ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಕಡತಗಳು ನಾಪತ್ತೆ: ಆಯುಕ್ತರ ವರದಿ ಬಹುತೇಕ ಸಿದ್ಧ– ಎಫ್‌ಐಆರ್‌ ನಿಶ್ಚಿತ?

ನಗರಸಭೆಯಲ್ಲಿ ಕಡತ ನಾಪತ್ತೆ ಪ್ರಕರಣ: ತಪ್ಪಿತಸ್ಥರ ಅಮಾನತಿಗೆ ಆಗ್ರಹಿಸಿ ಕರಾವೆ ಪ್ರತಿಭಟನೆ
Published 24 ಆಗಸ್ಟ್ 2023, 15:56 IST
Last Updated 24 ಆಗಸ್ಟ್ 2023, 15:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹೊಸಪೇಟೆ ನಗರಸಭೆಯಲ್ಲಿ ಕೆಲವು ಮಹತ್ವದ ಕಡತಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರಿಂದ ವರದಿ ಕೇಳಿದ್ದೇನೆ. ಬಹುತೇಕ ಶುಕ್ರವಾರದೊಳಗೆಯೇ ವರದಿ ಬರಲಿದೆ. ತಕ್ಷಣ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು‘ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ತಿಳಿಸಿದರು.

ನಗರಸಭೆಯಿಂದ ಕಡತಗಳ ನಾಪತ್ತೆಯಾಗಿಲ್ಲ, ಮುಖ್ಯಮಂತ್ರಿ ಅವರಿಗೆ ನಕಲಿ ಸಹಿಯೊಂದಿಗೆ ನಕಲಿ ಪತ್ರ ಬರೆದವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನಗರಸಭೆಯ ಸದಸ್ಯರು ಗುರುವಾರ ಠಾಣೆಗೆ ದೂರು ನೀಡಿದ ಬೆನ್ನಿಗೇ ಜಿಲ್ಲಾಧಿಕಾರಿ ಅವರಿಂದ ಈ ಎಚ್ಚರಿಕೆಯ ಸಂದೇಶವೂ ಹೊರಬಿದ್ದಿದೆ.

‘ಒಂದು ಕಡತವೂ ಆಚೀಚೆ ಆಗಬಾರದು. ಒಂದು ವೇಳೆ ಅಂತಹ ಸಂಶಯ ಬಂದ ತಕ್ಷಣ ಪೊಲೀಸ್‌ ದೂರು ದಾಖಲಿಸಬೇಕು. ನಗರಸಭೆಯಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ವಿವರವಾದ ವರದಿ ಕೇಳಿದ್ದೇನೆ. ವರದಿ ಸಿದ್ಧವಾಗಿರುವ ಮಾಹಿತಿ ಇದೆ. ಶುಕ್ರವಾರದೊಳಗೆ ವರದಿ ನನ್ನ ಕೈಸೇರಲಿದೆ. ಬಳಿಕ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ’ ಎಂದು ಜಿಲ್ಲಾಧಿಕಾರಿ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ತುರ್ತು ಪತ್ರಿಕಾಗೋಷ್ಠಿ ರದ್ದು: ನಗರಸಭೆಯ ಅಧ್ಯಕ್ಷರು, ಆಯುಕ್ತರು ಗುರುವಾರ ಸಂಜೆ 4 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ 4.30 ಕಳೆದರೂ ಅಗತ್ಯದ ದಾಖಲೆಗಳನ್ನು, ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಸೋತಿದ್ದರು. ಎಲ್ಲೆಡೆ ಅವಸರ, ಗಡಿಬಿಡಿ ಕಾಣಿಸುತ್ತಿತ್ತು. ಹೀಗಾಗಿ ಪತ್ರಿಕಾಗೋಷ್ಠಿಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಗುವುದು ಎಂದು ನಗರಸಭೆಯ ಉಪಾಧ್ಯಕ್ಷ ರೂಪೇಶ್‌ ಕುಮಾರ್ ಮಾಧ್ಯಮದವರಿಗೆ ತಿಳಿಸಿದರು.

ಪ್ರತಿಭಟನೆ: ಈ ಮಧ್ಯೆ, ತಪ್ಪಿತಸ್ಥ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ ನಡೆಯಿತು  ಹಾಗೂ ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕರಾವೇ ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ‘ನಗರಸಭೆಯಲ್ಲಿ 13 ಕಡತಗಳು ಮಾಯವಾಗಿವೆ. ಆಯುಕ್ತರು  ಮೊದಲು ಕಡತ ನಾಪತ್ತೆಯಾಗಿದ್ದನ್ನು ಒಪ್ಪಿಕೊಂಡು ಈಗ ಇಲ್ಲ ಎಂದು ಹೇಳುತ್ತಿದ್ದಾರೆ. ಅನುಭವಿ ಸಿಬ್ಬಂದಿಯನ್ನು ಕಡತಗಳು ಇರುವ ಕೊಠಡಿಗೆ ನಿಯೋಜಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಕೆಲವು ಸಿ.ಸಿ.ಟಿ.ವಿ ಕ್ಯಾಮೆರಾಗಳು ಬಂದ್ ಆಗಿದ್ದು, ರಾತ್ರೋರಾತ್ರಿ ಕಣ್ಮರೆಯಾಗಿರುವ ಕಡತಗಳನ್ನು ಮತ್ತೆ ತಂದು ಇಟ್ಟಿರುವ ಸಾಧ್ಯತೆಯೂ ಇದೆ. ಇದೆಲ್ಲದರ ಬಗ್ಗೆ ಸಿಐಡಿ ಅಥವಾ ಲೋಕಾಯುಕ್ತ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

Highlights - ನಾಪತ್ರೆಯಾದ ಕಡತ ರಾತ್ರೋರಾತ್ರಿ ತಂದು ಇಟ್ಟಿರುವ ಶಂಕೆ ಸಿಬ್ಬಂದಿ, ಅಧಿಕಾರಿಗಳ ತಪ್ಪಿಲ್ಲ ಎನ್ನುತ್ತಿರುವ ನಗರಸಭೆ ಸದಸ್ಯರು ಕಡತ ಕಾಣಿಸದಿದ್ದರೆ ನಮಗೆ ತಿಳಿಸಿ ಎಂದ ಕರಾವೇ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT