ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಭಾರತಿ ಮಹಾಸ್ವಾಮೀಜಿ ದರ್ಶನ,  ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ

Published 22 ಫೆಬ್ರುವರಿ 2024, 13:49 IST
Last Updated 22 ಫೆಬ್ರುವರಿ 2024, 13:49 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೆನರಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಒಂದೂವರೆ ತಿಂಗಳ ಬಳಿಕ ಮತ್ತೊಮ್ಮೆ ಹಂಪಿ ಪ್ರದೇಶಕ್ಕೆ ಗುರುವಾರ ಬಂದಿದ್ದು, ದೇವರಕೊಳ್ಳದ ಜೋಗಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರು.

ಡಿಸೆಂಬರ್‌ 29ರಂದು ಅನಂತಕುಮಾರ್ ಹೆಗಡೆ ಅವರು ಈ ಭಾಗಕ್ಕೆ ಭೇಟಿ ನೀಡಿದ್ದ ವೇಳೆ ಸಂಕ್ಲಾಪುರದ ಕಚೇರಿಯಲ್ಲಿ ದೇವರಕೊಳ್ಳದ ರಾಜಾಭಾರತಿ ಮಹಾಸ್ವಾಮೀಜಿ ಅವರನ್ನೂ ಭೇಟಿ ಮಾಡಿದ್ದರು. ಆಗ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಗುರುವಾರ ಬೆಳಿಗ್ಗೆಯೇ ಮಠಕ್ಕೆ ಬಂದ ಹೆಗಡೆ ಅವರು ಸುಮಾರು 25 ಜೋಡಿಗೆ ಅಕ್ಷತೆ ಹಾಕಿ ಶುಭ ಕೋರಿದರು ಹಾಗೂ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

‘ಸಾಮೂಹಿಕ ವಿವಾಹ ಎಂಬುದು ಅತ್ಯಂತ ಶ್ರೇಷ್ಠ ಕಾರ್ಯ. ಇದರಿಂದ ಅದೆಷ್ಟೋ ಬಡ ಕುಟುಂಬಗಳಿಗೆ ಪ್ರಯೋಜನವಾಗುತ್ತದೆ. ಮಠವು ಹಲವು ವರ್ಷಗಳಿಂದ ಇಂತಹ ಕೆಲಸ ಮಾಡುತ್ತ ಬಂದಿರುವುದು ಖುಷಿಯ ವಿಚಾರ, ನನಗೂ ಈ ಭಾಗಕ್ಕೆ ಬಂದಾಗಲೆಲ್ಲಾ ಇಲ್ಲಿನ ಮಠಗಳು ಹೊಸ ಚೈತನ್ಯ ನೀಡುತ್ತಿದ್ದು, ಯತಿಗಳು ವಿಶಿಷ್ಟ ರೀತಿಯಲ್ಲಿ  ಪ್ರೇರಣೆಯಾಗುತ್ತಿದ್ದಾರೆ’ ಎಂದರು.

ಹೆಗಡೆ ಅವರ ಭೇಟಿಯ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೆ ಅವರು ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಠದತ್ತ ಧಾವಿಸಿ ಬಂದರು. ಅವರು ಮಧ್ಯಾಹ್ನ ವಾಪಸ್‌ ಹೊರಡುವ ತನಕವೂ ಜನರ ದಂಡೇ ಅಲ್ಲಿ ನೆರೆದಿತ್ತು. ಹೆಗಡೆ ಪರ ಘೋಷಣೆಗಳನ್ನೂ, ಜೈಕಾರಗಳನ್ನು ಕೂಗಿದರು.

ಹೊಸಪೇಟೆಯ ಸ್ಥಳೀಯ ಬಿಜೆಪಿ ನಾಯಕರು ಯಾರೂ ಜತೆಗೆ ಇರಲಿಲ್ಲ. ಚಂದ್ರಕಾತ ಕಾಮತ್, ಕಟಗಿ ರಾಮಕೃಷ್ನ, ಕೆ.ವೀರೇಶ್‌, ಪ್ರದೀಪ್‌ ಸಹಿತ ಹೆಗಡೆ ಅವರ ಕೆಲವು ಅಪ್ತರಷ್ಟೇ ಅಲ್ಲಿದ್ದರು.

ಒಂದೂವರೆ ತಿಂಗಳ ಹಿಂದೆ ಹಂಪಿ, ಆನೆಗುಂದಿಯ ನವಬೃಂದಾವನ, ಅಂಜನಾದ್ರಿ, ಹುಲಿಗಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಹೆಗಡೆ ಅವರು ಆಗಲೂ ಸ್ಥಳೀಯ ನಾಯಕರನ್ನು ದೂರವೇ ಇಟ್ಟು ಏಕಾಂಗಿಯಾಗಿ ದೇವರು, ಶ್ರೀಗಳ ದರ್ಶನ ಪಡೆದಿದ್ದರು. ಇಲ್ಲಿಂದ ತೆರಳಿದ ಬಳಿಕ ಜನವರಿ ತಿಂಗಳ ಉದ್ದಕ್ಕೂ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು, ಉಗ್ರ ಸ್ವರೂಪದ ಭಾಷಣ ಮಾಡಿದ್ದರು. ಮತ್ತೆ ಲೋಕಸಭಾ ಟಿಕೆಟ್ ಪಡೆಯುವ ಸಲುವಾಗಿ ಪ್ರಖರ ಹಿಂದುತ್ವವಾದವನ್ನು ಪ್ರಕಟಪಡಿಸಿ ವರಿಷ್ಠರ ಗಮನ ಸೆಳೆಯುವುದು ಅವರ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಂತೆ, ಭಟ್ಕಳದ ಮಸೀದಿ ಕುರಿತಂತೆ ಆಡಿದ ಮಾತುಗಳು ಭಾರಿ ವಿವಾದ ಸೃಷ್ಟಿಸಿದ ಬಳಿಕ ಅವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಹಿಂದವೀ ಸ್ವರಾಜ್ಯ ಕಲ್ಪನೆಗೆ ವಿಜಯನಗರದ ದೊರೆ ಕೃಷ್ಣದೇವರಾಯ ಪ್ರೇರಣೆಯಾಗಿದ್ದ ಎಂಬ ನಂಬಿಕೆ ಇದ್ದು, ಶಿವಾಜಿ ಮಹಾರಾಜರಿಗೂ ಹಂಪಿಯೇ ಪ್ರೇರಣೆಯಾಗಿತ್ತು. ಹೀಗಾಗಿ ಹಿಂದುತ್ವ ರಾಜಕಾರಣದ ಶಕ್ತಿ ಸಂಚಯಕ್ಕೆ ಪ್ರೇರಣೆಯಾಗುತ್ತಾರೆ ಎಂಬ ಕಾರಣಕ್ಕೆ ಅವರು ಮತ್ತೊಮ್ಮೆ ಹೊಸಪೇಟೆಯತ್ತ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT