ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಪನಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಬೀಗ

ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿವಿ ನಿರ್ಲಕ್ಷ್ಯ
Published : 25 ಸೆಪ್ಟೆಂಬರ್ 2024, 6:43 IST
Last Updated : 25 ಸೆಪ್ಟೆಂಬರ್ 2024, 6:43 IST
ಫಾಲೋ ಮಾಡಿ
Comments

ಹರಪನಹಳ್ಳಿ: ತಾಲ್ಲೂಕಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಆರು ತಿಂಗಳ ಹಿಂದೆ ಚಾಲನೆ ನೀಡಿದ್ದ ಇಲ್ಲಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸದೇ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ನಿರ್ಲಕ್ಷ್ಯ ಧೋರಣೆ ತಾಳಿದೆ.

ಮಾರ್ಚ್‌ 1ರಂದು ಅಂದಿನ ಕುಲಪತಿ ಅನಂತ ಎಲ್ ಝಂಡೇಕರ್‌, ಶಾಸಕಿ ಲತಾ ಮಲ್ಲಿಕಾರ್ಜುನ್‌, ಕುಲಸಚಿವ ರುದ್ರೇಶ್‌, ಮೌಲ್ಯಮಾಪನ ಕುಲಸಚಿವ ರಮೇಶ್‌ ಓಲೆಕಾರ್‌, ಸಿಂಡಿಕೇಟ್‌ ಸಮಿತಿ ಸದಸ್ಯರಾಗಿದ್ದ ಸುರೇಶ್‌ ಆರ್‌. ಸಜ್ಜನ್‌, ಟಿ.ಎಂ.ರಾಜಶೇಖರ್‌ ಅವರ ಸಮ್ಮುಖದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉದ್ಘಾಟಿಸಿ ಎಂ.ಕಾಂ, ಎಂ.ಎ.ಇಂಗ್ಲಿಷ್‌, ಕೋರ್ಸ್‌ ಆರಂಭಿಸಲಾಗುವುದು. ಈ ಕೇಂದ್ರದ ಸಂಯೋಜಕರಾಗಿ ಪ್ರಾಧ್ಯಾಪಕ ಟಿ.ಎಂ.ಪ್ರಶಾಂತ್‌ ನೇಮಿಸಿರುವುದಾಗಿ ಸಮಾರಂಭದಲ್ಲಿ ಅಂದಿನ ಪ್ರಭಾರ ಕುಲಪತಿ ಅವರು ಘೋಷಿಸಿದ್ದರು.

ಇದಕ್ಕೆ ಪೂರಕವಾಗಿ ಕೆಲಸ ಮಾಡದ ವಿಶ್ವವಿದ್ಯಾಲಯದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋರ್ಸ್‌ ಆರಂಭಕ್ಕೆ ಹಿನ್ನಡೆಯಾಗಿದೆ. ಪೀಠೋಪಕರಣ ಲಭ್ಯತೆ ಇಲ್ಲ, ಕೋರ್ಸ್‌ ಆರಂಭಿಸಲು ಸರ್ಕಾರದಿಂದ ಈವರೆಗೂ ಅನುಮತಿ ಪಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ವಿಶ್ವವಿದ್ಯಾಲಯ ಮೂಲಗಳು ಖಚಿತಪಡಿಸಿವೆ.

ಸೆ.18ರಂದು ವಿಶ್ವವಿದ್ಯಾಲಯ ಹೊರಡಿಸಿದ ಪ್ರವೇಶಾತಿಯಲ್ಲಿ ಬಳ್ಳಾರಿ, ಹೊಸಪೇಟೆ, ಸಂಡೂರಿನ ನಂದಿಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಸಿರುಗುಪ್ಪದ ಅಧ್ಯಯನ ಕೇಂದ್ರಗಳಲ್ಲಿ ನಿಗದಿಪಡಿಸಿದ ಕೋರ್ಸ್ ಆರಂಭ ಮತ್ತು ಪ್ರವೇಶ ಪ್ರಕ್ರಿಯೆಗೆ ಆದೇಶಿಸಿದೆ. ಈ ಪ್ರಕಟಣೆಯಲ್ಲಿ ಹರಪನಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಹೆಸರು ಕಾಣಿಸದೇ ಇರುವುದಕ್ಕೆ ಹಲವು ವಿದ್ಯಾರ್ಥಿ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.

‘ಉನ್ನತ ಶಿಕ್ಷಣ ಸುಲಭವಾಗಿ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿದ್ದಕ್ಕೆ ಈ ಭಾಗದ ವಿದ್ಯಾರ್ಥಿಗಳಿಗೆ ಖುಷಿಯಾಗಿತ್ತು. ಆದರೀಗ ವಿಎಸ್‍ಕೆ ವಿವಿ ಈ ಕೇಂದ್ರವನ್ನು ನಿರ್ಲಕ್ಷ್ಯ ಮಾಡಿದೆ. ಕೂಡಲೇ ಅಧ್ಯಯನ ಕೇಂದ್ರದಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT