ಹರಪನಹಳ್ಳಿ: ‘ಮಳೆಯಿಲ್ಲದೇ ಬೆಳೆಗಳು ಸಂಪೂರ್ಣ ಒಣಗಿದ್ದು ಸರ್ಕಾರ ಎಲ್ಲ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಹರಪನಹಳ್ಳಿ ತಾಲ್ಲೂಕು ರೈತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಮಿನಿವಿಧಾನ ಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
‘ಪ್ರಸಕ್ತ ವರ್ಷ ಬರಗಾಲ ಇರುವುದರಿಂದ ಎಲ್ಲ ಬೆಳೆಗಳಿಗೂ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಖಂಡ ಇದ್ಲಿ ರಾಮಪ್ಪ, ‘2017-18ನೇ ಸಾಲಿನಿಂದ ಫಸಲ್ ಭಿಮಾ ಯೋಜನೆಯಡಿ ಕಂತು ಪಾವತಿಸಿರುವ ಹಲವು ರೈತರಿಗೆ ವಿಮೆ ಹಣ ಪಾವತಿಯಾಗಿಲ್ಲ. ಇದರಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿದ್ದು ತನಿಖೆಗೆ ಒಳಪಡಿಸಬೇಕು. ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು ತ್ವರಿತವಾಗಿ ಚಾಲನೆ ನೀಡಬೇಕು. ಶಿಥಿಲಗೊಂಡಿರುವ ಉಪ ನೋಂದಣಾಧಿಕಾರಿ ಕಚೇರಿಯನ್ನು ಶೀಘ್ರವೇ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ವಿವಿಧ ಸಂಘಟನೆ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಕಲ್ಲಹಳ್ಳಿ ಗೋಣೆಪ್ಪ, ಎಸ್.ಪರಶುರಾಮ್, ಕೆ.ರಾಜಪ್ಪ, ಹುಲಿಕಟ್ಟೆ ರಹಮತ್ ವುಲ್ಲಾ, ಮೈಲಪ್ಪ, ಬಾಲಗಂಗಾಧರ್, ಎ.ಡಿ.ದ್ವಾರಕೇಶ್ ಇದ್ದರು.
ಹರಪನಹಳ್ಳಿಯಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟಿಸಿದ ರೈತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು