ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಸಿ ಸಭೆಗೆ ಸಚಿವ ಜಮೀರ್‌ ಗೈರು–ಆಕ್ಷೇಪ

ನಿಗದಿತ ಸಮಯಕ್ಕೆ ಬಂದಿದ್ದ ಸಚಿವ: ಸಭೆ ವಿಳಂಬವಾಗಿದ್ದಕ್ಕೆ ನಿರ್ಗಮನ
Published 25 ಫೆಬ್ರುವರಿ 2024, 14:47 IST
Last Updated 25 ಫೆಬ್ರುವರಿ 2024, 14:47 IST
ಅಕ್ಷರ ಗಾತ್ರ

ಹೊಸಪೇಟೆ: ಹೊಸಪೇಟೆ ಸಹಿತ ವಿಜಯನಗರ ಜಿಲ್ಲೆ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿರುವಂತೆಯೇ ಬೆಂಗಳೂರಿನಲ್ಲಿ ಶುಕ್ರವಾರ ನೀರಾವರಿ ಸಲಹಾ ಸಮಿತಿ (ಐಸಿಸಿ) ವಿಶೇಷ ಸಭೆ ನಡೆದಿದ್ದು, ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್ ಪಾಲ್ಗೊಳ್ಳದೆ ಇದ್ದುದಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ. 

ಸ್ವತಃ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಅವರೇ ಸಚಿವರ ಗೈರು ಹಾಜರಿಯನ್ನು ಟೀಕಿಸಿದ್ದು, ಹಂಪಿ ಉತ್ಸವ ಆಚರಣೆಗೆ ತೋರುವ ಉತ್ಸಾಹ ನೀರಿನ ಸಮಸ್ಯೆ ನಿವಾರಿಸುವ ಸಭೆಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

‌‘ಜಿಲ್ಲೆ ಗಂಭೀರವಾಗಿ ನೀರಿನ ಸಮಸ್ಯೆ ಎದುರಿಸುತ್ತಿದೆ. ಸಚಿವರು ಸಭೆಯಲ್ಲಿ ಹಾಜರಿರಲೇಬೇಕಿತ್ತು. ಬೆಂಗಳೂರಿನಲ್ಲೇ ಇದ್ದ ಸಚಿವರಿಗೆ ಇದಕ್ಕಿಂತ ಮಹತ್ವದ ಸಭೆ ಏನಿತ್ತು? ಅವರ ಅನುಪಸ್ಥಿತಿ ಹಲವು ತಪ್ಪು ಸಂದೇಶಗಳಿಗೆ ಕಾರಣವಾಗುತ್ತಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಜನರಿಗೆ ಉತ್ತರ ನೀಡಬೇಕಿದೆ. ಜಿಲ್ಲೆಯಿಂದ ದೂರವೇ ಉಳಿದಿರುವ ಸಚಿವರು, ಬೆಂಗಳೂರಿನಲ್ಲೇ ನಡೆದ ಸಭೆಯಲ್ಲೂ ಪಾಲ್ಗೊಳ್ಳದೆ ಇರುವುದು ಅಚ್ಚರಿ ತರಿಸಿದೆ’ ಎಂದು ಸಿರಾಜ್‌ ಶೇಖ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಜರಾಗಿದ್ದರು: ‘ಸಭೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿತ್ತು. ಸಚಿವರು ಸಮಯಕ್ಕೆ ಸರಿಯಾಗಿ ಬಂದಿದ್ದರು. ಆದರೆ ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್‌ ತಂಗಡಗಿ ಅವರು ತಡವಾಗಿ ಬಂದ ಕಾರಣ ಸಭೆ ಆರಂಭವಾಗುವುದು ವಿಳಂಬವಾಯಿತು. ಅದೇ ಸಂದರ್ಭದಲ್ಲಿ ಬಡವರಿಗೆ 36 ಸಾವಿರ ಮನೆಗಳನ್ನು ವಿತರಿಸುವ ಕಾರ್ಯಕ್ರಮ ಸಂಬಂಧ ವಿಡಿಯೊ ಕಾರ್ಯಕ್ರಮ ನಿಗದಿಯಾಗಿತ್ತು. ವಿಜಯನಗರ ಹಾಗೂ ಹೊಸಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ನೀರಿನ ಲಭ್ಯತೆಯ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಎಂಜಿನಿಯರ್‌ಗಳಿಗೆ ಸೂಚಿಸಿ ಸಚಿವರು ನಿರ್ಗಮಿಸಿದ್ದರು’ ಎಂದು ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT