ಸೋಮವಾರ, ಆಗಸ್ಟ್ 15, 2022
23 °C

ಲಾಕ್‌ಡೌನ್‌ ಸಡಿಲ; ನಿರಾಳರಾದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸಂಪೂರ್ಣ ಲಾಕ್‌ಡೌನ್‌ನಿಂದ ಮನೆಯಲ್ಲಿ ಬಂಧನವಾಗಿದ್ದ ಜನ ಸೋಮವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಿರಾಳರಾಗಿ ಹೊರಗೆ ಓಡಾಡಿದರು.

ರಾಜ್ಯ ಸರ್ಕಾರ ಘೋಷಿಸಿರುವ ಹೊಸ ಲಾಕ್‌ಡೌನ್‌ ನಿಯಮಗಳು ಸೋಮವಾರದಿಂದ ಜಾರಿಗೆ ಬಂದಿದೆ. ಅದರನ್ವಯ ಬೆಳಿಗ್ಗೆ ಆರರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಯಮಗಳು ಗುರುವಾರದ ವರೆಗೆ ಜಾರಿಯಲ್ಲಿರಲಿವೆ.

ಇಷ್ಟು ದಿನ ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ವಾರದಲ್ಲಿ ಎರಡು ದಿನವಷ್ಟೇ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ನಾಲ್ಕು ದಿನಗಳೊಂದಿಗೆ ಸಮಯ ಕೂಡ ವಿಸ್ತರಿಸಿರುವುದರಿಂದ ಸೋಮವಾರ ಜನ ಯಾವುದೇ ಅವಸರವಿಲ್ಲದೆ ಸಮಾಧಾನದಿಂದ ಓಡಾಡಿ, ಅಗತ್ಯ ವಸ್ತು ಖರೀದಿಸಿದರು.

ತರಕಾರಿ, ಹಣ್ಣಿನ ಮಾರುಕಟ್ಟೆ, ದಿನಸಿ ಅಂಗಡಿಗಳ ಎದುರು ಹೆಚ್ಚಿನ ಜನಸಂದಣಿ ಕಂಡು ಬರಲಿಲ್ಲ. ಕೆಲವರು ಬೆಳಿಗ್ಗೆಯೇ ಬಂದು ವಸ್ತುಗಳನ್ನು ಖರೀದಿಸಿ, ತೆರಳಿದರೆ ಕೆಲವರು 12 ಗಂಟೆ ನಂತರ ಬಂದು ಖರೀದಿ ಮಾಡಿ ಹಿಂತಿರುಗಿದರು. ಯಾರಲ್ಲೂ ಅವಸರ ಕಂಡು ಬರಲಿಲ್ಲ. ವ್ಯಾಪಾರಿಗಳು ಸಹ ಹಿಂದಿಗಿಂತ ನಿರಾಳರಾಗಿದ್ದರು. ತಾಳ್ಮೆಯಿಂದ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವುದು ಕಂಡು ಬಂತು.

ಅನುಮತಿ ಇರದಿದ್ದರೂ ಬಾಗಿಲು ತೆರೆದಿದ್ದ ಸಲೂನ್‌, ಬೀಡಾ ಅಂಗಡಿ, ಮೊಬೈಲ್‌, ವಾಹನ ಬಿಡಿಭಾಗಗಳು, ಪಂಪ್‌ಸೆಟ್‌ ಮೋಟಾರ್‌ ಮಳಿಗೆಗಳನ್ನು ಪೊಲೀಸರು ಮುಚ್ಚಿಸಿದರು. ‘ಬಿತ್ತನೆ ಚಟುವಟಿಕೆ ಚುರುಕುಗೊಂಡಿದೆ. ಪಂಪ್‌ಸೆಟ್‌ ಮೋಟಾರ್‌ ದುರಸ್ತಿಗೊಳಿಸುವ ಮಳಿಗೆಗಳನ್ನು ಮುಚ್ಚಿಸಿದರೆ ರೈತರಿಗೆ ತೊಂದರೆಯಾಗುತ್ತದೆ. ಅವುಗಳನ್ನು ಬಂದ್‌ ಮಾಡಿಸಬಾರದು’ ರೈತರು ಮನವಿ ಮಾಡಿದರೂ ಪೊಲಿಸರು ಕಿವಿಗೊಡಲಿಲ್ಲ.

ಬೀಡಾ ಅಂಗಡಿ, ಸಲೂನ್‌, ಮೊಬೈಲ್‌ ಮಳಿಗೆ ಮಾಲೀಕರಿಗೆ ಎಚ್ಚರಿಕೆ ನೀಡಿ ಅವುಗಳನ್ನು ಮುಚ್ಚಿಸಿದರು. ‘ಕೆಲವರಿಗೆ ಮಾಹಿತಿ ಇಲ್ಲದ ಕಾರಣದಿಂದ ಮಳಿಗೆಗಳನ್ನು ತೆರೆದಿದ್ದರು. ಅವುಗಳನ್ನು ಮುಚ್ಚಿಸಲಾಗಿದೆ. ಮುಂದಿನ ಆದೇಶದ ವರೆಗೆ ತೆರೆಯದಂತೆ ಸೂಚಿಸಲಾಗಿದೆ’ ಎಂದು ನಗರಸಭೆ ಆರೋಗ್ಯ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ತಿಳಿಸಿದ್ದಾರೆ.

ಹೋಟೆಲ್‌ಗಳಲ್ಲಿ ಎಂದಿನಂತೆ ಪಾರ್ಸೆಲ್‌ ಸೇವೆ ಇತ್ತು. ವಾಹನಗಳ ಸರ್ವೀಸ್‌ ಸೆಂಟರ್‌ಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಿದವು. ಮಧ್ಯಾಹ್ನ ಎರಡು ಗಂಟೆ ಆಗುತ್ತಿದ್ದಂತೆ ಪೊಲೀಸರು ಎಲ್ಲ ರೀತಿಯ ಮಳಿಗೆಗಳನ್ನು ಮುಚ್ಚಿಸಿದರು. ಹೊರಗೆ ಓಡಾಡುತ್ತಿದ್ದವರನ್ನು ತಡೆದು, ಕಳುಹಿಸಿದರು. ಬಳಿಕ ನಗರ ಸ್ತಬ್ಧಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು