಂದ ಬಂದು, ಜನತಾ ಪ್ಲಾಟ್‌ನ ಒಳಭಾಗದಲ್ಲಿ ಓಕುಳಿಯಾಟ ಆಡುತ್ತ ತುಂಗಭದ್ರಾ ನದಿಯತ್ತ ತೆರಳಿ ಸ್ನಾನ ಮಾಡಿದರು. ಸುಮಾರು ಮೂರು ಗಂಟೆ ಹೊತ್ತು ನೂರಾರು ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಸೇರಿ ಆಡಿದ ರಂಗಿನಾಟ, ಮಾಡಿದ ನೃತ್ಯ, ಎರಚಿದ ಬಣ್ಣ ಸೃಷ್ಟಿಸಿದ ಲೋಕ ಅದ್ಭುತವಾಗಿತ್ತು. ಎಲ್ಲರ ಬಣ್ಣವೂ ಒಂದೇ ರೀತಿ ಕಾಣಿಸಿತು.

ವಿದೇಶಿಯರನ್ನು ಸಾಮಾನ್ಯವಾಗಿ ಅವರ ಬಣ್ಣದಿಂದಲೇ ಗುರುತಿಸಲಾಗುತ್ತದೆ. ಹೋಳಿ ರಂಗಿನಲ್ಲಿ ಮಿಂದೆದ್ದ ಅವರ ಬಣ್ಣವನ್ನು ಗುರುತಿಸುವುದೇ ಕಷ್ಟಕರ ಎಂಬಂತೆ ಅವರೆಲ್ಲರೂ ಕೆಂಪು, ನೀಲಿ, ಹಳದಿ, ಹಸಿರು, ಗುಲಾಬಿ, ಕಂದು ಬಣ್ಣದಲ್ಲಿ ತೋಯ್ದುಬಿಟ್ಟಿದ್ದರು. ಅವರು ಹಾಕಿದ ಟಿಶರ್ಟ್‌, ಬನಿಯನ್‌, ಸ್ಕರ್ಟ್‌, ಮಿಡಿ, ಫ್ರಾಕ್‌ಗಳೆಲ್ಲವೂ ಬಣ್ಣಗಳಲ್ಲಿ ರಂಗೇರಿದ್ದವು. ಅವರ ಉಡುಗೆ, ತೊಡುಗೆ, ಕುಣಿತದ ಶೈಲಿ, ಸ್ಥಳೀಯರೊಂದಿಗೆ ಬೆರೆತ ಬಗೆ, ಯಾವ ಕೋನದಿಂದ ನೋಡಿದರೂ ಅವರು ವಿದೇಶಿಯರು ಎಂದು ಗುರುತಿಸಲಾಗದಷ್ಟರ ಮಟ್ಟಿಗೆ ಬಣ್ಣದಲ್ಲಿ ಲೀನವಾಗಿದ್ದರು. ಸ್ಥಳೀಯ ಯುವಕ, ಯುವತಿಯರೂ, ಇತರ ಪ್ರವಾಸಿಗರು ಸಹ ಅವರಿಗೆ ಸಾಥ್‌ ನೀಡಿದ್ದರು. ಅವರೆಲ್ಲ ಮುಂದೆ ಸಾಗುತ್ತಿದ್ದಂತೆಯೇ ಬಣ್ಣವನ್ನು ತುಂಬಿದ್ದ ತಳ್ಳುಗಾಡಿಗಳೂ ಹಿಂದಿನಿಂದ ಅನುಸರಿಸಿ ಬಂದವು. ಹೀಗಾಗಿ ಅಲ್ಲಿ ಬಣ್ಣಗಳಿಗೆ ಕೊರತೆಯೇ ಇರಲಿಲ್ಲ.

ಬಲವಂತದಿಂದ ಬಣ್ಣ ಹಾಕಬೇಡಿ, ಕಿರುಕುಳ ನೀಡಬೇಡಿ ಎಂದು ಪೊಲೀಸರು ಧ್ವನಿವರ್ಧಕದಲ್ಲಿ ಸೂಚಿಸುತ್ತಲೇ ಇದ್ದರು. 40 ಡಿಗ್ರಿ ಸೆಂಟಿಗ್ರೇಡ್‌ನ ಬಿಸಿಲು ಸಹ ಓಕುಳಿಯಾಟ ನೋಡಿ ತನ್ನ ಪ್ರಖರತೆ ಕಳೆದುಕೊಂಡಂತೆ ಇತ್ತು. ನೂರಾರು ಜನ ಮೊಳಗುತ್ತಿದ್ದ ಡ್ರಮ್‌ ಸದ್ದಿಗೆ ಹೆಜ್ಜೆ ಹಾಕುತ್ತ ನಿಧಾನಕ್ಕೆ ಮುಂದೆ ಮುಂದೆ ಸಾಗುತ್ತಿದ್ದಾಗ ಮೊಬೈಲ್‌ಗಳು ಚಕಚಕನೆ ಸನ್ನಿವೇಶವನ್ನು ಸಾಕ್ಷೀಕರಿಸಿಕೊಂಡವು. ವಿದೇಶಿಯರ ಕೈಯಲ್ಲಿದ್ದ ಮೊಬೈಲ್‌ಗಳು ಸಹ ತಮ್ಮ ಊರಿಗೆ ರಂಗಿನಾಟದ ಸವಿಯನ್ನು ವಿಡಿಯೊ, ಫೊಟೊಗಳ ಮೂಲಕ ರವಾನಿಸುತ್ತಲೇ ಇದ್ದವು.

ಹಂಪಿಯ ಓಕುಳಿ: ಹಂಪಿಯಲ್ಲಿ ನಡೆಯುವ ಓಕುಳಿಯಾಟ ಪ್ರಮುಖ ಪ್ರವಾಸಿ ಆಕರ್ಷಣೆಯೂ ಹೌದು. ಹೋಳಿ ಸಮಯಕ್ಕೆ ಹಂಪಿಗೆ ಬರುವ ವಿದೇಶಿಯರ ಸಂಖ್ಯೆ ಅಧಿಕವೇ ಇದೆ. ಹೋಳಿಗಾಗಿ ಹಂಪಿಯ ಪ್ರವಾಸವನ್ನು ಮುಂದೂಡುವವರೂ ಅಧಿಕ ಇದ್ದಾರೆ. ಇಲ್ಲಿನ ಬಿಸಿಲು ಎಷ್ಟೇ ಪ್ರಖರ ಇರಲಿ, ಹಂಪಿಯ ಹೋಳಿಯನ್ನು ತಪ್ಪಿಸಿಕೊಳ್ಳದ ಅದೆಷ್ಟೋ ನಾಗರಿಕರು ಇದೇ ಸಮಯಕ್ಕೆ ಇಲ್ಲಿಗೆ ಬರುವುದು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷ ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದೇಶಿಯರು ಬಣ್ಣದೋಕುಳಿಯ ರಂಗನ್ನು ಹೆಚ್ಚಿಸಿದರು.

ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಮಂಗಳವಾರ ನಡೆದ ಹೋಳಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ವಿದೇಶಿ ಮಹಿಳೆ  –ಪ್ರಜಾವಾಣಿ ಚಿತ್ರ/ ಲವ ಕೆ.
ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಮಂಗಳವಾರ ನಡೆದ ಹೋಳಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ವಿದೇಶಿ ಮಹಿಳೆ  –ಪ್ರಜಾವಾಣಿ ಚಿತ್ರ/ ಲವ ಕೆ.
ಹಂಪಿಯಲ್ಲಿ ಮಂಗಳವಾರ ನಡೆದ ಹೋಳಿ ರಂಗಿನಾಟದಲ್ಲಿ ವಿದೇಶಿಯರ ಜತೆಗೆ ಸಂಭ್ರಮಿಸಿದ ಸ್ಥಳೀಯರು ಹಾಗೂ ದೇಶಿ ಪ್ರವಾಸಿಗರು  –ಪ್ರಜಾವಾಣಿಇ ಚಿತ್ರ/ ಲವ ಕೆ.
ಹಂಪಿಯಲ್ಲಿ ಮಂಗಳವಾರ ನಡೆದ ಹೋಳಿ ರಂಗಿನಾಟದಲ್ಲಿ ವಿದೇಶಿಯರ ಜತೆಗೆ ಸಂಭ್ರಮಿಸಿದ ಸ್ಥಳೀಯರು ಹಾಗೂ ದೇಶಿ ಪ್ರವಾಸಿಗರು  –ಪ್ರಜಾವಾಣಿಇ ಚಿತ್ರ/ ಲವ ಕೆ.

ಶಿವ ಮೂರನೇ ಕಣ್ಣು ತೆರೆದ ಕ್ಷೇತ್ರ

ಕೇವಲ ಪ್ರವಾಸೀ ಆಕರ್ಷಣೆಯಷ್ಟೇ ಹಂಪಿಗೆ ಇರುವ ಐತಿಹ್ಯವಲ್ಲ. ಸಾಕ್ಷಾತ್‌ ಶಿವ ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ದಹಿಸಿದ ಕ್ಷೇತ್ರ ಇದು ಎಂಬ ಕಾರಣಕ್ಕೆ ಈ ಸ್ಥಳಕ್ಕೆ ಬಹಳ ಮಹತ್ವ ಇದೆ. ಅದಕ್ಕಾಗಿಯೇ ಇಲ್ಲಿನ ಶಿವನ ಹೆಸರು ವಿರೂಪಾಕ್ಷ ಎಂದೇ ಆಗಿದೆ. ಇದೇ ಕಾರಣಕ್ಕೆ ಸೋಮವಾರ ಮಧ್ಯರಾತ್ರಿ ‘ಉತ್ತರಾ’ ನಕ್ಷತ್ರದಲ್ಲಿ ವಿರೂಪಾಕ್ಷನ ರಥಬೀದಿಯಲ್ಲಿ ಕಾಮದಹನ ನಡೆಯಿತು. ಇದನ್ನೂ ನೂರಾರು ಪ್ರವಾಸಿಗರು ವಿದೇಶಿಯರು ಕಣ್ತುಂಬಿಕೊಂಡರು. ವಿರೂಪಾಕ್ಷ ದೇವಸ್ಥಾನ ಬಳಿಯ ಪುಷ್ಕರಿಣಿಯನ್ನು ಮನ್ಮಥ ಹೊಂಡ ಎಂದೇ ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT