ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಕಮಿಷನ್‌ ಎರಡೂ ಒಂದೇ: ಜೆ.ಪಿ. ನಡ್ಡಾ

ಕಾರ್ಯಕರ್ತರ ಶಕ್ತಿ ಪ್ರದರ್ಶನದೊಂದಿಗೆ ಬಿಜೆಪಿ ಕಾರ್ಯಕಾರಿಣಿಗೆ ತೆರೆ
Last Updated 18 ಏಪ್ರಿಲ್ 2022, 1:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿಯೂ ಭಾನುವಾರ ಸಂಜೆ ನಗರದಲ್ಲಿ ಪಕ್ಷದ ಕಾರ್ಯಕರ್ತರ ಶಕ್ತಿ ಪ್ರದರ್ಶನದೊಂದಿಗೆ ತೆರೆ ಕಂಡಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ರಾಜ್ಯ, ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದರು. ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಜೆ.ಪಿ ನಡ್ಡಾ ಮಾತನಾಡಿ, ಕಾಂಗ್ರೆಸ್‌ ಹಾಗೂ ಕಮಿಷನ್‌ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಮಿಷನ್‌ ಜೊತೆ ಕಾಂಗ್ರೆಸ್ಸಿಗರು ನಡೆಯುತ್ತಾರೆ. ಸದ್ಯ ಅವರು ನಿರುದ್ಯೋಗಿಗಳಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಭ್ರಷ್ಟಾಚಾರರಹಿತ ಆಡಳಿತದಿಂದ 2023ರಲ್ಲೂ ಬಿಜೆಪಿ ಕರ್ನಾಟಕದಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಜಾತಿ, ಧರ್ಮದ ನಡುವೆ ಜಗಳ ಹಚ್ಚಿ, ಸಮಾಜ ಒಡೆದು ಆಳುವ ಹುನ್ನಾರ ಮಾಡುತ್ತಿರುತ್ತಾರೆ. ಕಾಂಗ್ರೆಸ್‌ ಪಕ್ಷ ಈಗ ಇಂಡಿಯನ್‌ ಅಲ್ಲ, ನ್ಯಾಷನಲ್‌ ಪಕ್ಷವಾಗಿಯೂ ಉಳಿದಿಲ್ಲ. ಅದು ಎರಡು ರಾಜ್ಯಗಳಿಗೆ ಸೀಮಿತವಾಗಿದ್ದು, ಪ್ರಾದೇಶಿಕ ಪಕ್ಷಕ್ಕಿಂತ ಚಿಕ್ಕದಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಕಾಲದಲ್ಲಿ ಟಿ.ಬಿ. ರೋಗಕ್ಕೆ ಔಷಧಿ ತರಲು 25 ವರ್ಷ ಬೇಕಾಯಿತು. ಜಪಾನಿ ಜ್ವರಕ್ಕೆ ಔಷಧಿ ತರಲು 100 ವರ್ಷ ಕಳೆದವು. 2020ರಲ್ಲಿ ಕೋವಿಡ್‌ ಬಂದಿತ್ತು. ಅದಾದ ಒಂದೇ ವರ್ಷದಲ್ಲಿ ಎರಡು ಕೋವಿಡ್‌ ಲಸಿಕೆ ಬಂತು. ಅದು ಪ್ರಧಾನಿ ಮೋದಿಯವರ ಕಾಲದಲ್ಲಿ 150 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ತ್ವರಿತ ಗತಿಯಲ್ಲಿ ಲಸಿಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಈಗ ಜನ ಪರಸ್ಪರ ಹತ್ತಿರ ಕುಳಿತುಕೊಳ್ಳಬಹುದು. ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಬೂತ್‌, ಅಧಿಕಾರದ ಪ್ರಾಥಮಿಕ ಕೇಂದ್ರ. ಬೂತ್‌ ಮಟ್ಟದಲ್ಲಿ ಉತ್ತಮ ಕೆಲಸ ಮಾಡಿದರೆ ಪಕ್ಷ ಯಶಸ್ಸು ಗಳಿಸಲು ಸಾಧ್ಯ. ಪೇಜ್‌, ಬೂತ್‌ ಕೆಲಸಕ್ಕೆ ಕಾರ್ಯಕರ್ತರು ಹೆಚ್ಚಿನ ಒತ್ತು ಕೊಡಬೇಕು. ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ, ಮೋದಿಯವರ ನೇತೃತ್ವದಲ್ಲಿ ಭಾರತ ಮುನ್ನಡೆಯಲು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ ಕಾಲದಲ್ಲಿ ಭೂಮಿಯಿಂದ ಆಕಾಶದ ವರೆಗೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಇತ್ತು. ದೇಶದಲ್ಲಿ ಭ್ರಷ್ಟಾಚಾರ ಮಾಡಿ ಆರ್ಥಿಕ ಹಾನಿ ಮಾಡಿದ ಅಪಕೀರ್ತಿ ಕಾಂಗ್ರೆಸ್ಸಿನದು. ಆದರೆ, ಮೋದಿ ಪ್ರಧಾನಿಯಾದ ನಂತರ ಭ್ರಷ್ಟಾಚಾರ ನಡೆಯುತ್ತಿಲ್ಲ. ಪ್ರಾಮಾಣಿಕತೆ, ದೇಶ ಪ್ರೇಮದಿಂದ ದೇಶ ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಇಡೀ ಜಗತ್ತು ಮೋದಿಯವರ ನಾಯಕತ್ವ ಒಪ್ಪಿಕೊಂಡಿದೆ. ರಾಷ್ಟ್ರದ ಉತ್ತಮ ಭವಿಷ್ಯ ನಿರ್ಮಿಸಲು ಮೋದಿಯವರು ಹೊರಟಿದ್ದಾರೆ. ಕರ್ನಾಟಕವನ್ನು ಮಾದರಿ, ಸಂಪದ್ಭರಿತ ರಾಜ್ಯ ಮಾಡುವ ಗುರಿ ನಮ್ಮದು. ಜನರ ಮನಸ್ಸು ಗೆದ್ದು 2023ರಲ್ಲಿ ಪುನಃ ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಸಚಿವ ಆರ್‌. ಶಂಕರ್‌, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಹ ಕಾರ್ಯದರ್ಶಿ ಡಿ.ಕೆ. ಅರುಣಾ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕರುಣಾಕರ ರೆಡ್ಡಿ, ಎನ್‌.ವೈ. ಗೋಪಾಲಕೃಷ್ಣ, ಸಂಸದ ವೈ.ದೇವೇಂದ್ರಪ್ಪ, ಮುಖಂಡರಾದ ನೇಮಿರಾಜ ನಾಯ್ಕ, ಚಂದ್ರ ನಾಯ್ಕ ಇದ್ದರು.

ಎನ್‌ಇಪಿ ಅತ್ಯಂತ ಪರಿಣಾಮಕಾರಿ ಅನುಷ್ಠಾನ’

‘ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಇಡೀ ದೇಶದಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಬಿಜೆಪಿ ಕಾರ್ಯಕಾರಿಣಿಯ ಸಮಾರೋಪದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಕರ್ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಎನ್‌ಇಪಿ ಕೂಡ ಒಂದು. ಜಲಜೀವನ್‌ ಮಿಷನ್‌, ಉಜ್ವಲ, ಶೌಚಾಲಯ ನಿರ್ಮಾಣ ಹೀಗೆ ಪ್ರತಿಯೊಂದರಲ್ಲೂ ಉತ್ತಮ ಸಾಧನೆ ತೋರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಎರಡು ಗಂಟೆ ಕಾದು ಸುಸ್ತಾದ ಜನ

ಸಂಜೆ 5ಗಂಟೆಗೆ ಬಹಿರಂಗ ಸಭೆ ನಿಗದಿಯಾಗಿತ್ತು. ಆದರೆ, ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಗಂಟೆ ತಡವಾಗಿ ವೇದಿಕೆಗೆ ಬಂದರು. ಅದುವರೆಗೆ ಕಾರ್ಯಕರ್ತರು ಕಾದು ಕಾದು ಸುಸ್ತಾದರು. ಈ ವೇಳೆ ಕೆಲವರು ಅಲ್ಲಿಂದ ನಿರ್ಗಮಿಸಲು ಮುಂದಾದರು. ಈ ವೇಳೆ ಪ್ರವಾಸೋದ್ಯಮ ಸಚಿವ ಅನಂದ್‌ ಸಿಂಗ್‌, ವಿಜಯನಗರ ಜಿಲ್ಲೆಯಾಗಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಬಿಜೆಪಿ ಸರ್ಕಾರ ಅದನ್ನು ಈಡೇರಿಸಿದೆ. ಈಗ ಆ ಪಕ್ಷದ ಮುಖಂಡರು ಬರುತ್ತಿದ್ದಾರೆ. ಇದು ನಮ್ಮ ಪ್ರತಿಷ್ಠೆಯ ವಿಷಯ. ಕೆಲವೇ ನಿಮಿಷಗಳಲ್ಲಿ ಮುಖಂಡರು ಬರುತ್ತಾರೆ. ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. ಆಗ ಕಾರ್ಯಕರ್ತರು ಕುಳಿತರು. ಬೊಮ್ಮಾಯಿ ಅವರು ಕನ್ನಡದಲ್ಲಿ ಹುಮ್ಮಸ್ಸಿನಿಂದ ಮಾತನಾಡಿ ಕಾರ್ಯಕರ್ತರಲ್ಲೂ ಹುಮ್ಮಸ್ಸು ತುಂಬಿದರು. ಆದರೆ, ಜೆ.ಪಿ. ನಡ್ಡಾ ಅವರು ಅವರ ಹೆಚ್ಚಿನ ಭಾಷಣವನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಮಾಡಿದರು. ಹೀಗಾಗಿ ಕೆಲವು ಕಾರ್ಯಕರ್ತರು ಅಲ್ಲಿಂದ ನಿರ್ಗಮಿಸಿದರು. ಇದರಿಂದ ಅಲ್ಲಲ್ಲಿ ಕುರ್ಚಿಗಳು ಖಾಲಿಯಾಗಿದ್ದವು.


ಆನಂದ್ ಸಿಂಗ್‌ ಕೊಂಡಾಡಿದ ಮುಖಂಡರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಬಹುತೇಕ ಮುಖಂಡರು, ಸಚಿವರು, ಶಾಸಕರು ಎರಡು ದಿನಗಳ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡುವಾಗ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರನ್ನು ಕೊಂಡಾಡಿದರು.

‘ವಿಜಯನಗರದ ವೈಭವ ಮರುಕಳಿಸುವ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿ, ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದ್ದಾರೆ. ಆನಂದ್‌ ಸಿಂಗ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಹಗಲು ರಾತ್ರಿ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಅವರೆಲ್ಲ ಅಭಿನಂದನಾರ್ಹರು’ ಎಂದು ಶ್ಲಾಘಿಸಿದರು.

‘ಟೀಮ್‌ ವರ್ಕ್‌, ನೆಟ್‌ವರ್ಕ್‌, ಹಾರ್ಡ್‌ವರ್ಕ್‌ ಹಾಗೂ ಕಾರ್ಯಕರ್ತರ ಹಗಲಿರುಳಿನ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕೆ ನಾನೊಬ್ಬನೇ ಕಾರಣನಲ್ಲ’ ಎಂದು ಆನಂದ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT