‘ನಂಜುಂಡಪ್ಪ ವರದಿ: ಪುನರ್ ರಚನೆ ಅಗತ್ಯ’
ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಸಮಿತಿಯನ್ನು ಪುನರ್ ರಚಿಸುವ ಸಂಬಂಧ ಸರ್ಕಾರ ಈಚೆಗೆ ನಿರ್ಧಾರ ಕೈಗೊಂಡಿದ್ದು ಈ ಭಾಗದ ಒಂದು ಆಶಾಕಿರಣವಾಗಿ ಕಂಗೊಳಿಸಿದೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಸಂಡೂರು ಕ್ಷೇತ್ರದಲ್ಲಿದ್ದ 16 ಹಳ್ಳಿಗಳು ಹೊಸಪೇಟೆ ಸೇರಿದ್ದವು. ಆದರೆ ನಂಜುಂಡಪ್ಪ ವರದಿಯಲ್ಲಿ ಹೊಸಪೇಟೆಯನ್ನು ಕಷ್ಟದಲ್ಲಿರುವ ತಾಲ್ಲೂಕು ಅಲ್ಲ ಎಂದು ಉಲ್ಲೇಖಿಸಲಾಗಿತ್ತು. ‘16 ಹಳ್ಳಿಗಳ ಸೇರ್ಪಡೆಯಿಂದ ಹೊಸಪೇಟೆ ವಿಧಾನಸಭಾ ಕ್ಷೇತ್ರ ಬಡ ಕ್ಷೇತ್ರವಾಗಿ ಬದಲಾಗಿದೆ. ಸೇರ್ಪಡೆಯಾದ 16 ಹಳ್ಳಿಗಳಿಗೂ ಕಾಲುವೆ ನೀರಾವರಿ ಸೌಲಭ್ಯ ಇಲ್ಲ. ಏತ ನೀರಾವರಿ ಸಹಿತ ಸಮಗ್ರ ನೀರಾವರಿ ವ್ಯವಸ್ಥೆಗೆ ಅಧಿಕ ಅನುದಾನದ ಅಗತ್ಯವಿದೆ. ಶೀಘ್ರ ಹೊಸ ಸಮಿತಿಯಿಂದ ಹೊಸ ಕರಡು ಸಿದ್ಧವಾಗಬೇಕು’ ಎಂದು ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರ ಆಪ್ತರೊಬ್ಬರು ತಿಳಿಸಿದರು.