ಕೈಗಾರಿಕೆಗಳು ಪರಿಸರಸ್ನೇಹಿಯಾಗಿ ನಡೆಯಲಿ: ಸಚಿವ ಆನಂದ್ ಸಿಂಗ್

ಹೊಸಪೇಟೆ (ವಿಜಯನಗರ): ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ವಲಯ ಕಚೇರಿ ಮತ್ತು ಪ್ರಾದೇಶಿಕ ಕಚೇರಿಯನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಶುಕ್ರವಾರ ನಗರದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೈಗಾರಿಕೆಗಳು ಪ್ರಕೃತಿ ರಕ್ಷಣೆಯೊಂದಿಗೆ ಪರಿಸರಸ್ನೇಹಿಯಾಗಿ ನಡೆಸಬೇಕು. ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ವ್ಯಾಪಾರ, ಉತ್ಪಾದನಾ ನಿರ್ವಹಣೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪರಿಸರ ಮಾಲಿನ್ಯವಾಗದಂತೆ ಕೆಲಸ ನಿರ್ವಹಿಸಬೇಕು. ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅದ್ಯಕ್ಷ ಡಾ.ಶಾಂತ್ ಎ. ತಿಮ್ಮಯ್ಯ, ಕೈಗಾರಿಕೆಗಳು ಮಂಡಳಿಯೊಂದಿಗೆ ಸಮಚಿತ್ತದಿಂದ ಕಾರ್ಯನಿರ್ವಹಿಸಿದಾಗ ಪರಿಸರ ಸಂರಕ್ಷಣೆ ಸಾಧ್ಯ. ಹೆಚ್ಚಿನ ಉತ್ಪಾದನೆಗೆ ಪರಿಸರ ಮಾಲಿನ್ಯ ಉಂಟಾಗಲು ಅವಕಾಶ ಕೊಡಬಾರದು. ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ಮುಖ್ಯ ಪರಿಸರ ಅಧಿಕಾರಿಗಳಾದ ವಿಜಯ್‌ಕುಮಾರ್ ಕಡಕಬಾವಿ, ಪರಿಸರ ಅಧಿಕಾರಿ ದೊಡ್ಡ ಶಾನಯ್ಯ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ ಇದ್ದರು.
ಅನಾನುಕೂಲವಾದಲ್ಲಿ ಕ್ಷಮಿಸಿ’
‘ಉತ್ಸವದ ಪ್ರತಿಯೊಂದು ಕಾರ್ಯಕ್ರಮಗಳು ಸಕಾಲಕ್ಕೆ ಮತ್ತು ಅಚ್ಚುಕಟ್ಟಾಗಿ ನಡೆಯಲು ಜನ ಸಹಕಾರ ಕೊಡಬೇಕು. ಜನಸಂದಣಿ ಹೆಚ್ಚಾಗಿ ಕೆಲವೊಂದು ಬಾರಿ ಅನಾನುಕೂಲವಾದಲ್ಲಿ ಕ್ಷಮೆ ಕೋರುತ್ತೇನೆ. ಪ್ರವಾಸಿಗರಿಗೆ ತೊಂದರೆಯಾಗದಂತೆ ಸಹಕಾರ ಕೊಡಬೇಕು’ ಎಂದು ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.
ಉತ್ಸವದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಸೇರುತ್ತಾರೆ. ಜನಸಂದಣಿ ಹೆಚ್ಚಿದಂತೆ ಸಣ್ಣಪುಟ್ಟ ತೊಂದರೆಗಳಾಗುವುದು ಸಹಜ. ಸಾರ್ವಜನಿಕರು ಸಹಕರಿಸಬೇಕು. ಉತ್ಸವಕ್ಕೆ ಬರುವವರು ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ, ಪೊಲೀಸರಿಗೆ ಸಹಕಾರ ಕೊಡಬೇಕು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.