ಬುಧವಾರ, ಏಪ್ರಿಲ್ 21, 2021
23 °C
ಎಐಡಿಎಸ್ಒ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ

ನಿರುದ್ಯೋಗ, ಮತಾಂಧತೆಯಿಂದ ಜನರಿಗೆ ಹಿಂಸೆ: ಡಾ.ಪ್ರಮೋದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ‘ದೇಶದಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ, ಮತಾಂಧತೆ ಹೆಮ್ಮರವಾಗಿ ಬೆಳೆದು ಜನರನ್ನು ಇನ್ನಿಲ್ಲದಂತೆ ಹಿಂಸಿಸುತ್ತಿವೆ’ ಎಂದು ಎಐಡಿಎಸ್ಒ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ.ಪ್ರಮೋದ್ ಹೇಳಿದರು.

ನೇತಾಜಿ ಸುಭಾಷಚಂದ್ರ ಬೋಸ್‌ ಅವರ 125ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶ ಅಭಿವೃದ್ದಿಯ ಕಡೆ ಸಾಗುವಲ್ಲಿ ರೈತರು, ಕಾರ್ಮಿಕರ ಪಾತ್ರ ಬಹು ದೊಡ್ಡದಿದೆ. ಆದರೆ, ಅಂತಹವರನ್ನೇ ಇಂದು ಕಡೆಗಣಿಸಲಾಗುತ್ತಿದೆ. ಈ ಸತ್ಯ ಎಲ್ಲರಿಗೂ ತಿಳಿಯಬೇಕು. ಆ ಮೂಲಕ ಇದರ ವಿರುದ್ಧ ಹೋರಾಟವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ’ ಎಂದು ತಿಳಿಸಿದರು.

‘ಹಸಿವು ಎಷ್ಟರ ಮಟ್ಟಿಗೆ ನಮ್ಮ ದೇಶವನ್ನು ಕಾಡುತ್ತಿದೆ ಎಂದರೆ ವಿಶ್ವದ ಹಸಿವಿನ ಸೂಚ್ಯಂಕವನ್ನು ನೋಡುವುದಾದರೆ, 120 ರಾಷ್ಟ್ರಗಳ ಸಾಲಿನಲ್ಲಿ ಭಾರತ 109ನೇ ಸ್ಥಾನದಲ್ಲಿದೆ. ಹಾಗೆಯೇ ಸ್ವತಂತ್ರ ಭಾರತದಲ್ಲಿ ಇಂದಿಗೂ ಪ್ರತಿದಿನ 4,000ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಅಸು ನೀಗುತ್ತಿದ್ದಾರೆ. ಶೇ 60ಕ್ಕೂ ಹೆಚ್ಚು ಮಹಿಳೆಯರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ. ಶಿಕ್ಷಣದ ವ್ಯಾಪಾರೀಕರಣದಿಂದ ಶೇ 85ರಷ್ಟು ಯುವ ಜನರು ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ’ ಎಂದು ವಿವರಿಸಿದರು.

‘70 ಕೋಟಿ ಜನರ ದಿನದ ಆದಾಯ ದಿನಕ್ಕೆ ₹40 ರೂಪಾಯಿಯಷ್ಟಿದೆ. ಇದು ಇಂದಿನ ಭಾರತದ ಸ್ಥಿತಿಯಾಗಿದೆ. ಇದಕ್ಕೆಲ್ಲಾ ಕಾರಣ ಬಂಡವಾಳಶಾಹಿ ವ್ಯವಸ್ಥೆ. ಕೇವಲ ಶೇ 10ರಷ್ಟು ಭಾರತೀಯ ಶ್ರೀಮಂತರು ದೇಶದ ಒಟ್ಟಾರೆ ಶೇ 76ರಷ್ಟು ಸಂಪತ್ತಿನ ಮೇಲೆ ಒಡೆತನ ಸಾಧಿಸಿದ್ದಾರೆ. ಈ ಪರಿಸ್ಥಿತಿಯ ಕಾರಣದಿಂದ ದೇಶದ ಅಭಿವೃದ್ಧಿ ಸಮಗ್ರ ಅಭಿವೃದ್ಧಿ ಆಗುತ್ತಿಲ್ಲ’ ಎಂದರು.

‘ನೇತಾಜಿಯವರು ಭಾರತವು ಸಮಾಜವಾದಿ ರಾಷ್ಟ್ರವಾಗಬೇಕು ಎಂಬ ಕನಸ್ಸಿನೊಂದಿಗೆ ಹೋರಾಟ ಆರಂಭಿಸಿದ್ದರು. ಸ್ವಾಮಿ ವಿವಾಕಾನಂದರ ಚಿಂತನೆಗಳನ್ನು ಒಪ್ಪುವುದರೊಂದಿಗೆ ಧರ್ಮಾತೀತವಾಗಿ ಹೋರಾಟ ಕಟ್ಟಿದ ಮಹಾನ್‌ ಚೇತನ ಅವರು’ ಎಂದು ಸ್ಮರಿಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ‘ನೇತಾಜಿಯವರು ಇಂದಿನ ಯುವ ಜನತೆಗೆ ಆದರ್ಶವಾಗಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗಬೇಕು. ಸಮ ಸಮಾಜವನ್ನು ಕಟ್ಟುವುದರಲ್ಲಿ ನೇತಾಜಿಯವರ ಪಾತ್ರ ಬಹು ದೊಡ್ಡದಿದೆ. ಅವರ ಚಿಂತನೆಗಳು ಯುವಕರಲ್ಲಿ ಒಡಮೂಡಬೇಕು‍’ ಎಂದು ಹೇಳಿದರು. ಸಂಘಟನೆಯ ಎರ್ರಿಸ್ವಾಮಿ, ರವಿಕಿರಣ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು