ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ಮಧ್ಯವರ್ತಿಗಳಿಂದ ರೈತರನ್ನು ಮುಂದಿಟ್ಟು ಗಲಭೆ ಸೃಷ್ಟಿ: ಸಚಿವ ಆನಂದ್‌ ಸಿಂಗ್‌

Last Updated 14 ಮಾರ್ಚ್ 2021, 8:02 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ರೈತರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಆದರೆ, ಪಂಜಾಬ್‌, ಹರಿಯಾಣದ ಕೆಲವು ಮಧ್ಯವರ್ತಿಗಳು ರೈತರನ್ನು ಮುಂದಿಟ್ಟು ಗಲಭೆ ಸೃಷ್ಟಿಸುತ್ತಿದ್ದಾರೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ವಕ್ಫ್‌ ಮತ್ತು ಹಜ್‌ ಖಾತೆ ಸಚಿವ ಆನಂದ್‌ ಸಿಂಗ್‌ ಆರೋಪಿಸಿದರು.

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ಮಾಧ್ಯಮ ಮಂಥನ ಕಾರ್ಯ್ರಕಮ ಉದ್ಘಾಟಿಸಿ ಮಾತನಾಡಿದ ಅವರು, ‘ವಿರೋಧ ಪಕ್ಷಗಳು, ಮಧ್ಯವರ್ತಿಗಳು ರೈತರನ್ನು, ಮೋದಿ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಈ ಕಾಯ್ದೆಗಳ ಮಹತ್ವ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ’ ಎಂದು ಹೇಳಿದರು.

‘ಬಿಜೆಪಿ ಒಂದು ಪಕ್ಷವಲ್ಲ. ದೇಶ ಕಟ್ಟುವ ಕೆಲಸ ಮಾಡುತ್ತಿರುವ ಸಂಘಟನೆ. ಬೇರೆ ಪಕ್ಷಗಳು ಅಧಿಕಾರಕ್ಕೆ ಸೀಮಿತವಾಗಿವೆ. ಬಿಜೆಪಿಯಲ್ಲಿ ಕಾರ್ಯಕರ್ತರ ದೊಡ್ಡ ಸೈನ್ಯವೇ ಇದೆ. ಇಡೀ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆ ಇದೆ. ದೇಶ, ಹಿಂದೂ ಧರ್ಮ ಎತ್ತಿ ಹಿಡಿಯುವ ಕೆಲಸ ಬಿಜೆಪಿ ಮಾಡುತ್ತಿದೆ’ ಎಂದರು.

‘ಬಿಜೆಪಿಯಲ್ಲಿ ಶಿಸ್ತು, ಸಂಘಟನೆಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಪ್ರತಿಯೊಂದಕ್ಕೂ ಒಂದು ವಿಭಾಗ ಮಾಡಿ, ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಯಾರು ಪಕ್ಷ ನಿಷ್ಠೆ ಇಟ್ಟುಕೊಂಡು ಶ್ರಮಿಸುತ್ತಾರೋ ಅಂತಹವರನ್ನು ಪಕ್ಷ ಗುರುತಿಸಿ ಉತ್ತಮ ಸ್ಥಾನಮಾನ ಕೊಡುತ್ತದೆ. ಸಾಮಾನ್ಯ ಕಾರ್ಯಕರ್ತರಾಗಿದ್ದ ದಿ. ಅಶೋಕ ಗಸ್ತಿಯವರಿಗೆ ಪಕ್ಷವು ರಾಜ್ಯಸಭೆಗೆ ನೇಮಕ ಮಾಡಿತು. ಅರುಣ್‌ ಜೇಟ್ಲಿ, ಸ್ಮೃತಿ ಇರಾನಿ ಸೇರಿದಂತೆ ಹಲವರು ತಳಮಟ್ಟದಿಂದ ದೊಡ್ಡ ಸ್ಥಾನಕ್ಕೆ ಬಂದವರು’ ಎಂದು ತಿಳಿಸಿದರು.

‘ರಾಜ್ಯ, ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಅದರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ದೊಡ್ಡ ಹೊಣೆಗಾರಿಕೆ ಪಕ್ಷದ ಮಾಧ್ಯಮ ವಿಭಾಗ, ಅದರಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲಿದೆ. ವಿರೋಧ ಪಕ್ಷಗಳು ಟೀಕೆ, ಟಿಪ್ಪಣಿ ಮಾಡಿದಾಗ ಅದಕ್ಕೆ ಸೂಕ್ತ ಉತ್ತರ ಕೊಟ್ಟು ಅವರನ್ನು ಎದುರಿಸುವ ಶಕ್ತಿ ಮಾಧ್ಯಮ ವಿಭಾಗದವರದ್ದು. ಅದನ್ನವರು ಸರಿಯಾಗಿ ನಿಭಾಯಿಸಬೇಕು’ ಎಂದು ಹೇಳಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ಪಕ್ಷದ ಇತರೆ ವಿಭಾಗಗಳಂತೆ ಮಾಧ್ಯಮ ವಿಭಾಗ ಬಿಜೆಪಿ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಎಲ್ಲರೂ ಸೇರಿಕೊಂಡು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ‘ಅವಿಭಜಿತ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಬಿಜೆಪಿ ಮಾಧ್ಯಮ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆ ಮಾಧ್ಯಮದ ಮಹತ್ವ, ಪಕ್ಷದ ಕಾರ್ಯಕ್ರಮಗಳ ಪ್ರಚಾರದ ಕುರಿತು ತಿಳಿವಳಿಕೆ ಮೂಡಿಸುವುದು ಇದರ ಉದ್ದೇಶವಾಗಿದೆ’ ಎಂದು ಹೇಳಿದರು.

ರಾ‌ಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ್‌ ಕಾಸಲೆ, ಸದಸ್ಯರಾದ ವೆಂಕಟೇಶ ಪ್ರಸಾದ ಮಾಲಿಪಾಟೀಲ, ಪ್ರಶಾಂತ್‌ ಇದ್ದರು.

‘ಖಾಸಗೀಕರಣಕ್ಕೆ ಮುಂದಾದರೆ ವಿರೋಧ’

‘ಒಂದುವೇಳೆ ಬಳ್ಳಾರಿಯ ವಿಮ್ಸ್‌ ಕ್ರೀಡಾಂಗಣ ಖಾಸಗೀಕರಣಕ್ಕೆ ಮುಂದಾದರೆ ನಾನು ಕೂಡ ವಿರೋಧಿಸುವೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ನನಗೆ ಗೊತ್ತಿರುವಂತೆ ವಿಮ್ಸ್‌ ಕ್ರೀಡಾಂಗಣ ಯಾರಿಗೂ ಕೊಟ್ಟಿಲ್ಲ. ವಾಕಿಂಗ್‌ ಮಾಡಲು ನಿರ್ಬಂಧ ಹೇರಲಾಗುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಒಂದುವೇಳೆ ಅಭಿವೃದ್ಧಿಗೆ ಮುಂದಾದರೆ ಅದಕ್ಕೆ ಅವಕಾಶ ಮಾಡಿಕೊಡಬೇಕು. ಖಾಸಗೀಕರಣ ಮಾಡಲು ಹೊರಟರೆ ವಿರೋಧಿಸುವೆ. ಸದನ ಮುಗಿದ ನಂತರ ಮಾಹಿತಿ ತರಿಸಿಕೊಳ್ಳುವೆ. ಒಂದುವೇಳೆ ಖಾಸಗೀಕರಣಕ್ಕೆ ಒಪ್ಪಂದವಾಗಿದ್ದರೆ ರದ್ದುಗೊಳಿಸಲಾಗುವುದು. ಯಾವುದೇ ಒಪ್ಪಂದವಾದರೂ ಸರ್ಕಾರದ ಮಟ್ಟದಲ್ಲಿ ಆಗಬೇಕು. ಆದರೆ, ಈ ವಿಷಯ ಯಾರಿಗೂ ಗೊತ್ತಿಲ್ಲ. ಸಂಪುಟ ಸಭೆಯಲ್ಲೂ ಚರ್ಚೆಯಾಗಿಲ್ಲ. ಮಾಹಿತಿ ಕೊರತೆಯಿಂದ ಗೊಂದಲ ಸೃಷ್ಟಿಯಾಗಿರುವ ಸಾಧ್ಯತೆ ಇದೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಕೊರೊನಾ ತಡೆಗೆ ಜನರ ಜವಾಬ್ದಾರಿ ಹೆಚ್ಚಿದೆ’

‘ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಜನಸಾಮಾನ್ಯರ ಜವಾಬ್ದಾರಿ ಹೆಚ್ಚಿದೆ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಪ್ರತಿಯೊಂದಕ್ಕೂ ಸರ್ಕಾರವನ್ನು ಅವಲಂಬಿಸಬಾರದು. ಹೆಚ್ಚಿನ ಒತ್ತಡ ಹೇರಿದರೆ ಸರ್ಕಾರ, ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಬರುತ್ತವೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಕೆಲವೆಡೆ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಯಾರೂ ಆತಂಕಕ್ಕೆ ಒಳಗಾಗಬಾರದು. ಈಗಾಗಲೇ ಲಸಿಕೆ ಬಂದಿದೆ. ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಜನ ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಪ್ರಮುಖ ಜಾಗಗಳಲ್ಲಿ ಚೆಕ್‌ ಪೋಸ್ಟ್‌ ತೆರೆದು ಪರಿಶೀಲನೆ ನಡೆಸಲಾಗುತ್ತಿದೆ. ನಾನು ಕೂಡ ಜಿಲ್ಲಾಡಳಿತದ ಸಂಪರ್ಕದಲ್ಲಿರುವೆ. ಜನ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಿಲ್ಲ’ ಎಂದು ತಿಳಿಸಿದರು.

ಬಿಜೆಪಿ ಮಾಧ್ಯಮ ಮಂಥನ ಕಾರ್ಯ್ರಕಮ
ಬಿಜೆಪಿ ಮಾಧ್ಯಮ ಮಂಥನ ಕಾರ್ಯ್ರಕಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT