ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿದರೆ ಗಣಿಗಾರಿಕೆ ಪರವಾನಗಿ ರದ್ದು: ಪವನಕುಮಾರ್‌ ಮಾಲಪಾಟಿ ಎಚ್ಚರಿಕೆ

ಕಲ್ಲು ಗಣಿ ಸುರಕ್ಷತೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಎಚ್ಚರಿಕೆ
Last Updated 1 ಮಾರ್ಚ್ 2021, 7:59 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ನಿಯಮ ಮೀರಿ ಗಣಿಗಾರಿಕೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಅವರ ಪರವಾನಗಿ ಕೂಡ ರದ್ದುಪಡಿಸಲಾಗುವುದು’ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಗಣಿ ಸುರಕ್ಷತಾ ನಿರ್ದೇಶನಾಲಯ ಹಾಗೂ ಗಣಿ ಸುರಕ್ಷತಾ ಸಂಘದ ಸಹಭಾಗಿತ್ವದಲ್ಲಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಕಲ್ಲು ಗಣಿ ಸುರಕ್ಷತೆ, ಡ್ರಿಲ್ಲಿಂಗ್‌, ಸ್ಫೋಟಕ ಬಳಕೆ, ಅನಧಿಕೃತ ಗಣಿಗಾರಿಕೆ ತಡೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅಡ್ಡದಾರಿ ಬಳಸಿಕೊಂಡು ಗಣಿಗಾರಿಕೆ ಮಾಡುವುದು ಯಾರಿಗೂ ಒಳ್ಳೆಯದಲ್ಲ. ಯಾರೂ ಗಮನಿಸುವುದಿಲ್ಲ ಎಂಬ ಮನೋಭಾವನೆಯಿಂದ ಹಲವರು ಮನಬಂದಂತೆ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ನಿರ್ಲಕ್ಷ್ಯದಿಂದಾಗಿಯೇ ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ದುರಂತ ಸಂಭವಿಸಿದೆ. ಆ ಘಟನೆ ತಪ್ಪಿಸಬಹುದಿತ್ತು. ನೈಸರ್ಗಿಕ ವಿಕೋಪದಂತೆ ಆ ಘಟನೆ ಸಂಭವಿಸಿರಲಿಲ್ಲ. ಅದು ಮನುಷ್ಯನ ತಪ್ಪಿನಿಂದ ಆಗಿರುವಂತಹದ್ದು’ ಎಂದು ಹೇಳಿದರು.

‘ಗಣಿಗಾರಿಕೆ ಮಾಡುವವರು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು. ಈ ರೀತಿ ಮಾಡುವುದರಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಬೇರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲಿ ದುರಂತ ಸಂಭವಿಸಬಾರದು. ಅದಕ್ಕೆ ಆಸ್ಪದ ಕೊಡಬಾರದು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಮಾತನಾಡಿ, ‘ಕಾರ್ಪೊರೇಟ್‌ ಮಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿಲ್ಲ. ಅಲ್ಲಿ ಎಲ್ಲ ರೀತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆದರೆ, ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಮಾಡುತ್ತಿರುವವರು ನಿಯಮಗಳನ್ನು ಕಡೆಗಣಿಸುತ್ತಾರೆ. ಈ ರೀತಿ ಮಾಡುವುದರಿಂದಲೇ ದುರಂತಗಳು ಸಂಭವಿಸಿ ಜೀವ ಹಾನಿ ಆಗುತ್ತಿದೆ’ ಎಂದರು.

‘ಗಣಿ ಜಾಗದ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಬೇಕು. ಗಣಿಯಲ್ಲಿ ಕೆಲಸ ನಿರ್ವಹಿಸುವವರು ಎಲ್ಲ ವಿಷಯಗಳು ಗೊತ್ತಿರಬೇಕು. ಸ್ಫೋಟಕಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಾಗಿಸಬೇಕು. ಅಧಿಕಾರಿಗಳು ಮೇಲಿಂದ ಮೇಲೆ ಗಣಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಿಯಮ ಪಾಲಿಸದವರ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಕೊಡಬೇಕು’ ಎಂದು ಸೂಚಿಸಿದರು.

ಗಣಿ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕ ಉಮೇಶ್‌ ಸಾವರ್ಕರ್‌, ‘ಗಣಿ ಉದ್ಯಮ ಇತರೆ ಎಲ್ಲ ಉದ್ಯಮಗಳಿಗೆ ಬೆನ್ನೆಲುಬಾಗಿದೆ. ಸುರಕ್ಷತೆ, ಉತ್ತಮ ಪರಿಸರದಲ್ಲಿ ಗಣಿಗಾರಿಕೆ ನಡೆಯುವಂತೆ ನೋಡಿಕೊಳ್ಳುವುದು ಅದರಲ್ಲಿ ತೊಡಗಿಸಿಕೊಂಡವರ ಕರ್ತವ್ಯ’ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೆ.ಎ. ಮಹಾವೀರ, ಗಣಿ ಸುರಕ್ಷತಾ ಸಂಘದ ಕಾರ್ಯದರ್ಶಿ ಕೆ. ಮಧುಸೂದನ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಗಣಿ ಇಲಾಖೆಯ ಕೆ.ಎಸ್‌. ನಾಗೇಂದ್ರಪ್ಪ, ಡಿವೈಎಸ್ಪಿ ವಿ. ರಘುಕುಮಾರ, ಸತ್ಯಪ್ರಕಾಶ್‌, ಬಿ.ಎಂ. ನಾಗರಾಜ, ಪ್ರದೀಪ್‌ ಕುಮಾರ್‌ ಇದ್ದರು.

‘ಗಣಿಗಾರಿಕೆಗೆ ಗ್ರಾಮಸ್ಥರ ಅಡ್ಡಿ’

‘ಸಂಡೂರು ತಾಲ್ಲೂಕಿನ ದೇವಗುಡ್ಡನಹಳ್ಳಿಯಲ್ಲಿ ಸರ್ಕಾರದಿಂದ ಅನುಮತಿ ಪಡೆದು ಗಣಿಗಾರಿಕೆ ಮಾಡಲು ಮುಂದಾದರೆ ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ. ತಹಶೀಲ್ದಾರ್‌, ಸ್ಥಳೀಯ ಪೊಲೀಸರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಿಲ್ಲ’ ಎಂದು ಗಣಿ ಮಾಲೀಕ, ಮಾಜಿ ಬುಡಾ ಅಧ್ಯಕ್ಷ ಜಹೀರ್‌ ಅಹಮ್ಮದ್‌ ಅವರು ಸಭಿಕರ ಸಾಲಿನಿಂದ ಎದ್ದು, ವೇದಿಕೆ ಬಳಿ ಬಂದು ಡಿಸಿ, ಎಸ್ಪಿ ಎದುರು ಗೋಳು ತೋಡಿಕೊಂಡರು.

‘20 ವರ್ಷಗಳ ಅವಧಿಗೆ ಕ್ವಾರಿ ಗುತ್ತಿಗೆಗೆ ಪಡೆದಿರುವೆ. ಆದರೆ, ನಾಲ್ಕು ವರ್ಷಗಳಿಂದ ಗಣಿಗಾರಿಕೆ ನಡೆಸಲು ಸಾಧ್ಯವಾಗಿಲ್ಲ’ ಎಂದರು. ‘ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಡಿಸಿ ಪವನಕುಮಾರ್‌ ಮಾಲಪಾಟಿ ಭರವಸೆ ನೀಡಿದರು.

‘ಬುಕ್ಕಸಾಗರದಲ್ಲಿ ಗಣಿಗಾರಿಕೆ ತಡೆಗೆ ಕ್ರಮ’

‘ತಾಲ್ಲೂಕಿನ ಬುಕ್ಕಸಾಗರದ ಬಳಿ ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮಾಧ್ಯಮಗಳಲ್ಲಿ ಗಮನಿಸಿರುವೆ. ಈ ಕುರಿತು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಪರಿಶೀಲಿಸಲು ತಿಳಿಸಿದ್ದೇನೆ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಗಣಿಗಾರಿಕೆ ತಡೆಯುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು’ ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ತುಂಗಭದ್ರಾ ನದಿ ಮಾರ್ಗ ಬದಲಾಗುವ ಆತಂಕ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು.

* ಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡುವವರಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು. ವಾಮ ಮಾರ್ಗ ಬಳಸಿದರೆ ಕ್ರಮ ಖಚಿತ.

–ಪವನಕುಮಾರ್‌ ಮಾಲಪಾಟಿ, ಜಿಲ್ಲಾಧಿಕಾರಿ

* ಬಳ್ಳಾರಿ ಗಣಿನಾಡು ಎಂದೇ ಖ್ಯಾತಿ. ಎಲ್ಲರ ಕಣ್ಣು ಈ ಜಿಲ್ಲೆ ಮೇಲಿದೆ. ಅತಿ ಹೆಚ್ಚು ಎಚ್ಚರಿಕೆಯಿಂದ ಗಣಿಗಳಲ್ಲಿ ನಿಯಮದ ಪ್ರಕಾರ ಕೆಲಸ ನಿರ್ವಹಿಸಬೇಕು.

–ಸೈದುಲು ಅಡಾವತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT