ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅಣೆಕಟ್ಟೆಗೆ ಸಿದ್ದರಾಮಯ್ಯ ಭೇಟಿಗೆ ಸಜ್ಜು; ಆಂಧ್ರದ ಸಚಿವರೂ ಆಗಮನ

ತುಂಗಭದ್ರಾ: 15 ಟಿಎಂಸಿ ಅಡಿ ನೀರು ಖಾಲಿ
Published : 13 ಆಗಸ್ಟ್ 2024, 6:02 IST
Last Updated : 13 ಆಗಸ್ಟ್ 2024, 6:02 IST
ಫಾಲೋ ಮಾಡಿ
Comments

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿಹೋಗಿರುವ 19ನೇ ಕ್ರಸ್ಟ್‌ಗೇಟ್ ಜಾಗದಲ್ಲಿ ಹೊಸದಾಗಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ಭರದಿಂದ ತಯಾರಿ ನಡೆದಿದ್ದು, ಮಂಗಳವಾರ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. ಎರಡು ದಿನದಲ್ಲಿ ಸುಮಾರು 15 ಟಿಎಂಸಿ ಅಡಿ ನೀರು ಖಾಲಿಯಾಗಿದೆ.

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 12.15ರ ಸುಮಾರಿಗೆ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ವಿಶೇಷ ವಿಮಾನದಲ್ಲಿ ಬಂದು ಬಳಿಕ ಅಣೆಕಟ್ಟೆಗೆ ಭೇಟಿ ನೀಡಲಿದ್ದಾರೆ. ವೈಕುಂಠ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 4ರವರೆಗೂ ಸಿಎಂ ಅವರು ಇಲ್ಲೇ ಇರುವ ನಿರೀಕ್ಷೆ ಇದ್ದು, ಬಳಿಕ ಗಿಣಿಗೇರಾ ಏರ್‌ಸ್ಟ್ರಿಪ್‌ ಮೂಲಕ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಭಾರಿ ಭದ್ರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲದೆ ಆಂಧ್ರಪ್ರದೇಶ ಕಂದಾಯ ಸಚಿವ ಪಯ್ಯಾವುಲ ಕೇಶವ್ ಮತ್ತು ನೀರಾವರಿ ಸಚಿವ ನಿಮ್ಮಲ ರಾಮಾ ನಾಯ್ಡು ಅವರು ಸಹ ಭೇಟಿ ನೀಡಲಿದ್ದಾರೆ. ಹೀಗಾಗಿ ಅಣೆಕಟ್ಟೆಯ ಸುತ್ತಮುತ್ತ ಭಾರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸಪೇಟೆ ಕಡೆಯಿಂದ ಡ್ಯಾಂನತ್ತ ತೆರಳುವುದಕ್ಕೆ ಮಾಧ್ಯಮದವರಿಗೆ ಸಹ ನಿರ್ಬಂಧ ಹೇರಲಾಗಿದೆ. ಮಾಧ್ಯಮದವರು ಮುನಿರಾಬಾದ್‌ ಗೇಟ್‌ ಮೂಲಕವೇ, ಪಾಸ್‌ ಪಡೆದುಕೊಂಡು ತೆರಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆಂಧ್ರಪ್ರದೇಶದ ಸಿಪಿಎಂ ಕಾರ್ಯದರ್ಶಿ ರಾಮಕೃಷ್ಣ ಮತ್ತು ಇನ್ನೂ ಕೆಲವು ನಾಯಕರು ಬರಲಿದ್ದಾರೆ. ಅಣೆಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ವೈಕುಂಠ ಅತಿಥಿಗೃಹದ ಸಮೀಪಕ್ಕೆ ಯಾರನ್ನೂ ಬಿಡದಿರುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಗೇಟ್ ತಯಾರಿ ಕಾರ್ಯ ಚುರುಕು: ಹೊಸಪೇಟೆಯ ಸಂಕ್ಲಾಪುರ ಕೈಗಾರಿಕಾ ಪ್ರಾಂಗಣದಲ್ಲಿ ನಾರಾಯಣ ಇಂಡಸ್ಟ್ರೀಸ್ ನ ಶೆಡ್‌ ಇದ್ದು, ಅಲ್ಲಿ ತಾತ್ಕಾಲಿಕ ಗೇಟ್‌ನ ಅರ್ಧ ಭಾಗ ನಿರ್ಮಾಣವಾಗುತ್ತಿದೆ. ಇನ್ನುಳಿದ ಭಾಗ ಕೊಪ್ಪಳ ತಾಲ್ಲೂಕಿನ ಹೊನಹಳ್ಳಿಯ ಶೆಡ್‌ನಲ್ಲಿ ಹಿಂದೂಸ್ತಾನ್ ಕಂಪನಿಯ ವತಿಯಿಂದ ನಡೆಯುತ್ತಿದೆ.

ಮೊದಲ ಗೇಟ್ ಕೂರಿಸುವುದೇ ನಿರ್ಣಾಯಕ: ತಾತ್ಕಾಲಿಕ ಗೇಟ್‌ನ ಮೊದಲ ಭಾಗವನ್ನು ಹರಿಯುತ್ತಿರುವ ನೀರಿಗೆ ಇಳಿಸಿ ಕೂರಿಸುವುದು ಸಫಲವಾದರೆ ಬಹಳ ದೊಡ್ಡ ಯಶಸ್ಸು ಸಿಕ್ಕಿದಂತೆಯೇ ಎಂಬ ಭಾವನೆ ಅಧಿಕಾರಿಗಳಲ್ಲಿ ಮೂಡಿದೆ. ಏಕೆಂದರೆ ಹೀಗೆ ಕೂರಿಸುವಾಗ ದಪ್ಪನೆಯ ಕಬ್ಬಿಣದ ಹಲಗೆ ಮಾದರಿಯ ಗೇಟ್ ನೀರಿನ ರಭಸಕ್ಕೆ ತೊಯ್ದಾಡಿದರೆ ಮತ್ತು ಸರಿಯಾಗಿ ಕೂರದೆ ಹೋದರೆ ಅದರಿಂದ ಪ್ರಯೋಜನ ಇಲ್ಲ. ಹಾಗಿದ್ದರೆ ನೀರು ಖಾಲಿಯಾಗುವ ತನಕ ಕಾಯಲೇಬೇಕಾಗುತ್ತದೆ.

ಒಂದು ವೇಳೆ ಮೊದಲ ತೊಲೆ ಕ್ರೇನ್‌ನಿಂದ ಇಳಿದು ಧುಮ್ಮಿಕ್ಕುತ್ತಿರುವ ನೀರಿನ ಸೆಳೆತವನ್ನೂ ಹಿಮ್ಮೆಟ್ಟಿಸಿ ಸರಿಯಾಗಿ ಕುಳಿತುಕೊಂಡಿತು ಎಂದಾದರೆ 10 ಟಿಎಂಸಿ ಅಡಿ ನೀರು ಜಲಾಶಯದಲ್ಲೇ ಉಳಿದುಬಿಡುತ್ತದೆ. ಅದರ ಮೇಲೆ ಇನ್ನೊಂದು ತೊಲೆ ಕೂತಿತು ಎಂದಾದರೆ 20 ಟಿಎಂಸಿ ಅಡಿ ನೀರು ಉಳಿತಾಯವಾಗುತ್ತದೆ. ಹೀಗೆ 5 ಬೃಹತ್ ತೊಲೆಗಳನ್ನು ಸೇರಿಸಿ 20 ಅಡಿ ಎತ್ತರದ ಗೇಟ್‌ ಸಿದ್ಧವಾಗುತ್ತದೆ.

ಮುಖ್ಯಮಂತ್ರಿ ಅವರು ಬಂದು ಹೋದ ಬಳಿಕ ಬಹುತೇಕ ಈ ಪ್ರಯೋಗ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಯೋಗಕ್ಕೆ ಅವಕಾಶ: ತುಂಗಭದ್ರಾ ಅಣೆಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದೆ. ಹೀಗಾಗಿ ದುರಂತದಲ್ಲೂ ಹೊಸ ಪ್ರಯೋಗಗಳಿಗೆ ಒಂದು ಉತ್ತಮ ವೇದಿಕೆ ಒದಗಿದ್ದು, ಇತರ ಕಡೆಗಳಿಗೆ ಸಹ ಇಲ್ಲಿನ ಸಫಲತೆ ಅಥವಾ ವೈಫಲ್ಯ ಮಾದರಿಯಾಗುವ ಸಾಧ್ಯತೆ ಇದೆ.

4 ಅಡಿ ನೀರು ಇಳಿಕೆ

ತುಂಗಭದ್ರಾ ಅಣೆಕಟ್ಟೆಯ ಗರಿಷ್ಠ ನೀರು ಸಂಗ್ರಹ ಮಟ್ಟ 1,633 ಅಡಿ. ಶನಿವಾರ ರಾತ್ರಿ ಅಷ್ಟೂ ನೀರು ಸಂಗ್ರಹವಾಗಿತ್ತು. ಅದೇ ದಿನ ರಾತ್ರಿ 19ನೇ ಗೇಟ್ ನೀರುಪಾಲಾದ ಕಾರಣ ನೀರನ್ನು ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸುವ ಅನಿವಾರ್ಯತೆ ಎದುರಾಯಿತು. ಸದ್ಯ ನೀರಿನ ಮಟ್ಟ 1,629.26 ಅಡಿಗೆ ಕುಸಿದಿದೆ. ಅಂದರೆ 4 ಅಡಿಯಷ್ಟು ನೀರು ಕುಸಿದಂತಾಗಿದೆ.

ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಸದ್ಯ 91.31 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅಂದರ ಎರಡು ದಿನಗಳಲ್ಲಿ ಸುಮಾರು 15 ಟಿಎಂಸಿಯಷ್ಟು ನೀರು ನದಿಗೆ ಹರಿದಿದೆ.

ಕಳೆದ ವರ್ಷ ಮಳೆ ಕೊರತೆ ಆಗಿದ್ದರಿಂದ ಇದೇ ಸಮಯದಲ್ಲಿ 89.26 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಅದುವೇ ಕಳೆದ ವರ್ಷದ ಗರಿಷ್ಠ ನೀರು ಸಂಗ್ರಹ ಪ್ರಮಾಣವಾಗಿತ್ತು. ಹೀಗಾಗಿ ಕಳೆದ ವರ್ಷ ಕೇವಲ ಒಂದು ಬೆಳೆಗೆ ಮಾತ್ರ ನೀರು ಲಭಿಸಿತ್ತು. ಈ ವರ್ಷ ಮತ್ತೆ ಅದೇ ಪರಿಸ್ಥಿತಿ ಬಂದೊದಿಗಿದ್ದು, ಗೇಟ್‌ ಅಳವಡಿಸಿದ ಬಳಿಕ ಮಳೆ ಬಂದು ಜಲಾಶಯದಲ್ಲಿ ನೀರು ತುಂಬಿದರೆ ಮಾತ್ರ ಒಂದು ಬೆಳೆಗೆ ನೀರು ಲಭ್ಯವಾಗಲಿದೆ. ಇಲ್ಲವಾದರೆ ರೈತರಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT