ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಗೆ ಲವಲವಿಕೆ ತಂದ ಮಳೆ

ಐದು ನಿಮಿಷದ ಮಳೆ * ಚರಂಡಿಯಲ್ಲಿ ಹೂಳು ತುಂಬಿ ಅವಾಂತರ
Published 25 ಜೂನ್ 2023, 14:43 IST
Last Updated 25 ಜೂನ್ 2023, 14:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸ‍ಪೇಟೆ ನಗರದಲ್ಲಿ ಭಾನುವಾರ ಮಧ್ಯಾಹ್ನ ಮಳೆಯಾಗಿದ್ದು,ತಂಪಾದ ವಾತಾವರಣ ನಿರ್ಮಾಣವಾಯಿತು. ಆದರೆ ಐದು ನಿಮಿಷದ ಮಳೆಗೇ ಚರಂಡಿಯ ಹೂಳಿನಿಂದ ಕೆಸರು ನೀರೆಲ್ಲ ರಸ್ತೆಯಲ್ಲಿ ಹರಿದಾಡಿ ಜನರಿಗೆ ಕಿರಿಕಿರಿ ಉಂಟಾಯಿತು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ಎಲ್ಲೆಡೆ ಮಳೆ ಸುರಿಯಲಿಲ್ಲ. ಬಳ್ಳಾರಿ ರಸ್ತೆ ಜಂಕ್ಷನ್‌ ಹಾಗೂ ಸುತ್ತಮುತ್ತ ಐದು ನಿಮಿಷ ಭರ್ಜರಿ ಮಳೆ ಸುರಿದಾಗ ಜಂಕ್ಷನ್‌ನಲ್ಲಿ ಕೆಸರುಮಯ ಕಪ್ಪುನೀರು ಚರಂಡಿಯಿಂದ ರಭಸವಾಗಿ ಹೊರಬಂತು. ವಾಹನ ಸವಾರರು, ಪಾದಚಾರಿಗಳು ಕೆಸರು ನೀರಲ್ಲೇ ಚಲಿಸಬೇಕಾಯಿತು.

‘ಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ಭರದಿಂದ ಸಾಗಿದೆ. ಮಳೆಗಾಲ ಆರಂಭವಾಗುವುದಕ್ಕೆ ಮೊದಲಾಗಿ ಅದು ಕೊನೆಗೊಳ್ಳಲಿದೆ. ಬಳ್ಳಾರಿ ರಸ್ತೆ ಜಂಕ್ಷನ್‌ನಲ್ಲಿ ಚರಂಡಿಯ ಹೂಳು ತೆಗೆಯುವ ಕೆಲಸ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಸಣ್ಣ ಮಳೆಗೆ ಸಮಸ್ಯೆಯಾಗಿದ’ ಎಂದು ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ನಗರದ ಐದು ಕಡೆಗಳಲ್ಲಿ ನೀರು ನಿಲ್ಲುವ ಸಮಸ್ಯೆ ಇದೆ. ಇಂದಿರಾ ನಗರ, ಗಾಂಧಿ ನಗರ, ಶಾಂತಿ ಸಾಗರ, ಹಂಪಿ ರೋಡ್‌, ಬಳ್ಳಾರಿ ರೋಡ್‌ ಮತ್ತು ಸಿದ್ದಲಿಂಗಪ್ಪ ಸರ್ಕಲ್‌ನಲ್ಲಿ ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ ಇದೆ. ಇಲ್ಲಿ ಸಮಸ್ಯೆ ಬಂದ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳಲು ತಂಡವನ್ನು ಸಜ್ಜಾಗಿ ಇಡಲಾಗಿದೆ. ನಮ್ಮಲ್ಲಿ ಮೂರು ಜೆಸಿಬಿಗಳಿದ್ದು, ಸಾಕಷ್ಟು ಕೆಲಸಗಾರರನ್ನೂ ಸಜ್ಜಾಗಿ ಇಟ್ಟಿದ್ದೇವೆ. ಇಂದಿನ ಮಳೆಯಿಂದ ಆಗಿರುವ ತೊಂದರೆಯನ್ನು ಸಹ ತಕ್ಷಣ ಪರಿಹರಿಸಲಾಗಿದೆ‘ ಎಂದು ಅವರು ತಿಳಿಸಿದರು.

‘ಕಳೆದ ವರ್ಷ ಮಳೆ ಪ್ರಮಾಣ ಅಧಿಕ ಇತ್ತು. ಇಂದಿರಾ ನಗರ, ಗಾಂಧಿನಗರ ಪ್ರದೇಶದಲ್ಲಿ ಸುಮಾರು 40 ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲಿ ಸುಮಾರು 150 ಮನೆಗಳಿಗೆ ನಾವು ಪರಿಹಾರ ನೀಡಿದ್ದೇವೆ. ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯ ಬಗ್ಗೆ ಮಾತುಕತೆ ನಡೆದಿದೆ. ಇದರ ಭಾಗವಾಗಿ ಸಪ್ತಗಿರಿಯಿಂದ ಕನಕದಾಸ ವೃತ್ತದವರೆಗೆ ಮಳೆನೀರು ಕಾಲುವೆ ನಿರ್ಮಿಸಲು ₹ 1.50 ಕೋಟಿ ತೆಗೆದು ಇರಿಸಿದ್ದೇವೆ. ಡಿಎಂಎಫ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದೇವೆ. ಜನವರಿ, ಫೆಬ್ರುವರಿಗೆ ಮೊದಲು ಆ ಕಾಮಗಾರಿ ಕೊನೆಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

ಮನೋಹರ್‌ ನಾಗರಾಜ್‌ ಆಯುಕ್ತರು ಹೊಸಪೇಟೆ ನಗರಸಭೆ
ಮನೋಹರ್‌ ನಾಗರಾಜ್‌ ಆಯುಕ್ತರು ಹೊಸಪೇಟೆ ನಗರಸಭೆ

ನಗರದಲ್ಲಿ ಮಳೆಗಾಲದಲ್ಲಿ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಕೆಲಸಗಾರರ ತಂಡ ಸಜ್ಜಾಗಿದೆ ಮನೋಹರ್ ನಾಗರಾಜ್‌ ಪೌರಾಯುಕ್ತ ಹೊಸಪೇಟೆ ನಗರಸಭೆ

ಶೀಘ್ರ ಸಹಾಯವಾಣಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಯಿಂದ ಆಗಬಹುದಾದ ಹಾನಿಗೆ ತಕ್ಷಣ ಸ್ಪಂದಿಸುವ ಸಲುವಾಗಿ ಶೀಘ್ರ ಸಹಾಯವಾಣಿ ಆರಂಭಿಸಲಾಗುವುದು. ವಾಟ್ಸ್‌ಆ್ಯಪ್‌ ನಂಬರ್ ಅನ್ನು ಸಾರ್ವಜನಿಕರಿಗೆ ಒದಗಿಸಿ ಅವರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯ ಅಂತಹ ಸ್ಥಿತಿ ಇಲ್ಲವಾದ ಕಾರಣ ಅದನ್ನು ಆರಂಭಿಸಿಲ್ಲ ಎಂದು ಪೌರಾಯುಕ್ತ ಮನೋಹರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT