ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುವತ್ತಿ: ಕಳೆಗಟ್ಟಿದ ಜಾತ್ರೆ ಸಂಭ್ರಮ

ಬಸವೇಶ್ವರ, ಮಲ್ಲಿಕಾರ್ಜುನ ರಥೋತ್ಸವ ಇಂದು
ಕೆ.ಸೋಮಶೇಖರ
Published 10 ಮಾರ್ಚ್ 2024, 5:30 IST
Last Updated 10 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಕುರುವತ್ತಿಯಲ್ಲಿ ಶಿವರಾತ್ರಿ ಅಮವಾಸ್ಯೆ ಅಂಗವಾಗಿ ಮಾರ್ಚ್ 10ರಂದು ಸಂಜೆ 4.30ಕ್ಕೆ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ವಿಜಯನಗರ, ದಾವಣಗೆರೆ, ಶಿವಮೊಗ್ಗ, ಹಾವೇರಿ ಭಾಗದಿಂದ ಪಾದಯಾತ್ರಿಗಳ ದಂಡು ಸುಕ್ಷೇತ್ರದತ್ತ ಹರಿದು ಬರುತ್ತಿದೆ. ಪುರಾತನ ಮಲ್ಲಿಕಾರ್ಜುನ ದೇವಾಲಯದಲ್ಲಿನ ಶಿವಲಿಂಗ ದರ್ಶನಕ್ಕೆ ಶಿವರಾತ್ರಿಯಂದೇ ಅಪಾರ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸ್ವಾಮಿಯ ರಥೋತ್ಸವಕ್ಕಾಗಿ ಈ ಭಾಗದ ರೈತರು ಎತ್ತಿನ ಬಂಡಿ, ಟ್ರ್ಯಾಕ್ಟರ್ , ಟಾಟಾ ಏಸ್ ವಾಹನಗಳಲ್ಲಿ ಬಂದು ಜಾತ್ರಾ ಮೈದಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸುಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ.

ನಾಡಿನ ನಾನಾ ಭಾಗಗಳ ಭಕ್ತರು ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿಯನ್ನು ಮನೆದೇವರಾಗಿ ಪೂಜಿಸುತ್ತಿದ್ದಾರೆ. ಬೇಡಿದ್ದನ್ನು ಕರುಣಿಸುವ ಕಲ್ಪತರು ಹಾಗೂ ಕುರುಹುಗಳನ್ನು ಗುಣಪಡಿಸುವ ದೇವರಾಗಿರುವ ಬಸವಣ್ಣನಿಂದ ಈ ಸುಕ್ಷೇತ್ರ ಪ್ರಸಿದ್ಧಿಯಾಗಿದೆ.

ಕುರುವತ್ತಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ತಾಲ್ಲೂಕು ಆಡಳಿತ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದೆ. ಗ್ರಾಮ ಪಂಚಾಯಿತಿಯಿಂದ ನೈರ್ಮಲ್ಯ ಕೆಲಸ ಪೂರ್ಣಗೊಳಿಸಲಾಗಿದೆ. ಹೆಚ್ಚುವರಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದು ಉಚಿತವಾಗಿ ಶುದ್ಧ ನೀರು ವಿತರಿಸಲಾಗುತ್ತಿದೆ. 6 ಸ್ಥಳಗಳಲ್ಲಿ ನೀರಿನ ಸ್ಟ್ಯಾಂಡ್ ಪೋಸ್ಟ್ ಅಳವಡಿಸಲಾಗಿದೆ. ನಾಲ್ಕು ಕಡೆಗಳಲ್ಲಿ 80 ತಾತ್ಕಾಲಿಕ ಶೌಚಾಲಯ ತೆರೆಯಲಾಗಿದೆ. ಜಾನುವಾರುಗಳ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಲಾಗಿದೆ. ಪಾದಯಾತ್ರಿಗಳ ವಿಶ್ರಾಂತಿಗಾಗಿ ಹಲವು ಕಟ್ಟಡಗಳನ್ನು ಮೀಸಲಿರಿಸಲಾಗಿದೆ.

ಐತಿಹಾಸಿಕ ಹಿನ್ನೆಲೆಯ ಸುಕ್ಷೇತ್ರ

ಸುಕ್ಷೇತ್ರವು ಐತಿಹಾಸಿಕ, ಪೌರಾಣಿಕ ಮಹತ್ವ ಹೊಂದಿದೆ. ಪರಸ್ಪರ ಅಭಿಮುಖವಾಗಿರುವ ಪುರಾತನ ಎರಡು ಪ್ರತ್ಯೇಕ ದೇವಾಲಯಗಳಲ್ಲಿ ಆರು ಅಡಿ ಎತ್ತರದ ಬಸವಣ್ಣ ಹಾಗೂ ನಾಲ್ಕು ಅಡಿ ಎತ್ತರದ ಮಲ್ಲಿಕಾರ್ಜುನ ಮೂರ್ತಿ ಪ್ರತಿಷ್ಠಾಪನೆಗೊಂಡಿವೆ. ದುಷ್ಟಶಕ್ತಿಗಳ ಸಂಹಾರಕ್ಕೆ ಭೂಲೋಕಕ್ಕೆ ಬಂದ ಶಿವ (ಮಲ್ಲಿಕಾರ್ಜುನ) ನನ್ನು ನಂದಿ (ಬಸವಣ್ಣ) ಹೆಗಲು ಕೊಟ್ಟು ಎತ್ತಿ ಹಿಡಿದನೆಂಬ ಪ್ರತೀತಿ ಇದೆ. ಆ ಕಾರಣಕ್ಕಾಗಿ ಈ ಸುಕ್ಷೇತ್ರದಲ್ಲಿ ಶಿವನಿಗಿಂತ ನಂದಿ ಮಹಿಮಾನ್ವಿತನಾಗಿದ್ದಾನೆ ಎಂದು ಹಿರಿಯರು ಹೇಳುತ್ತಾರೆ.

ಕಣ್ಮನ ಸೆಳೆಯುವ ಶಿಲ್ಪಕಲಾ ವೈಭವ

ಕಲ್ಯಾಣಿ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆಯ 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಪ್ರಾಚೀನ ದೇಗುಲ, ಶಿಲ್ಪಕಲಾ ವೈಭವದಿಂದ ಕಣ್ಮನ ಸೆಳೆಯುತ್ತಿದೆ. ಮಲ್ಲಿಕಾರ್ಜುನ ದೇಗುಲದ ಪೂರ್ವ, ಉತ್ತರ, ದಕ್ಷಿಣಕ್ಕೆ ಮೂರು ಮಹಾದ್ವಾರಗಳಲ್ಲಿ ಕಲಾಕೃತಿಗಳ ಕೆತ್ತನೆ ಆಕರ್ಷಕವಾಗಿದೆ. ತುಂಗಭದ್ರಾ ನದಿ ತಟದಲ್ಲಿ ಸುಂದರ ಶಿಲ್ಪಕಲಾ ವೈಭವ ಹೊಂದಿರುವ ಸುಕ್ಷೇತ್ರ ‘ದಕ್ಷಿಣಕಾಶಿ ಕುರುವರ್ತಿ’ ಎಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.

ಬಸವೇಶ್ವರ ದೇವರ ಮೂರ್ತಿ
ಬಸವೇಶ್ವರ ದೇವರ ಮೂರ್ತಿ
ಮಲ್ಲಿಕಾರ್ಜುನ ದೇವರ ಮೂರ್ತಿ
ಮಲ್ಲಿಕಾರ್ಜುನ ದೇವರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT