ಭಾನುವಾರ, ಏಪ್ರಿಲ್ 18, 2021
24 °C
ಗೆಜೆಟ್‌ ಅಧಿಸೂಚನೆ ಹೊರಡಿಸಿ ಗೊಂದಲ ನಿವಾರಿಸಿದ ರಾಜ್ಯ ಸರ್ಕಾರ

ವಿಜಯನಗರ ಜನತೆ ಆತಂಕ ದೂರ; ಗೊಂದಲ ನಿವಾರಿಸಿದ ಗೆಜೆಟ್‌ ಅಧಿಸೂಚನೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಇದೀಗ ದೂರವಾಗಿದೆ.

ರಾಜ್ಯ ಸರ್ಕಾರವು ಗುರುವಾರ (ಫೆ.25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯಿಸಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕಲಿದೆ.

ಇಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಎಲ್ಲ ಸವಲತ್ತುಗಳು ಹೊಸ ಜಿಲ್ಲೆಗೆ ಅನ್ವಯಿಸಲಿವೆ. ಶಿಕ್ಷಣ ಸಂಸ್ಥೆಗಳಿಗೂ ಈ ಹಿಂದಿನಂತೆಯೇ ಕಲ್ಯಾಣ ಕರ್ನಾಟಕದ ಸೌಲಭ್ಯಗಳು ದಕ್ಕಲಿವೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಸೌಲಭ್ಯ ಹೊಸ ಜಿಲ್ಲೆಗೆ ಅನ್ವಯಿಸಿ ಸರ್ಕಾರ ಆದೇಶ ಹೊರಡಿಸಿರುವುದು ಅಭಿನಂದನಾರ್ಹ. ಈ ವಿಶೇಷ ಸೌಲಭ್ಯದಿಂದ ಈ ಭಾಗದ ಯುವಕ/ಯುವತಿಯರಿಗೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದು ಸಂಶೋಧನಾ ವಿದ್ಯಾರ್ಥಿ ರಮೇಶ ಹೇಳಿದರು.

ಏಕೆ ಮೂಡಿತು ಗೊಂದಲ?

ವಿಶಾಲ ಬಳ್ಳಾರಿ ಜಿಲ್ಲೆ ವಿಭಜನೆಯ ಸಂದರ್ಭದಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಒಂದುವೇಳೆ ಹೊಸದಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಅದಕ್ಕೆ ಕಲ್ಯಾಣ ಕರ್ನಾಟಕದ ಎಲ್ಲ ಸೌಲಭ್ಯಗಳು ಕೈತಪ್ಪಿ ಹೋಗಲಿವೆ ಎನ್ನುವ ವಿಷಯ ಹರದಾಡಿತ್ತು. ಇದು ವಿಜಯನಗರ ಜಿಲ್ಲಾ ವ್ಯಾಪ್ತಿ ತಾಲ್ಲೂಕುಗಳ ಜನರ ಆತಂಕಕ್ಕೆ ಕಾರಣವಾಗಿತ್ತು.

ಈ ವಿಷಯವಾಗಿ ಖುದ್ದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಹಲವು ಸಲ ಹೇಳಿಕೆ ನೀಡಿದ್ದರು. ‘ಹೊಸ ಜಿಲ್ಲೆ ರಚನೆಯಿಂದ ಈ ಹಿಂದಿನ ಯಾವ ಸೌಲಭ್ಯಗಳು ಹೋಗುವುದಿಲ್ಲ. ಕಲಬುರ್ಗಿ ಜಿಲ್ಲೆಯಿಂದ ಯಾದಗಿರಿ ವಿಭಜನೆಗೊಂಡರೂ ಅದಕ್ಕೆ ಈ ಹಿಂದಿನಂತೆಯೇ ಎಲ್ಲ ಸವಲತ್ತುಗಳು ಸಿಗುತ್ತಿವೆ. ಅದರಂತೆಯೇ ವಿಜಯನಗರಕ್ಕೂ ಸಿಗಲಿವೆ’ ಎಂದಿದ್ದರು. ಈಗ ಅವರ ಮಾತು ನಿಜವಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು

ಬೀದರ್‌

ಕಲಬುರ್ಗಿ

ಯಾದಗಿರಿ

ರಾಯಚೂರು

ಕೊಪ್ಪಳ

ಬಳ್ಳಾರಿ

ವಿಜಯನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು