ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಇಂದ್ರಧನುಷ್ 5.0 ಲಸಿಕಾಕರಣ: 4,624 ಮಕ್ಕಳಿಗೆ ಲಸಿಕೆ ಗುರಿ

ಇಂದ್ರಧನುಷ್ 5.0 ಕಾರ್ಯಕ್ರಮ ಆ.7ರಿಂದ : ಡಿಎಚ್ಒ ಡಾ.ಸಲೀಂ
Published 4 ಆಗಸ್ಟ್ 2023, 16:01 IST
Last Updated 4 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಹೊಸಪೇಟೆ : ‘ಕೇಂದ್ರ ಸರ್ಕಾರದ ಇಂದ್ರಧನುಷ್ 5.0 ಲಸಿಕಾಕರಣ ಕಾರ್ಯಕ್ರಮ ಆ.7ರಿಂದ ಆರಂಭಗೊಳ್ಳಲಿದ್ದು, ವಿಜಯನಗರ ಜಿಲ್ಲೆಯಲ್ಲಿ ನವಜಾತ ಶಿಶುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಲೀಂ ತಿಳಿಸಿದರು.

‘ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ ಮಾತನಾಡಿ, ‘ಆ.7ರಿಂದ 12ರವರೆಗೆ,  ಸೆಪ್ಟೆಂಬರ್ 11ರಿಂದ 16ರವರೆಗೆ ಹಾಗೂ ಅಕ್ಟೋಬರ್ 9ರಿಂದ 14ರವರೆಗೆ ಲಸಿಕಾಕರಣ ನಡೆಯಲಿದೆ. ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳ ಮತ್ತು ಗರ್ಭಿಣಿಯರ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಾಗಿದೆ. ಒಟ್ಟಾರೆ 4,624 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ಸಭೆಯನ್ನು ಸಹ ಆಯೋಜಿಸಿ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ’ ಎಂದರು.

12 ವಿವಿಧ ರೋಗಗಳ ತಡೆಗೆ ಲಸಿಕೆ: ‘5 ವರ್ಷದೊಳಗಿನ ಲಸಿಕೆ ವಂಚಿತರಾದ ಮಕ್ಕಳಿಗೆ ಕಾಣಿಸಿಕೊಳ್ಳುವ ಪ್ರಮುಖ ರೋಗ ದಡಾರ ರುಬೆಲ್ಲಾ ಸೇರಿದಂತೆ ಗಂಟಲುಮಾರಿ, ನಾಯಿಕೆಮ್ಮು, ಡಿಪ್ತೀರಿಯಾ, ಹೆಪಟೈಟಿಸ್, ಪೋಲಿಯೊ, ಧನುರ್ವಾಯು, ಬಾಲಕ್ಷಯ ರೋಗ, ನಿಮೋನಿಯಾ, ಮೆದುಳು ಜ್ವರ ಮೊದಲಾದ ಕಾಯಿಲೆಗಳು ಬಾಧಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ. ಪ್ರಮುಖವಾಗಿ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ಗಮನದಲ್ಲಿರಿಸಲಾಗಿದೆ. ಗ್ರಾಮೀಣ ಭಾಗದಲ್ಲೂ ಇದರ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪ್ರಮಾಣ ಪತ್ರ ಪಡೆಯಲು ಅವಕಾಶ: ‘ಕೋ-ವಿನ್ ಮಾದರಿಯಲ್ಲಿ ಈ ಲಸಿಕೆಗೂ ನೋಂದಣಿ ಹಾಗೂ ಪ್ರಮಾಣ ಪತ್ರ ಪಡೆಯಲು ಅವಕಾಶ ಇದ್ದು, ಆಶಾ ಕಾರ್ಯಕರ್ತೆಯರ ಸಹಾಯದಿಂದ ಯು-ವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು’ ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಹೂವಿನಹಡಗಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅರುಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT