ಸೋಮವಾರ, ಏಪ್ರಿಲ್ 12, 2021
26 °C

ಮನುಷ್ಯ ಮಾಡುವ ತಪ್ಪಿಗೆ ಅರಣ್ಯ ಇಲಾಖೆ ಮೇಲೆ ಗೂಬೆ: ಎಸ್‌.ಎಸ್‌. ಲಿಂಗರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ (ವಿಜಯನಗರ/ಹೊಸಪೇಟೆ): ‘ಮನುಷ್ಯರ ತಪ್ಪಿನಿಂದ ಪ್ರಾಣಿಗಳ ಆವಾಸ ಸ್ಥಾನಗಳು ಹಾಳಾಗಿ ಮಾನವ–ಪ್ರಾಣಿ ಸಂಘರ್ಷಗಳು ಉಂಟಾಗುತ್ತಿವೆ. ಆದರೆ, ಅದಕ್ಕಾಗಿ ಅರಣ್ಯ ಇಲಾಖೆಯ ಮೇಲೆ ಗೂಬೆ ಕೂರಿಸಲಾಗುತ್ತಿದೆ’ ಎಂದು ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌. ಲಿಂಗರಾಜು ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಿಂದ ಶುಕ್ರವಾರ ಇಲ್ಲಿ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳ ಅರಣ್ಯ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ವಿಭಾಗಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಅರಣ್ಯ ಇಲಾಖೆಯವರು ಮಾಡುವಷ್ಟು ಕೆಲಸ ಯಾವ ಇಲಾಖೆಯವರು ಮಾಡುವುದಿಲ್ಲ. ಆದರೆ, ಹೊರಜಗತ್ತಿನವರಿಗೆ ಅದು ಗೊತ್ತಾಗುವುದಿಲ್ಲ. ಅರಣ್ಯ ಬೆಳೆಸುವುದರ ಬಗ್ಗೆ ನಮ್ಮ ಇಲಾಖೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಇಲಾಖೆಗೆ ಸೇರಿದ ನಾವೆಲ್ಲರೂ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.

‘ಯಾವುದೇ ವಲಯದಲ್ಲಿ ಚಿರತೆ, ಕರಡಿಗಳ ಉಪಟಳ ಹೆಚ್ಚಾದರೆ ಸುಮ್ಮನೆ ಕೂರಬಾರದು. ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ಆಗ ಪ್ರಾಣಿಗಳ ನಿರ್ವಹಣೆ ಸುಲಭವಾಗುತ್ತದೆ. ಯಾರು ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ತುರ್ತು ಪರಿಸ್ಥಿತಿ ನಿಭಾಯಿಸಲು ಸದಾ ಸಿದ್ಧರಿರಬೇಕು’ ಎಂದು ತಿಳಿಸಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ಚಿರತೆ, ಕರಡಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ಒಂದು ವಲಯದಲ್ಲಿ ಚಿರತೆ ಹಿಡಿದು, ಇನ್ನೊಂದು ವಲಯದಲ್ಲಿ ಬಿಡಬಾರದು. ಒಂದುವೇಳೆ ಚಿರತೆ ಬಿಡುವುದಾದರೆ, ಯಾವ ವಲಯಕ್ಕೆ ಬಿಡಲಾಗುತ್ತದೆಯೋ ಅಲ್ಲಿನ ವಲಯ ಅರಣ್ಯ ಅಧಿಕಾರಿಗಳ ಜತೆ ಚರ್ಚಿಸಬೇಕು' ಎಂದು ಹೇಳಿದರು.

‘ಕೂಡ್ಲಿಗಿ, ಗುಡೇಕೋಟೆಯಲ್ಲಿ ಕರಡಿ ದಾಳಿಗಳು ನಡೆಯುತ್ತಿರುತ್ತವೆ. ಆದರೆ, ಮನುಷ್ಯರು ಸತ್ತಿಲ್ಲ. ಪ್ರತಿ ಸಲ ಮನುಷ್ಯರ ಮೇಲೆ ಕರಡಿ ದಾಳಿ ನಡೆಸಿದಾಗ ಅವರ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚ ಭರಿಸಲು ಅವಕಾಶ ಇದೆ. ಆ ಕೆಲಸ ಮಾಡಬೇಕು. ಜನ ಗಾಯಗೊಂಡರೂ ಮೌನ ವಹಿಸಿದರೆ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು.

ಶಿವಮೊಗ್ಗದ ವನ್ಯಜೀವಿ ವೈದ್ಯ ಡಾ. ಸಿ.ಎಸ್‌. ಸುಜಯ್‌ ಮಾತನಾಡಿ, ‘ಮಾನವ–ಪ್ರಾಣಿ ಸಂಘರ್ಷ ಹೇಳಿ ಕೇಳಿ ಆಗುವಂತಹದ್ದಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಎಂತಹುದೇ ಸಂದರ್ಭ ಬಂದರೂ ಅದನ್ನು ನಿಭಾಯಿಸಿ ಸರ್ವ ಸಾಧನಗಳೊಂದಿಗೆ ಸನ್ನದ್ಧರಾಗಿರಬೇಕು. ಒಂದುವೇಳೆ ಯಾವ ವಲಯದವರ ಬಳಿ ಅಗತ್ಯ ಸಾಧನಗಳು ಇಲ್ಲವೋ ಅವರು ಅವುಗಳನ್ನು ಪಡೆಯಬೇಕು’ ಎಂದು ತಿಳಿಸಿದರು.


ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ

‘ಎಲ್ಲೇ ಮಾನವ–ಪ್ರಾಣಿ ಸಂಘರ್ಷ ನಡೆದರೂ ಮುಂಚೂಣಿಯಲ್ಲಿದ್ದು ಕೆಲಸ ಮಾಡಬೇಕಾದವರು ಅರಣ್ಯ ಇಲಾಖೆಯವರು ಎನ್ನುವುದನ್ನು ಯಾರು ಮರೆಯಬಾರದು. ಪೊಲೀಸ್‌, ಅಗ್ನಿಶಾಮಕ, ವನ್ಯಜೀವಿ ವೈದ್ಯರು, ಮಾಧ್ಯಮದವರ ಸಹಕಾರದೊಂದಿಗೆ ಮಾನವ–ಪ್ರಾಣಿ ಸಂಘರ್ಷ ತಡೆಯಬಹುದು. ಜನರಲ್ಲಿ ತಿಳಿವಳಿಕೆ ಮೂಡಿಸುವುದು ದೊಡ್ಡ ಕೆಲಸ’ ಎಂದು ಹೇಳಿದರು.

ದಾವಣಗೆರೆ ಡಿಸಿಎಫ್‌ ಶ್ರೀನಿವಾಸಮೂರ್ತಿ, ಕೊಪ್ಪಳ ಡಿಸಿಎಫ್‌ಗಳಾದ ಹರ್ಷಭಾನು, ಡಿಸಿಎಫ್‌ ಆನಂದ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌, ವಲಯ ಅರಣ್ಯ ಅಧಿಕಾರಿ ರಮೇಶ ವಿ. ಗಾಣಿಗೇರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎಂ. ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ದೇವರಾಜ, ಪರಮೇಶ್ವರಯ್ಯ, ಮೈಸೂರು ಮೃಗಾಲಯದ ವೈದ್ಯ ಮದನ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು