ಹೊಸಪೇಟೆ (ವಿಜಯನಗರ): ನಗರದ ಜಂಬುನಾಥಹಳ್ಳಿಯಲ್ಲಿನ 84.86 ಎಕರೆ ಸರ್ಕಾರಿ ಜಮೀನನ್ನು ಹಂಪಿ ಶುಗರ್ಸ್ ಕಂಪನಿಗೆ ಮಾರಾಟ ಮಾಡುವುದನ್ನು ತಡೆಹಿಡಿಯಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿರುವುದನ್ನು ಶಾಸಕ ಎಚ್.ಆರ್.ಗವಿಯಪ್ಪ ಸಮರ್ಥಿಸಿಕೊಂಡಿದ್ದಾರೆ.
‘ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ಅದನ್ನು ಸರ್ಕಾರಿ ಜಮೀನಿನಲ್ಲೇ ಸ್ಥಾಪಿಸುವ ಉದ್ದೇಶ ಏನು ಎಂಬುದೇ ನನ್ನ ಪ್ರಶ್ನೆ. ನಗರದಲ್ಲಿ ವಸತಿ ರಹಿತರಿಗೆ ನಿವೇಶನ ನೀಡಬೇಕಿದೆ, ಹಲವು ಸರ್ಕಾರಿ ಕಚೇರಿಗಳಿಗೂ ಸ್ಥಳ ಬೇಕಾಗಿದೆ. ಇರುವ ಸೀಮಿತ ಸರ್ಕಾರಿ ಜಮೀನನ್ನು ಹೀಗೆ ಮಾರಾಟ ಮಾಡಿದರೆ ಹೇಗೆ?’ ಎಂದು ಅವರು ಬುಧವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಖಾಸಗಿ ಕಂಪನಿಯವರಿಗೆ ಖಾಸಗಿ ಜಮೀನು ಖರೀದಿಸಿ ಉದ್ಯಮ ಸ್ಥಾಪಿಸುವ ಶಕ್ತಿ ಇರುತ್ತದೆ. ನಾವೆಲ್ಲ ಹಾಗೆಯೇ ಮಾಡಿಲ್ಲವೇ? ಸಹಕಾರ ರಂಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾದರೆ ಸರ್ಕಾರಿ ಜಮೀನು ಕೇಳುವುದರಲ್ಲಿ ತಪ್ಪಿಲ್ಲ. ಸುಮಾರು ₹ 200 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಜುಜುಬಿ ಮೊತ್ತಕ್ಕೆ ಖಾಸಗಿಯವರಿಗೆ ಮಾರಾಟ ಮಾಡಲು ನಾನು ಬಿಡುವುದಿಲ್ಲ’ ಎಂದು ಅವರು ಖಡಾಖಂಡಿತವಾಗಿ ಹೇಳಿದರು.
‘ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮತ್ತೆ ಹಿಂದಿನ ಮಾಲೀಕರಿಂದಲೇ ಆರಂಭವಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಏಕೆಂದರೆ ಅವರು ಸೋತು ಹೋಗಿದ್ದಾರೆ, ನನ್ನ ಬಳಿ ಅದನ್ನು ತಿಳಿಸಿದ್ದಾರೆ’ ಎಂದರು.
‘ನೀರು, ಒಳಚರಂಡಿ ಮತ್ತು ರಸ್ತೆಗೆ ನಾನು ಮೊದಲ ಆದ್ಯತೆ ನೀಡುತ್ತೇನೆ. ಜತೆಗೆ ಇತರ ವಿಷಯಗಳತ್ತಲೂ ಗಮನ ಇದ್ದೇ ಇದೆ’ ಎಂದು ಹೇಳಿದರು.
ಶಾಸಕರ ನಡೆಗೆ ಸ್ವಾಗತ: ‘ಈ ವಿಷಯದಲ್ಲಿ ಶಾಸಕರು ಸರಿಯಾದ ಕ್ರಮವನ್ನೇ ತೆಗೆದುಕೊಂಡಿದ್ದಾರೆ. ಸರ್ಕಾರಿ ಜಮೀನು ಬಡಜನರಿಗೆ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನಾವು ವಿರೋಧಿಗಳಲ್ಲ’ ಎಂದು ಸಿಪಿಎಂ ನಾಯಕ ಜಂಬಯ್ಯ ನಾಯಕ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.