ಮಂಗಳವಾರ, ಜನವರಿ 25, 2022
28 °C

ಹಂಪಿಯಲ್ಲಿ ವಾಲ್ಮೀಕಿ ಗುರುಪೀಠದ ತೇರಿಗೆ ಪೂಜೆ ನೆರವೇರಿಸಿದ ಸಚಿವ ಆನಂದ್‌ ಸಿಂಗ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹೊಸಪೇಟೆ (ವಿಜಯನಗರ): ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಹೊಸ ತೇರಿನ ಬಿಡಿಭಾಗಗಳಿಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಸೋಮವಾರ ಪೂಜೆ ನೆರವೇರಿಸಲಾಯಿತು.

₹1.70 ಕೋಟಿಯಲ್ಲಿ 60 ಅಡಿಯ ತೇರು ನಿರ್ಮಿಸಲಾಗಿದೆ. ತೇರಿನ ಸುತ್ತಲೂ ರಾಮಾಯಣದ ಪ್ರಸಂಗಗಳ ಕೆತ್ತನೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ₹1.45 ಕೋಟಿ ನೀಡಿದ್ದಾರೆ. ಸಂಸದ ವೈ.ದೇವೇಂದ್ರಪ್ಪ, ಶಾಸಕ ಜಿ.ಟಿ. ದೇವೇಗೌಡ ತಲಾ ₹10 ಲಕ್ಷ ಹಾಗೂ ಚಿತ್ರದುರ್ಗದ ವಾಲ್ಮೀಕಿ ಸಮಾಜದವರು ₹5 ಲಕ್ಷ ದೇಣಿಗೆ ನೀಡಿದ್ದಾರೆ. ಫೆಬ್ರುವರಿ 8, 9ರಂದು ರಾಜನಹಳ್ಳಿಯಲ್ಲಿ ನಡೆಯಲಿರುವ ಜಾತ್ರೆಯಲ್ಲಿ ತೇರು ಎಳೆಯಲಾಗುತ್ತದೆ.

ಬಿಡಿಭಾಗಗಳನ್ನು ಹೊತ್ತ ಎರಡು ಲಾರಿಗಳನ್ನು ಸಚಿವ ಆನಂದ್‌ ಸಿಂಗ್‌ ಹಾಗೂ ಅವರ ಮಗ ಸಿದ್ದಾರ್ಥ ಸಿಂಗ್‌ ಅವರು ಹಂಪಿಯಿಂದ ನಗರದವರೆಗೆ ಓಡಿಸಿಕೊಂಡು ಬಂದರು. ನಗರದ ವಾಲ್ಮೀಕಿ ವೃತ್ತದಲ್ಲಿ ಸಮಾಜದವರು ಹೂಮಳೆಗರೆದು ರಾಜನಹಳ್ಳಿಗೆ ಬೀಳ್ಕೊಟ್ಟರು. ಮಂಗಳವಾರದಿಂದ ರಥದ ಜೋಡಣೆ ಕೆಲಸ ಆರಂಭವಾಗಲಿದೆ.

ಇದಕ್ಕೂ ಮುನ್ನ ಹಂಪಿಯಲ್ಲಿ ಬಿಡಿಭಾಗಗಳಿಗೆ ಪೂಜೆ ನೆರವೇರಿಸಿದ ಆನಂದ್‌ ಸಿಂಗ್‌, ಹಿಂದೆ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಿದಾಗ ತೇರಿನ ಕುರಿತು ಪ್ರಸನ್ನಾನಂದಪುರಿ ಸ್ವಾಮೀಜಿ ವಿಷಯ ಪ್ರಸ್ತಾಪಿಸಿದ್ದರು. ತೇರಿಗೆ ಎಷ್ಟು ದೇಣಿಗೆ ಸಂಗ್ರಹವಾಗುತ್ತದೋ ನೋಡಿ ಮಿಕ್ಕುಳಿದ ಹಣ ನಾನು ಭರಿಸುವೆ ಎಂದು ತಿಳಿಸಿದ್ದೆ. ಅದರಂತೆ ನಡೆದುಕೊಂಡಿರುವೆ. ವಾಲ್ಮೀಕಿ ಗುರುಪೀಠ ರಾಜ್ಯದಲ್ಲೇ ಅತಿ ದೊಡ್ಡ ತೇರು ಹೊಂದಲಿದೆ ಎಂದರು.

ಪಂಪ ವಿರೂಪಾಕ್ಷನ ಆಶೀರ್ವಾದ ಎಲ್ಲರ ಮೇಲಿರಲಿ ಎಂಬ ಉದ್ದೇಶದಿಂದ ತೇರಿನ ಬಿಡಿಭಾಗಗಳಿಗೆ ಹಂಪಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಈ ತೇರನ್ನು ಬಹಳ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೈಡ್ರಾಲಿಕ್‌ ಗಾಲಿ ಹೊಂದಿದೆ ಎಂದು ಹೇಳಿದರು.

ಹಂಪಿ ಮಾಸ್ಟರ್‌ ಪ್ಲ್ಯಾನ್‌ ತಯಾರಿಸುವುದಕ್ಕೂ ಮುನ್ನ ಜನರಿಂದ ಆಕ್ಷೇಪಣೆ ಸ್ವೀಕರಿಸಬೇಕು. ಗ್ರಾಮ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಬೇಕು. ಈ ಹಿಂದಿನ ಮಾಸ್ಟರ್‌ ಪ್ಲ್ಯಾನ್‌ನಿಂದ ಪ್ರವಾಸಿಗರು, ವಾಣಿಜ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಹೊಸ ಮಾಸ್ಟರ್‌ ಪ್ಲ್ಯಾನ್‌ನಿಂದ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಧರ್ಮದರ್ಶಿ ಜಂಬಯ್ಯ ನಾಯಕ ಮಾತನಾಡಿ, ಆನಂದ್‌ ಸಿಂಗ್‌ ಅವರು ಈ ಹಿಂದೆ ಅರಣ್ಯ ಸಚಿವರಿದ್ದಾಗ ತೇರು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೇವು. ಅದರ ಹೆಚ್ಚಿನ ಮೊತ್ತ ಅವರೇ ಭರಿಸಿ ಮಾಡಿಸಿಕೊಟ್ಟಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಎಂದರು.

ಸಿರುಗುಪ್ಪ ಶಾಸಕ ಎಂ.ಎಸ್‌. ಸೋಮಲಿಂಗಪ್ಪ, ಮುಖಂಡರಾದ ಜಿ. ಕೆ. ಹನುಮಂತಪ್ಪ, ಬಾಣದ ಕಣಿವೆಪ್ಪ, ಬಂಡೆ ರಂಗಪ್ಪ, ಗೋಸಲ ಭರಮಪ್ಪ, ಜಂಬಾನಳ್ಳಿ ಪರುಶುರಾಮಪ್ಪ, ಸಂದೀಪ್ ಸಿಂಗ್,  ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ್, ಜೀವರತ್ನಂ, ಗುಜ್ಜಲ್ ಹನುಮಂತಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು