ಬುಧವಾರ, ಅಕ್ಟೋಬರ್ 20, 2021
28 °C

Pv Web Exclusive: ರೈಲ್ವೆ ಇಲಾಖೆಯಿಂದ ರಿಯಾಯಿತಿ ಮೊಟಕು; ಜೇಬಿಗೆ ಕತ್ತರಿ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರೈಲ್ವೆ ಇಲಾಖೆಯು ಕೆಲವು ವಿಶೇಷ ವರ್ಗಕ್ಕೆ ನೀಡಿದ್ದ ರಿಯಾಯಿತಿ ಸೌಲಭ್ಯ ತೆಗೆದು ಹಾಕಿರುವುದರಿಂದ ಆ ವರ್ಗದವರ ಜೇಬಿಗೆ ಈಗ ಕತ್ತರಿ ಬೀಳುತ್ತಿದೆ.

ಲಾಕ್‌ಡೌನ್‌ ತೆರವಾದ ನಂತರ ರೈಲ್ವೆ ಇಲಾಖೆಯು ಬಹುತೇಕ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸುತ್ತಿದೆ. ಈ ಹಿಂದೆ ಸಂಚರಿಸುತ್ತಿದ್ದ ರೈಲುಗಳು ಪುನರಾರಂಭಗೊಂಡಿವೆ. ಆದರೆ, ಎಲ್ಲ ರೈಲುಗಳಿಗೂ ‘ಕೋವಿಡ್‌ ವಿಶೇಷ’ ರೈಲು ಎಂದು ಹೆಸರಿಡಲಾಗಿದೆ.

ಆರಂಭದಲ್ಲಿ ಕೋವಿಡ್‌ ವಿಶೇಷ ರೈಲುಗಳಲ್ಲಿ ಸೀಮಿತ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಗ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲಾಗಿತ್ತು. ಈಗ ನೂರಕ್ಕೆ ನೂರು ಪ್ರಯಾಣಿಕರೊಂದಿಗೆ ಎಲ್ಲ ರೈಲುಗಳು ಸಂಚರಿಸುತ್ತಿವೆ. ಹೀಗಿದ್ದರೂ ದರ ಕಡಿಮೆಗೊಳಿಸಿಲ್ಲ.

ಅಂಗವಿಕಲರು, ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿ ಸೌಲಭ್ಯವೂ ಮೊಟಕುಗೊಳಿಸಿದೆ. ಇದರಿಂದಾಗಿ ಸಾರ್ವಜನಿಕರು ಈ ಹಿಂದಿನ ದರಕ್ಕಿಂತ ಹೆಚ್ಚಿನ ಹಣ ತೆತ್ತು ಪ್ರಯಾಣಿಸುತ್ತಿದ್ದಾರೆ. ಇನ್ನೊಂದೆಡೆ ರಿಯಾಯಿತಿ ನೀಡದೆ ಇರುವುದರಿಂದ ಅಂಗವಿಕಲರು, ಹಿರಿಯ ನಾಗರಿಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ.

ಕೋವಿಡ್‌ ಲಾಕ್‌ಡೌನ್‌ನಿಂದ ಜನ ಉದ್ಯೋಗ ಕಳೆದುಕೊಂಡು, ವಹಿವಾಟು ನಡೆಸಲಾಗದೆ ಅತಂತ್ರರಾಗಿದ್ದಾರೆ. ಬಡವರು ಮತ್ತಷ್ಟು ಬಡವರಾದರೆ, ಮಧ್ಯಮ ವರ್ಗದವರು ಬಡವರಾಗಿ ಬದಲಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಉದ್ಯೋಗ ಅವಕಾಶಗಳು ಇಲ್ಲ. ನಿರುದ್ಯೋಗಿ ಯುವಕರು ಪರದಾಡು‌ತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರೈಲ್ವೆ ಇಲಾಖೆಯು ಸಂವೇದನೆ ಕಳೆದುಕೊಂಡಂತೆ ವರ್ತಿಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ ಸಾರ್ವಜನಿಕರು.

‘ಲಾಕ್‌ಡೌನ್‌ನಿಂದ ಬಡವರು, ಮಧ್ಯಮ ವರ್ಗದವರ ಮೇಲೆ ಗಂಭೀರ ಪರಿಣಾಮ ಆಗಿದೆ. ಅವರ ಭವಿಷ್ಯ ಮಂಕಾಗಿದೆ. ವ್ಯಾಪಾರ ವಹಿವಾಟು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಈಗಷ್ಟೇ ಶಿಕ್ಷಣ ಮುಗಿಸಿ ಹೊರಬಂದವರಿಗೆ ಉದ್ಯೋಗ ಅವಕಾಶ ಕಡಿಮೆ. ಪರಿಸ್ಥಿತಿ ಹೀಗಿರುವಾಗ ರೈಲ್ವೆ ಇಲಾಖೆಯು ರಿಯಾಯಿತಿ ಸೌಲಭ್ಯ ಮೊಟಕುಗೊಳಿಸಿ, ಪ್ರಯಾಣ ದರ ಹೆಚ್ಚಿಸಿರುವುದು ಜನವಿರೋಧಿ ಕ್ರಮ’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಟೀಕಿಸಿದ್ದಾರೆ.

‘ಪ್ರಯಾಣಕ್ಕೆ ಕಡಿಮೆ ವೆಚ್ಚ ತಗಲುವುದರಿಂದ ಹೆಚ್ಚಿನವರು ರೈಲುಗಳನ್ನೇ ಅವಲಂಬಿಸಿದ್ದಾರೆ. ಅದನ್ನು ಸಹ ಸಾಮಾನ್ಯ ಜನರಿಂದ ದೂರ ಮಾಡುತ್ತಿರುವುದು ಎಷ್ಟು ಸೂಕ್ತ? ಈಗಲೂ ಹೆಚ್ಚಿನವರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಲು ಆಗುವುದಿಲ್ಲ. ಸಾಮಾನ್ಯ ದರ್ಜೆ ಪ್ರಯಾಣಕ್ಕೂ ಟಿಕೆಟ್‌ ಕಾಯ್ದಿರಿಸಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ತಂದಿರುವುದು ಸರಿಯಲ್ಲ. ಈ ಹಿಂದಿನಂತೆಯೇ ಕೌಂಟರ್‌ಗಳಲ್ಲಿ ಟಿಕೆಟ್‌ ಕೊಡಬೇಕು. ಹೆಚ್ಚಿಸಿರುವ ದರ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ರಿಯಾಯಿತಿ ಸೌಲಭ್ಯ ಮೊಟಕುಗೊಳಿಸಿ ಆದೇಶ ಹೊರಡಿಸಿರುವುದು ರೈಲ್ವೆ ಸಚಿವಾಲಯ. ಅದು ತೆಗೆದುಕೊಂಡ ನಿರ್ಧಾರವನ್ನು ನಾವು ಪಾಲಿಸುತ್ತಿದ್ದೇವೆ. ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಈಗಾಗಲೇ ಅನೇಕ ಸಂಘಟನೆಗಳ ಮುಖಂಡರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದಾರೆ' ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ರೈಲು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು