ಹೊಸಪೇಟೆ: ರಾಜ್ಯ ಸರ್ಕಾರ ಟಾರ್ಗೆಟ್ ರಾಜಕಾರಣ ಮಾಡುತ್ತಿದೆ, ಮುನಿರತ್ನ ಬಂಧನ ಪ್ರಕರಣ ಅದಕ್ಕೆ ಸ್ಪಷ್ಟ ನಿದರ್ಶನ, ಜನ ಗಮನಿಸುತ್ತಿದ್ದು, ಸರ್ಕಾರ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ವಿರೋ್ ಪಕ್ಷದ ನಾಯಕ ಬಲವಾದಿ ನಾರಾಯಣ ಸ್ವಾಮಿ ಹೇಳಿದರು.
ಬಿಜೆಪಿಯ ಸದಸ್ಯತ್ವ ಆಭಿಯಾನದ ಪ್ರಗತಿ ಪರಿಶೀಲನೆಗಾಗಿ ಜಿಲ್ಲೆಗೆ ಗುರುವಾರ ಬಂದಿದ್ದ ಅವರು ಇಲ್ಲಿ ಸುದ್ದಿಗೋಷ್ಠಿ ನಡೆಸಿ, ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿರುವ ಸರ್ಕಾರ ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ, ಇದಕ್ಕೆ ಫಲ ಸಿಗುವುದಿಲ್ಲ ಎಂದರು.
ಶಾಸಕ ಮುನಿರತ್ನ ವಿರುದ್ಧ ಆರೋಪ ಬಂದ ತಕ್ಷಣ ಬಂಧಿಸುತ್ತೀರಿ, ಪರಶುರಾಮ ಸಾವು ಸಂಭವಿಸಿ ಎರಡೂವರೆ ತಿಂಗಳು ಕಳೆದರೂ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರನನ್ನು ಬಂಧಿಸುವುದಿಲ್ಲ, ಇದು ಟಾರ್ಗೆಟ್ ರಾಜಕಾರಣದ ಸ್ವಷ್ಟ ನಿದರ್ಶನ, ಮುನಿರತ್ನ ಬಂಧಿಸಿ ರೀತಿಗಷ್ಟೇ ಪಕ್ಷದ ವಿರೋಧ ಎಂದರು.
ಪರಿಶಿಷ್ಟರ ಹಣ ವರ್ಗಾಯಿಸಬೇಡಿ ಎಂದು ಬಿಜೆಪಿ ಹೇಳುತ್ತಲೇ ಬಂದಿತ್ತು, ಮುಖ್ಯಮಂತ್ರಿ ಅವರಿಗೆ ಕೊನೆಗೂ ಅದು ಮನವರಿಕೆಯಾಗಿ ಬುಧವಾರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಸಾಲದು, ವರ್ಗಾಯಿಸಿದ ₹25 ಸಾವಿರ ಕೋಟಿಯನ್ನು ಮತ್ತೆ ನೀಡಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದ ಹಲವು ಹಗರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಲೇ ಇವೆ, ವಾಲ್ಮೀಕಿ ಹಗರಣದಲ್ಲಿ ಎಸ್ಐಟಿ ಶಾಸಕರಾದ ನಾಗೇಂದ್ರ ಮತ್ತು ದದ್ದಲ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಆದರೆ ಇ.ಡಿ ತನಿಖೆಯಲ್ಲಿ ನಾಗೇಂದ್ರ ಅವರೇ ಮೊದಲನೇ ಆರೋಪಿ ಎಂಬುದನ್ನು ಕಂಡುಕೊಂಡಿತು. ಹೀಗಾಗಿ ಸಿಬಿಐ ತನಿಖೆ ಆಗಬೇಕು ಎಂಬ ಒತ್ತಾಯವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಕಪ್ಪು ಕಾಗೆ: ಭ್ರಷ್ಟಾಚಾರ ವಿಚಾರದಲ್ಲಿ ಸರ್ಕಾರ ಕಪ್ಪು ಕಾಗೆ ಆಗಿಬಿಟ್ಟಿದೆ, ಅದರಲ್ಲಿ ಕಪ್ಪು ಚುಕ್ಕೆ ಹುಡುಕುವಂತೆಯೇ ಇಲ್ಲ ಎಂದು ನಾರಾಯಣ ಸ್ವಾಮಿ ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ, ಅವರು ಆಡಳಿತ ವಿಚಾರದಲ್ಲಿ ಮಾತನಾಡಿರಬಹುದು, ರಾಜಕೀಯ ಕಾರಣ ಇದ್ದರೆ ಡಿಕೆಶಿ ಅವರನ್ನೇ ಕೇಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.