ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: 35ಕ್ಕೇರಿತು ಎಳನೀರು ದರ

ಏರುತ್ತಿರುವ ಬಿಸಿಲು: ಬಿಸಿಲ ಬೇಗೆಗೆ ಜನ ಹೈರಾಣ
Published 2 ಏಪ್ರಿಲ್ 2024, 4:31 IST
Last Updated 2 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಮಾರ್ಚ್‌ ಅಂತ್ಯಕ್ಕೆ ಏರುತ್ತಿರುವ ಬಿಸಿಲ ಬೇಗೆಗೆ ಜನತೆ ಹೈರಾಣಾಗಿದ್ದರೆ, ಇತ್ತ ಮಾರುಕಟ್ಟೆಯಲ್ಲಿ ಹುಡುಕಿದರೂ ಸಿಗದ ಎಳನೀರಿನ ಬೆಲೆಯೂ ಏರಿಕೆ ಆಗುತ್ತಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳ ತೋಟಗಳಲ್ಲಿ ಹುಡುಕಿದರೂ ಎಳನೀರು (ತೆಂಗಿನಕಾಯಿ) ಸಿಗುತ್ತಿಲ್ಲ. ಪಕ್ಕದ ತಾಲ್ಲೂಕು, ಜಿಲ್ಲೆಗಳಿಂದ ಬರುವ ತೆಂಗಿನ ಕಾಯಿ ದುಬಾರಿಗೆ ಬೆಲೆಗೆ ಖರೀದಿಸಿ ಜನರಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯಿದೆ.

ಪ್ರಸಕ್ತ ವರ್ಷ ಮಳೆ ಕೊರತೆ ಆಗಿದ್ದರಿಂದ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೊಳವೆ ಬಾವಿಗಳಲ್ಲೂ ಜಲ ಪಾತಾಳಕ್ಕೆ ಕುಸಿದಿದೆ. ಬೆಳಿಗ್ಗೆ 10 ಗಂಟೆಗೆ ನೆತ್ತಿ ಸುಡುವಷ್ಟು ಬಿಸಿಲು ಚುರುಕಾಗಿರುತ್ತದೆ. ಇನ್ನೂ ಮಧ್ಯಾಹ್ನದಿಂದ ದೇಹಕ್ಕೆ ತಾಗುವ ಬಿಸಿಲು ಬೆಂಕಿ ಮುಟ್ಟಿದಷ್ಟು ಅನುಭವಿಸುತ್ತದೆ.

ಮಾರ್ಚ್‌ ಕೊನೆಯ ವಾರಕ್ಕೆ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ತಲುಪಿರುವ ಕಾರಣ ಹೊರಗಡೆ ಬರಲು ಹಿಂದೇಟು ಹಾಕುವ ಜನರು ತಂಪು ಪಾನಿಯಗಳು, ಎಳನೀರು, ಹಣ್ಣುಗಳು ಮೊರೆ ಹೋಗುತ್ತಿದ್ದಾರೆ. ದ್ರಾಕ್ಷಿ, ಕಲ್ಲಂಗಡಿ, ಪಪ್ಪಾಯಿ, ಪೇರಲೆ, ಸೇಬು, ಕಿತ್ತಾಳೆ, ಕರಬೂಜ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಎಳನೀರಿನ ಕೊರತೆ ಎದುರಾಗಿದೆ.

ಪ್ರವಾಸಿ ಮಂದಿರ ವೃತ್ತ, ಹೊಸಪೇಟೆ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುತ್ತಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲೂ ತೆಂಗಿನಕಾಯಿ ಪರಿಸೆಯಂತೆ ಕಂಡುಬರುತ್ತಿದ್ದ ಕೊಟ್ಟೂರು ರಸ್ತೆಯಲ್ಲೀಗ, ಬೆರಳೆಣಿಕೆ ಕಾಯಿಗಳು ಮಾತ್ರ ಕಾಣುತ್ತಿವೆ. ಭಾನುವಾರ ಬೆಳಿಗ್ಗೆ ಬಂದಿದ್ದ 100 ಕಾಯಿಗಳು ಮಧ್ಯಾಹ್ನದ ವೇಳೆಗೆ ಖಾಲಿಯಾಗಿವೆ.

ಪಕ್ಕದ ಹೊಳಲು, ಹಲುವಾಗಲು, ಹರಿಹರ, ಮಲೆಬೆನ್ನೂರು, ಶಿವಮೊಗ್ಗ, ಕೊಟ್ಟೂರಿನಿಂದ ಕಾಯಿಗಳು ಈಗ ಬರುತ್ತಿಲ್ಲ. ಈಚೆಗೆ ಮಂಡ್ಯ, ಮದ್ದೂರಿನ ಕಾಯಿಗಳು ಲಾರಿಯಲ್ಲಿ ತಂದು ಮಾರಾಟ ಮಾಡಿದ್ದರು. ಫೆಬ್ರುವರಿಯಲ್ಲಿ ಕಾಯಿಯೊಂದಕ್ಕೆ ₹25 ರಿಂದ ₹ 30 ನಿಗದಿಯಾಗಿತ್ತು. ಈಗ ಒಂದು ಎಳನೀರಿಗೆ ₹ 35ರಿಂದ ₹ 40 ಜನತೆ ಪಾವತಿಸುತ್ತಿದ್ದಾರೆ. ಇದರಿಂದ ದೇಹಕ್ಕೆ ಶಕ್ತಿ ನೀಡುವ ಎಳನೀರಿನ ದರ ಏರಿಕೆ ಜನಸಾಮಾನ್ಯರಿಗೆ ಬಿಸಿಮುಟ್ಟಿಸಿದೆ.

‘ತೆಂಗಿನಮರಗಳಲ್ಲಿ ಎಳನೀರು ಖಾಲಿಯಾಗಿವೆ. ಬೇರೆ ತಾಲ್ಲೂಕಿನಿಂದ ಬರುವ ಕಾಯಿಗೆ ದುಬಾರಿ ಬೆಲೆಯಿದೆ. ಹಾಗಾಗಿ ಮಾರಾಟ ನಿಲ್ಲಿಸಿದ್ದೇವೆʼ ಎಂದು ಎಳನೀರು ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ʼಬಿಸಿಲು ಹೆಚ್ಚಾಗಿರುವ ಕಾರಣ ಮರವೇರಿ ಕಾಯಿ ಕೀಳಲು ಕಾರ್ಮಿಕರು ಬರುತ್ತಿಲ್ಲ. ದೂರ ಜಿಲ್ಲೆಗಳಿಂದ ಬರುವ ಕಾಯಿಗಳಿಗೆ ದುಬಾರಿ ಬೆಲೆ ನಿಗದಿಯಾಗಿವೆ. ಹಾಗಾಗಿ ಎಳನೀರು ದರ ಏರಿಕೆಯಾಗಿದೆʼ ಎನ್ನುತ್ತಾರೆ ಅಂಗಡಿ ಮಾಲೀಕ ಮಂಜುನಾಥ.

ಹರಪನಹಳ್ಳಿ ಬಿಸಿಲಿಗೆ ಬಳಲಿದ ಜನರು ಕಾಯಿಯೊಂದಕ್ಕೆ ₹ 35ಕೊಟ್ಟು ಎಳನೀರು ಸೇವಿಸುತ್ತಿರುವುದು.
ಹರಪನಹಳ್ಳಿ ಬಿಸಿಲಿಗೆ ಬಳಲಿದ ಜನರು ಕಾಯಿಯೊಂದಕ್ಕೆ ₹ 35ಕೊಟ್ಟು ಎಳನೀರು ಸೇವಿಸುತ್ತಿರುವುದು.
ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ವ್ಯಾಪಾರಿಯೊಬ್ಬ ತೆಂಗಿನಕಾಯಿ ಕತ್ತರಿಸುತ್ತಿರುವುದು.
ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ವ್ಯಾಪಾರಿಯೊಬ್ಬ ತೆಂಗಿನಕಾಯಿ ಕತ್ತರಿಸುತ್ತಿರುವುದು.

ಬಿಸಿಲಲ್ಲಿ ಓಡಾಟ ನಿಲ್ಲಿಸಿ

‘ಬಿಸಿಲಿನಿಂದ ಅಪಾಯ ಆಗಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ. ಬಿಸಿಲು ಹೆಚ್ಚಾಗುತ್ತಿರುವ ಕಾರಣ ಜನರು ಹೆಚ್ಚು ಶುದ್ದ ನೀರು ಕುಡಿಯಬೇಕು. ಬಿಸಿಲಲ್ಲಿ ಓಡಾಟ ನಿಲ್ಲಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಹೊತ್ತು ಓಡಾಡಬಹುದು. ದ್ರವರೂಪದ ಆಹಾರ ಸೇವಿಸಿ ತಂಪಾದ ಸ್ಥಳದಲ್ಲಿ ಇರುವುದು ಒಳ್ಳೆಯದುʼ ಡಾ.ಹಾಲಸ್ವಾಮಿ ತಾಲ್ಲೂಕು ವೈದ್ಯಾಧಿಕಾರಿ ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT