ಸೋಮವಾರ, ಜೂನ್ 27, 2022
24 °C
ಶೇ 9ಕ್ಕೆ ತಗ್ಗಿದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ; ವೆಂಟಿಲೇಟರ್‌, ಐಸಿಯು ಬೆಡ್‌ ಖಾಲಿ

PV Web Exclusive: ಬಳ್ಳಾರಿ –ವಿಜಯನಗರ ಜಿಲ್ಲೆಯಲ್ಲಿ ಒಂದಂಕ್ಕಿಗಿಳಿದ ಸಾವು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಕೋವಿಡ್‌ನಿಂದ ಮರಣ ಹೊಂದುವವರ ಸಂಖ್ಯೆ ಒಂದಂಕ್ಕಿಗೆ ಇಳಿದಿದೆ. ಇಷ್ಟೇ ಅಲ್ಲ, ಸೋಂಕು ಹರಡುವುದು ವ್ಯಾಪಕವಾಗಿ ತಗ್ಗಿದೆ.

ಸದ್ಯ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ 9ಕ್ಕೆ ತಗ್ಗಿದೆ. ಈ ಹಿಂದೆ ಜಿಲ್ಲೆಯಾದ್ಯಂತ ವೆಂಟಿಲೇಟರ್‌, ಐಸಿಯು ಬೇಡಿಕೆಗಳಿಗೆ ಎದುರಾಗಿದ್ದ ಕೊರತೆ ಈಗ ನೀಗಿದೆ. ರೋಗಿಗಳ ಸಂಖ್ಯೆ ತಗ್ಗಿರುವುದರಿಂದ ಸಹಜವಾಗಿಯೇ ವೆಂಟಿಲೇಟರ್‌, ಐಸಿಯು ಬೆಡ್‌ ಖಾಲಿ ಉಳಿಯುತ್ತಿವೆ.

ಈ ಹಿಂದೆ ದಿನಕ್ಕೆ ಸರಾಸರಿ 20ರಿಂದ 25 ಜನ ಕೋವಿಡ್‌ನಿಂದ ಮರಣ ಹೊಂದುತ್ತಿದ್ದರು. ಈಗ ಅದು ಸರಾಸರಿ 7ರಿಂದ 8ಕ್ಕೆ ಬಂದು ನಿಂತಿದೆ. ಆರೋಗ್ಯ ಇಲಾಖೆಯ ಪ್ರಕಾರ, ಉಸಿರಾಟ ಸೇರಿದಂತೆ ಇತರೆ ತೊಂದರೆಯಿಂದ ಬಳಲುತ್ತಿರುವವರೇ ಈಗಲೂ ಸಾವನ್ನಪ್ಪುತ್ತಿದ್ದಾರೆ. ಸೋಂಕು ದೃಢಪಟ್ಟ ನಂತರ ಹೊಸದಾಗಿ ಆಸ್ಪತ್ರೆಗೆ ಸೇರುವವರ ಮರಣ ಪ್ರಮಾಣ ತೀರ ಕಡಿಮೆ ಇದೆ. ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವವರೇ ಹೆಚ್ಚಾಗಿ ನಿಧನ ಹೊಂದುತ್ತಿದ್ದಾರೆ.

ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 94,211 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇನ್ನೂ ಕೆಲವೇ ದಿನಗಳಲ್ಲಿ ಈ ಸಂಖ್ಯೆ ಲಕ್ಷ ದಾಟಲಿದೆ. ಈಗಾಗಲೇ 87,784 ಜನ ಗುಣಮುಖರಾಗಿದ್ದಾರೆ. ಗುಣಮುಖರಾಗುವವರ ಸಂಖ್ಯೆಯೂ ಬಹಳ ಹೆಚ್ಚಿರುವುದರಿಂದ ಜನರಲ್ಲಿ ಧೈರ್ಯ ಮೂಡಲು ಪ್ರಮುಖ ಕಾರಣವಾಗಿದೆ.

ಜಿಲ್ಲಾಡಳಿತವು ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿ, ಬಿಗಿ ಕ್ರಮಗಳನ್ನು ಕೈಗೊಂಡಿರುವುದು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸರ್ವೇ ನಡೆಸಿ, ಆರಂಭಿಕ ಹಂತದಲ್ಲೇ ಪ್ರಕರಣಗಳನ್ನು ಪತ್ತೆ ಹಚ್ಚಿರುವುದು ಫಲ ಕೊಟ್ಟಂತೆ ಕಾಣಿಸುತ್ತಿದೆ. ಸಾರ್ವಜನಿಕರು ಮಾಸ್ಕ್‌ ಬಳಸಿ, ವ್ಯವಹರಿಸುತ್ತಿರುವುದು ಕೂಡ ಉತ್ತಮ ಬೆಳವಣಿಗೆ.

‘ಜಿಲ್ಲಾಡಳಿತ, ಸರ್ಕಾರ ಒಂದುಮಟ್ಟಿಗೆ ಕೆಲಸ ನಿರ್ವಹಿಸಬಹುದು. ಆದರೆ, ಅಂತಿಮ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಒಂದುವೇಳೆ ಲಾಕ್‌ಡೌನ್‌ ಸಡಿಲಗೊಳಿಸಿದರೂ ಕೂಡ ಜನ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಿನಿಂದ ಪಾಲಿಸಬೇಕು. ಒಂದುವೇಳೆ ಮೈಮರೆತರೆ ಎರಡನೇ ಅಲೆಯ ಸಂದರ್ಭದಲ್ಲಿ ಆದ ಸಾವು–ನೋವುಗಳು ಮರುಕಳಿಸಿದರೂ ಆಶ್ಚರ್ಯ ಪಡಬೇಕಿಲ್ಲ’ ಎಂದು ಎಚ್ಚರಿಸುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಎಚ್‌.ಎಲ್‌. ಜನಾರ್ದನ.

ಜಿಲ್ಲಾಡಳಿತ ಕೋವಿಡ್‌ ರೋಗಿಗಳಿಗೆ ಕಲ್ಪಿಸಿರುವ ಹೋಂ ಐಸೋಲೇಷನ್‌ ವ್ಯವಸ್ಥೆ ಸಂಪೂರ್ಣವಾಗಿ ತೆಗೆಯಬೇಕು. ಹೀಗೆ ಮಾಡಿದರೆ ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ತಗ್ಗಬಹುದು ಎನ್ನುತ್ತಾರೆ ಸಾರ್ವಜನಿಕರು. ‘ಹೋಂ ಐಸೋಲೇಷನ್‌ನಲ್ಲಿರುವವರ ಪೈಕಿ ಬಹಳಷ್ಟು ಜನ ಬೇಕಾಬಿಟ್ಟಿ ಹೊರಗೆ ಓಡಾಡುತ್ತಿದ್ದಾರೆ. ಅದರಿಂದಾಗಿಯೇ ಸೋಂಕು ಹೆಚ್ಚಾಗಿ ಹರಡಿದೆ. ಯಾರಿಗೇ ಸೋಂಕು ಬಂದರೂ ಅವರಿಗೆ ಕೋವಿಡ್‌ ಆರೈಕೆ ಕೇಂದ್ರಕ್ಕೆ ಕಳುಹಿಸಿ, ಚಿಕಿತ್ಸೆ ಕೊಡಬೇಕು’ ಎಂದು ಬಸವರಾಜ, ಶಿವರಾಜ, ಕಾರ್ತಿಕ್ ಆಗ್ರಹಿಸಿದರು.

ಈಗಲೂ ಕಾಡುತ್ತಿದೆ ಲಸಿಕೆ:

ಜಿಲ್ಲೆಯಲ್ಲಿ ಈಗಲೂ ಲಸಿಕೆ ಕೊರತೆ ಕಾಡುತ್ತಿದೆ. ಜನ ಲಸಿಕೆ ಕೇಂದ್ರಗಳಿಗೆ ಹೋಗಿ ವಾಪಸ್‌ ಆಗುತ್ತಿದ್ದಾರೆ. ಅನೇಕರಿಗೆ ಈಗಲೂ ಎರಡನೇ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ.

ಅವಳಿ ಜಿಲ್ಲೆಗಳಲ್ಲಿ ಇದುವರೆಗೆ 5,96,789 ಜನ ಲಸಿಕೆ ಪಡೆದಿದ್ದಾರೆ. ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದ ಜಿಲ್ಲೆಗಳಲ್ಲಿ ಅವಿಭಜಿತ ಬಳ್ಳಾರಿ ನಾಲ್ಕನೇ ಸ್ಥಾನದಲ್ಲಿದೆ. ಮೈಸೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಬೆಳಗಾವಿ ದ್ವಿತೀಯ, ತುಮಕೂರು ಮೂರನೇ ಸ್ಥಾನದಲ್ಲಿದೆ.


Caption

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು