ಗುರುವಾರ , ಸೆಪ್ಟೆಂಬರ್ 29, 2022
26 °C

ಪರಿಶಿಷ್ಟ ಜಾತಿ ವ್ಯಕ್ತಿಗೆ ಜೀವ ಬೆದರಿಕೆ: ಸಚಿವ ಆನಂದ್‌ ಸಿಂಗ್‌ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮನೆಗೆ ಹೋಗಿ ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿ ಗೂಂಡಾ ವರ್ತನೆ ತೋರಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್‌. ಭಾಸ್ಕರ್‌ ಪ್ರಸಾದ್‌ ಆಗ್ರಹಿಸಿದರು.

‘ಒಬ್ಬ ಅಮಾಯಕ ದಲಿತ ವ್ಯಕ್ತಿಯ ಕುಟುಂಬದವರಿಗೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವುದು ಆನಂದ್‌ ಸಿಂಗ್‌ ಅವರಿಗೆ ಶೋಭೆ ತರುವಂಥದ್ದಲ್ಲ. ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವರ ವಿರುದ್ಧ ಈಗಾಗಲೇ ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ನಿರ್ದಿಷ್ಟ ದಿನದೊಳಗೆ ಸಚಿವರನ್ನು ಬಂಧಿಸಬೇಕು. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಲಾಗುವುದು. ಅವರ ಪ್ರತಿಕ್ರಿಯೆ ಆಧರಿಸಿ ಮುಂದುವರೆಯಲಾಗುವುದು. ಆನಂದ್‌ ಸಿಂಗ್‌ ಅವರು ಕಾಲುವೆ ಜಾಗ ಒತ್ತುವರಿ ಮಾಡಿಕೊಂಡು ಬಂಗಲೆ ನಿರ್ಮಿಸಿದ್ದಾರೆ. ಇತರೆ ಅಕ್ರಮ ನಡೆಸಿ ಆಸ್ತಿ ಗಳಿಸಿದ್ದಾರೆ ಎಂದು ಡಿ. ಪೋಲಪ್ಪ ಅವರು ದಾಖಲೆಗಳ ಸಮೇತ ದೂರು ಕೊಟ್ಟು, ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರ, ಒತ್ತುವರಿ ಆರೋಪದ ಬಗ್ಗೆ ಸಚಿವರು ಮಾತನಾಡಬೇಕು. ಆದರೆ, ಗೂಂಡಾಗಳೊಂದಿಗೆ ಪೋಲಪ್ಪ ಅವರ ಮನೆಗೆ ಹೋಗಿ ‘ಜೀವಂತವಾಗಿ ಸುಟ್ಟು ಹಾಕುತ್ತೇನೆ’ ಎಂದಿದ್ದಾರೆ. ಎಸ್ಪಿ ಕಚೇರಿಗೆ ಪೋಲಪ್ಪ ದೂರು ಕೊಡಲು ಹೋದಾಗ ಅಲ್ಲೂ ಕೂಡ ಅವರ ಬೆಂಬಲಿಗರು ಹೆದರಿಸಿದ್ದಾರೆ. ಅದರಿಂದ ಬೇಸತ್ತು ಪೋಲಪ್ಪ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದರು.

ಡಿ. ಪೋಲಪ್ಪ ಸೇರಿದಂತೆ ಐದು ಜನರು ಆನಂದ್‌ ಸಿಂಗ್‌ ಅಕ್ರಮದ ವಿರುದ್ಧ ಹೋರಾಟ ನಡಸುತ್ತಿದ್ದಾರೆ. ಅದರಲ್ಲಿ ಪೋಲಪ್ಪ ಕೂಡ ಒಬ್ಬರು. ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಶೋಷಿತ ಸಮಾಜಕ್ಕೆ ಸೇರಿದವರ ಮೇಲೆ ದಬ್ಬಾಳಿಕೆ ನಡೆಸುತ್ತೇನೆ ಎಂಬ ಆನಂದ್‌ ಸಿಂಗ್‌ ಅವರ ಧೋರಣೆ ಸರಿಯಲ್ಲ. ಹಣಬಲ, ರಾಜಕೀಯ ಬಲ ಮತ್ತು ತೋಳ್ಬಲದಿಂದ ಯಾರನ್ನೂ ಬೇಕಾದರೂ ಹತ್ತಿಕ್ಕಬಹುದು ಎಂಬುದು ಸರಿಯಲ್ಲ. ಸಂವಿಧಾನ, ನ್ಯಾಯ ವ್ಯವಸ್ಥೆಕ್ಕಿಂತ ಯಾರೂ ದೊಡ್ಡವರಲ್ಲ. ಈ ದೇಶದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಕೂಡ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ಹೇಳಿದರು.

ಆನಂದ್ ಸಿಂಗ್‌ ಹೋರಾಟಗಾರರ ಮೈಮುಟ್ಟಿ ವಿಧಾನಸಭೆ ಪ್ರವೇಶಿಸುತ್ತೇನೆ ಎಂದರೆ ಅದು ತಪ್ಪು ಕಲ್ಪನೆ. ಸಚಿವರು ಸಂವಿಧಾನ ಗೌರವಿಸಿ ಕೆಲಸ ಮಾಡಬೇಕು. ತಪ್ಪು ಮಾಡಿದವರು ನಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಆನಂದ್‌ ಸಿಂಗ್‌ ಕೂಡ ಹೇಳುತ್ತಿದ್ದಾರೆ. ಕೊಲೆ ಬೆದರಿಕೆ, ಜಾತಿ ನಿಂದನೆ, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದು ಗಂಭೀರ ವಿಷಯ. ತಕ್ಷಣವೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಗಯಾಸುದ್ದೀನ್‌ ಸಾಬ್‌, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್‌, ವಿಜಯನಗರ ಜಿಲ್ಲಾ ಅಧ್ಯಕ್ಷ ವಲಿ ಬಾಷಾ, ಉಪಾಧ್ಯಕ್ಷ ನಜೀರ್‌ ಖಾನ್‌, ಜಿಲ್ಲಾ ಕಾರ್ಯದರ್ಶಿ ಇರ್ಫಾನ್‌ ಕಟಗಿ, ಜಿಲ್ಲಾ ಕೋಶಾಧಿಕಾರಿ ಶೋಯೆಬ್‌, ಜಿಲ್ಲಾ ಸಮಿತಿ ಸದಸ್ಯ ಇಬ್ರಾಹಿಂ, ‘ಅಸೆಂಬ್ಲಿ’ ಅಧ್ಯಕ್ಷ  ಸಮೀರ್‌ ಶೇಕ್‌ ಇದ್ದರು.

‘ಸಚಿವರ ಅಣತಿಯಂತೆ ಅಧಿಕಾರಿಗಳು ಕೆಲಸ’

‘ಸಚಿವ ಆನಂದ್‌ ಸಿಂಗ್‌ ಅವರು ನಡೆಸಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ಅಧಿಕಾರಿಗಳಿಗೆ ದೂರು ಕೊಟ್ಟು ವರ್ಷವಾದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ನಗರಸಭೆ ಪೌರಾಯುಕ್ತರೆಲ್ಲ ಸಚಿವರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಡಿ. ಪೋಲಪ್ಪ ಆರೋಪಿಸಿದರು.

‘ಸಚಿವರು ಹೇಳಿದ ತಕ್ಷಣವೇ ನಗರಸಭೆ ಪೌರಾಯುಕ್ತರು ನನ್ನ ಮನೆಗೆ ಬಂದು ಪರಿಶೀಲಿಸಿದರು. ಆದರೆ, ನಾನು ಸಚಿವರ ವಿರುದ್ಧ ದೂರು ಕೊಟ್ಟರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆ.30ರಂದು ಸಚಿವ ಆನಂದ್‌ ಸಿಂಗ್‌ ಅವರು ಜಮೀನಿನ ರಾಜಿ ಪಂಚಾಯಿತಿಗೆ ಬಂದಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಸಚಿವರು 40ರಿಂದ 50 ಜನರೊಂದಿಗೆ ನನ್ನ ಮನೆಗೆ ಬರುವ ಅಗತ್ಯವೇನಿತ್ತು? ಈ ಹಿಂದೆಯೂ ಅವರು ನನಗೆ ಜೀವ ಬೆದರಿಕೆ ಹಾಕಿದ್ದರು. ಒಂದುಸಲ ಏನೋ ವಿಷಯ ಮಾತಾಡಬೇಕೆಂದು ಕರೆಸಿಕೊಂಡು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಲವಂತವಾಗಿ ಕೂಡಿ ಹಾಕಿದ್ದರು. ಆದರೆ, ಈಗ ಅವರೇ ಖುದ್ದು ನನ್ನ ಮನೆಗೆ ಬಂದು ನನ್ನನ್ನು ನನ್ನ ಜಾತಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಟ್ಟು ಹಾಕುತ್ತೇನೆ ಎಂಬ ಮಟ್ಟಕ್ಕೆ ಹೋಗುತ್ತಾರೆ, ಈ ಮಟ್ಟಕ್ಕೆ ಇದು ಬೆಳೆಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು