ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ದಾಳಿ ಮಾಡಿದಾಗ ಏನು ಮಾಡಬೇಕು?

ಆರ್‌ಎಫ್‌ಒ ಬಸವರಾಜ್‌ ಮಾಹಿತಿ.
Published 11 ನವೆಂಬರ್ 2023, 13:48 IST
Last Updated 11 ನವೆಂಬರ್ 2023, 13:48 IST
ಅಕ್ಷರ ಗಾತ್ರ

ವಿಜಯನಗರ: ಜಿಲ್ಲೆಯ ಕೆಲವೆಡೆ ಈಚಿನ ದಿನಗಳಲ್ಲಿ ಕರಡಿಗಳ ದಾಳಿ ಹೆಚ್ಚುತ್ತಿದೆ. ಕರಡಿಗಳು ಮುಖ್ಯವಾಗಿ ಮನುಷ್ಯರ ಮುಖ, ತಲೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತವೆ.

‘ಯಾವ ಪ್ರಾಣಿಯ ದಾಳಿಯಾದರೂ ಸಹಿಸಿಕೊಳ್ಳಬಹುದು, ಕರಡಿ ದಾಳಿಯ ಚಿತ್ರಹಿಂಸೆಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂಬ ಮಾತು ಜನಜನಿತವಾಗಿದೆ. ಯಾಕೆ ಎಂದರೆ ಕರಡಿ ತನ್ನ ನಾಲ್ಕು ಇಂಚುಗಳಷ್ಟು ಉದ್ದ ಇರುವ ಉಗುರುಗಳಿಂದ ಒಮ್ಮೆ ಮುಖಕ್ಕೆ ಪರಚಿತು ಎಂದಾದರೆ ಮಿದುಳು, ದವಡೆ ಎಲ್ಲವೂ ಕಿತ್ತು ಬರುತ್ತದೆ. ಅಲ್ಲೇ ಜೀವ ಹೋದರೆ ಸರಿ, ಇಲ್ಲವಾದರೆ ಅದರಿಂದ ಆಗುವ ಹಿಂಸೆ ಯಾವ ವೈರಿಗೂ ಬೇಡ ಎಂಬಂತಿರುತ್ತದೆ.

ಹೀಗಾಗಿಯೇ ಕರಡಿ ದಾಳಿ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂಬುದನ್ನು ತಿಳಿದುಕೊಂಡಷ್ಟೂ ಉತ್ತಮ. ಈ ಬಗ್ಗೆ ಕರಡಿಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು ಮತ್ತು ದರೋಜಿ ಕರಡಿಧಾಮದ ಆರ್‌ಎಫ್‌ಒ ಬಸವರಾಜ್‌ ಅವರು ಮಾಹಿತಿ ನೀಡಿದ್ದಾರೆ.

  • ಕರಡಿ ಮುಖ್ಯವಾಗಿ ದಾಳಿ ನಡೆಸುವುದು ಮನುಷ್ಯರ ತಲೆ ಭಾಗಕ್ಕೆ. ಹೀಗಾಗಿ ಕರಡಿ ಎದುರಾದಾಗ ಬೋರಲಾಗಿ ಮಲಗಿಬಿಡಿ. ಮನುಷ್ಯರ ತಲೆ ಕಾಣದಿದ್ದರೆ ಅದು ತನಗೆ ಯಾವ ಅಪಾಯವೂ ಇಲ್ಲ ಎಂದು ಭಾವಿಸಿ ದಾಳಿಯ ಮನೋಭಾವ ಬಿಟ್ಟುಬಿಡುತ್ತದೆ.

  • ಆ ಕ್ಷಣಕ್ಕೆ ಮಲಗುವುದು ಸಾಧ್ಯವಿಲ್ಲ ಎಂದಾದರೆ ಶರ್ಟ್‌ ಅಥವಾ ಸೀರೆಯನ್ನು ತಲೆಗೆ ಮುಚ್ಚಿಬಿಡಿ.

  • ದಾಳಿ ಮಾಡುವಾಗ ಕೈಯಲ್ಲೊಂದು ಬಲವಾದ ಕೋಲು (ಬಡಿಗೆ) ಇದ್ದರೆ ಕರಡಿ ಮೊದಲು ಅದಕ್ಕೆ ತನ್ನ ಕೈಗಳಿಂದ ಬಡಿಯುತ್ತದೆ. ಅ ಬಡಿಗೆಯನ್ನೇ ಕಚ್ಚುತ್ತ ಇರುತ್ತದೆ. ಆ ಹೊತ್ತಿಗೆ ನಾವು ಓಡಿ ಪಾರಾಗಬಹುದು.

  • ಮರಿಗಳ ಜತೆಗೆ ಕರಡಿ ಇದೆ ಎಂದಾದರೆ ಮನುಷ್ಯರು ಏನೂ ತೊಂದರೆ ಕೊಡದೆ ಇದ್ದರೂ ತಾಯಿ ಕರಡಿ ದಾಳಿಗೆ ಮುಂದಾಗುತ್ತದೆ. ಹೀಗಾಗಿ ಮರಿಗಳ ಜತೆಗಿರುವ ಕರಡಿಗಳ ಬಗ್ಗೆ ಬಹಳ ಎಚ್ಚರ ವಹಿಸಬೇಕು.

  • ಕರಡಿಗಳು ವಾಸ ಇರುವ ಕಲ್ಲು ಬಂಡೆಗಳು, ಗುಹೆಗಳ ಸಮೀಪ ಹೋಗದೆ ಇರಬೇಕು. ಹೋದರೂ ಕೈಯಲ್ಲೊಂದು ಕೋಲು ಇಟ್ಟುಕೊಂಡಿರಬೇಕು. ಕಲ್ಲುಗಳಿಗೆ ಕೋಲಿನಿಂದ ಬಡಿಯುತ್ತ ಸದ್ದು ಮಾಡುತ್ತಿರಬೇಕು. ಆಗ ಮನುಷ್ಯರು ಇದ್ದಾರೆ ಎಂಬುದು ಗೊತ್ತಾಗಿ ಕರಡಿಗಳು ಗುಹೆಯಿಂದ ಹೊರಗೆ ಬರುವುದಿಲ್ಲ.

  • ಕರಡಿಗಳು ಇರಬಹುದಾದ ಸ್ಥಳಗಳಲ್ಲಿ ಜನರು ರಾತ್ರಿ ಹೊತ್ತು ಗುಂಪಾಗಿ, ಜೋರಾಗಿ ಸದ್ದು ಮಾಡುತ್ತ ಹೋಗಬೇಕು.

  • ಕರಡಿಗಳು ಓಡಾಡುವ ಪ್ರದೇಶಗಳಲ್ಲಿ ರಾತ್ರಿ ತೋಟ, ಗದ್ದೆಗಳಿಗೆ ನೀರು ಬಿಡಲೋ, ಸ್ಪ್ರಿಂಕ್ಲರ್ ಜೆಟ್‌ ಬದಲಾಯಿಸಲೋ ಹೋಗುವುದನ್ನು ತಪ್ಪಿಸಿ. ಹೀಗಾಗಿಯೇ ಇಂತಹ ಕಡೆಗಳಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

  • ಕರಡಿಯೂ ಮರ ಏರುವುದರಲ್ಲಿ ನಿಪುಣ. ಕರಡಿ ಅಟ್ಟಿಸಿಕೊಂಡು ಬಂದಾಗ ನಾವು ಮರ ಏರಿ ಕುಳಿತರೆ ಸ್ವಲ್ಪ ಸುರಕ್ಷಿತವೇ. ಕರಡಿಯೂ ಮರ ಏರಿ ಬಂದರೂ, ನೆಲದ ಮೇಲೆ ಇರುವಷ್ಟು ಹೊಡೆಯುವ ಶಕ್ತಿ ಮರದ ಮೇಲೆ ಇರುವುದಿಲ್ಲ.

  • ಕರಡಿಗಳು ಕೃಷಿ ಜಮೀನು ಸಮೀಪದ ಕುರುಚಲು ಕಾಡುಗಳು, ಪೊದೆಗಳಲ್ಲೂ ಅಡಗಿ ಕುಳಿತಿರುತ್ತವೆ. ಹೀಗಾಗಿ ಇಂತಹ ಪೊದೆಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT