ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡ ಧ್ವಜಸ್ತಂಭದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಾಡಲಿಲ್ಲ.
ಜಿಲ್ಲಾ ಖನಿಜ ನಿಧಿಯ ₹40ಲಕ್ಷ ಅಂದಾಜು ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಈಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಶಾಸಕ ನೇಮರಾಜನಾಯ್ಕ ಮೊದಲ ಧ್ವಜಾರೋಹಣ ನೆರವೇರಿಸಿದ್ದರು.
ಒಂದು ತಿಂಗಳ ಅಂತರದಲ್ಲಿ ನಡೆದ ಕಲ್ಯಾಣ ಕರ್ನಾಟಕ ದಿನಾಚರಣೆಯಂದು ರಾಷ್ಟ್ರಧ್ವಜ ಆರೋಹಣ ಮಾಡದಿರುವುದಕ್ಕೆ ವಿವಿಧ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ತಾಲ್ಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಧ್ವಜಾರೋಹಣ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಧ್ವಜಸ್ತಂಭದಲ್ಲಿಯೂ ನಡೆಯಬೇಕಿತ್ತು’ ಎಂದು ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಮನಂ ಹೇಳಿದರು.