ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಕುಸಿದ ಈರುಳ್ಳಿ ಬೆಲೆ: ಉಚಿತವಾಗಿ ಹಂಚಿ ರೈತರ ಪ್ರತಿಭಟನೆ

Published 25 ಏಪ್ರಿಲ್ 2024, 7:29 IST
Last Updated 25 ಏಪ್ರಿಲ್ 2024, 7:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ತಕ್ಷಣ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ರೈತರನ್ನು ಮರೆತಿದೆ ಎಂದು ಆರೋಪಿಸಿದ ರೈತರು, ಗುರುವಾರ ಇಲ್ಲಿ ಉಚಿತವಾಗಿ ಈರುಳ್ಳಿ ಹಂಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಅವರ ನೇತೃತ್ವದಲ್ಲಿ ಇಲ್ಲಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಈರುಳ್ಳಿ ಬೆಳೆಗಾರ ರೈತರು ಹಾಗೂ ಇತರ ರೈತ ಮುಖಂಡರು, ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಕಟುವಾಗಿ ಖಂಡಿಸಿದರು.

‘ಈರುಳ್ಳಿ ಬೆಳೆದ ರೈತರು ಇಂದು ಬೆಲೆ ಇಲ್ಲದೆ ಕಣ್ಣೀರು ಹಾಕುತ್ತಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸುತ್ತಲೇ ಇಲ್ಲ. ಈರುಳ್ಳಿ ಬೆಲೆ ಹೆಚ್ಚಾದಾಗ ತಕ್ಷಣ ಬೇರೆ ದೇಶಗಳಿಂದ ಈರುಳ್ಳಿ ತರಿಸಲು ಮುಂದಾಗುವ ಸರ್ಕಾರ, ಬೆಲೆ ಕುಸಿದಾಗ ರೈತರ ನೆರವಿಗೆ ಏಕೆ ಬರುತ್ತಿಲ್ಲ?’ ಎಂದು ವೀರಸಂಗಯ್ಯ ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯುದರ್ಶಿಯೂ ಆಗಿರುವ ಈರುಳ್ಳಿ ಕೃಷಿಕ ಗೋಣಿಬಸಪ್ಪ ಮಾತನಾಡಿ, ‘ಹೊಸಪೇಟೆ ಎಪಿಎಂಸಿಯಲ್ಲಿ ಮೂರು ಮೂಟೆ ಈರುಳ್ಳಿ ತಂದು ಇಟ್ಟರೂ ಇದುವರೆಗೂ ಖರೀದಿಯೇ ಆಗಿಲ್ಲ. ಒಂದು ಎಕರೆಗೆ ಈರುಳ್ಳಿ ಬೆಳೆಯಲು ₹80 ಸಾವಿರ ಖರ್ಚು ಬರುತ್ತದೆ. ಆದರೆ ಇದೀಗ ಕ್ವಿಂಟಲ್‌ಗೆ ₹ 600 ಸಹ ಸಿಗುತ್ತಿಲ್ಲ. ಹೀಗಾಗಿ ಈರುಳ್ಳಿಯನ್ನು ಚರಂಡಿಗೆ ಎಸೆದು ಪ್ರತಿಭಟಿಸಲು ನಿರ್ಧರಿಸಿದ್ದೆ. ತಿನ್ನುವ ಈರುಳ್ಳಿಯನ್ನು ಎಸೆಯುವುದು ಬೇಡ ಎಂಬ ಕಾರಣಕ್ಕೆ ಅದನ್ನು ಉಚಿತವಾಗಿ ಹಂಚುವ ಮೂಲಕ ಸರ್ಕಾರದ ಧೋರಣೆಯನ್ನು ಖಂಡಿಸುತ್ತಿದ್ದೇನೆ’ ಎಂದರು.

ಮೂರು ಚೀಲಗಳಲ್ಲಿ ತುಂಬಿದ್ದ ಈರುಳ್ಳಿಯನ್ನು ಹತ್ತಾರು ಮಂದಿಗೆ ಉಚಿತವಾಗಿ ಹಂಚಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್‌.ಕೆ.ನಾಯ್ಡು, ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್, ಎಸ್‌.ಬಾಷಾ, ಹರ್ಟಿ ಕಾಳಪ್ಪ, ಯಶೋದಾ ಇತರರು ಇದ್ದರು.

ಎನ್‌ಡಿಎ ವಿರುದ್ಧ ಮತ ಚಲಾಯಿಸಲು ಕರೆ

ಇದಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆ.ಎಂ.ವೀರಸಂಗಯ್ಯ, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನೇ ಅನುಸರಿಸಿಕೊಂಡು ಬಂದಿದೆ. ಕೇಂದ್ರದ ಕೃಷಿ ನೀತಿಯಿಂದ ರೈತರು ಅಪಾಯದಲ್ಲಿರುವುದು ಮಾತ್ರವಲ್ಲ, ಒಕ್ಕಲುತನವೇ ಅಪಾಯದಲ್ಲಿದೆ. ಕೃಷಿಯನ್ನು ಕಂಪನಿಗಳ ಕೈಗೆ ವರ್ಗಾಯಿಸಲು ಕೇಂದ್ರ ತೀರ್ಮಾನಿಸಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತರು ಎನ್‌ಡಿಎ ವಿರುದ್ಧ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

‘ಅದಾನಿ, ಅಂಬಾನಿ, ಗೋದ್ರೇಜ್‌ ಮುಂತಾದವರು ಅನೇಕ ಅಗ್ರೋ ಕಂಪನಿಗಳನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಬೃಹತ್‌ ಗೋದಾಮುಗಳನ್ನು ನಿರ್ಮಿಸುತ್ತಿದ್ದಾರೆ. ಸರ್ಕಾರಿ ಗೋದಾಮುಗಳನ್ನೂ ಗುತ್ತಿಗೆ ಹೆಸರಲ್ಲಿ ತಮ್ಮದಾಗಿಸುತ್ತಿದ್ದಾರೆ. ರಾಜಕಾರಣಿಗಳಿಗೆ ನೂರಾರು ಕೋಟಿ ಕಮಿಷನ್‌ ಕೊಟ್ಟು ಭೂಮಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯಲ್ಲಿ ಬದಲಾವಣೆ ಮಾಡಿಸಿದ್ದಾರೆ. ರೈತರು ಕೃಷಿ ತೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ರೈತರಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ನಿಲ್ಲಿಸಬೇಕೆಂದು ಮವವೊಲಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಮತ ಚಲಾಯಿಸುವ ಮೊದಲಾಗಿ ರೈತರು ಸರಿಯಾಗಿ ಯೋಚಿಸಿ, ಬಿಜೆಪಿ, ಜೆಡಿಎಸ್‌ ಮೈತ್ರಿಯನ್ನು ಸೋಲಿಸಬೇಕು’ ಎಂದು ಅವರು ಕೇಳಿಕೊಂಡರು.

‘ನರಗುಂದದ ಗೋಲಿಬಾರ್ ಪ್ರಕರಣ ನಡೆದ ಬಳಿಕವೂ ರೈತರಲ್ಲಿ ಒಡಕು ಮೂಡಿಸುವ ಯತ್ನ ನಡೆದಿತ್ತು. ಆದರೆ ರೈತರು ಮನಸ್ಸು ಮಾಡಿದರೆ ಸರ್ಕಾರವನ್ನು ಬದಲಿಸಬಲ್ಲರು ಎಂಬುದಕ್ಕೆ 1983ರಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿದ್ದೇ ಸಾಕ್ಷಿ ಇದೆ. ಮತ್ತೊಮ್ಮೆ ರೈತರು ಒಗ್ಗಟ್ಟಾಗಿ ನಿಂತರೆ ಕೇಂದ್ರದ ಮೋದಿ ಸರ್ಕಾರವನ್ನು ಸಹ ಇಳಿಸುವುದು ಕಷ್ಟವಲ್ಲ, ಮತದಾನಕ್ಕೆ ಮೊದಲು ತಮಗಾಗಿರುವ ಸಂಕಷ್ಟದ ಬಗ್ಗೆ ಮತ್ತು ಮೋದಿ ಸರ್ಕಾರದಿಂದ ಯಾವುದೇ ಪ್ರಯೋಜನವೂ ಸಿಗದ ಕುರಿತು ರೈತರು ಒಮ್ಮೆ ಯೋಚಿಸಬೇಕು’ ಎಂದು ಅವರು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT