ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನ, ಶ್ರದ್ಧೆಯಿಂದ ಸಾಧನೆ: ಮಾತಾ ಮಂಜಮ್ಮ ಜೋಗತಿ

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ
Last Updated 31 ಜನವರಿ 2022, 9:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಯುವಜನತೆ ಕಾಲಕ್ಕೆ ತಕ್ಕಂತೆ ಅಧ್ಯಯನ, ಶ್ರದ್ಧೆಯಿಂದ ವಹಿಸಿದ ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಧನೆ ಮಾಡಬಹುದು. ಆಗ ಸನ್ಮಾನ, ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ ಅವರ 126ನೆ ಜನ್ಮದಿನ, ಲೇಖಕರಾದ ಮೌನೇಶ್ ಬಡಿಗೇರ್ ಅವರ ‘ಕನ್ನಡ ಸಾಹಿತ್ಯ ದೀಪ್ತಿ’, ಷಣ್ಮುಖಪ್ಪ ಬೊದುರ ಅವರ ‘ಕನ್ನಡ ಸಾಹಿತ್ಯ ಮತ್ತು ಹೋಟೆಲ್ಲುಗಳ ಸ್ಥಿತ್ಯಂತರ’ ಹಾಗೂ ಮರಿಯಮ್ಮನಹಳ್ಳಿ ಕಿಲಾರಿ ಬಳಗದ ‘ತುಂಗಭದ್ರೆಯ ‌ಸೊಲ್ಲು-2‘ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಹೊಸ ಕಾಲಘಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ. ಜೀವನ ಕಂಡುಕೊಳ್ಳಲು ಸಕಾಲ. ಆದರೆ, ಅದಕ್ಕೆ ಶ್ರದ್ಧೆ ಬೇಕು. ಶ್ರದ್ಧೆಯಿಂದ ಮಾಡಿದ ಕೆಲಸದಿಂದ ಯಶಸ್ಸು ನಿಶ್ಚಿತ. ನಾನು ಅರ್ಧಕ್ಕೆ ಶಾಲೆ ತೊರೆದಿದ್ದೆ. ಆದರೆ, ನನ್ನ ಕಲೆ ನನ್ನ ಹಿಡಿದು ಬೆಳೆಸಿದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಮ್ಮ ಸಂಪೂರ್ಣ ಪಾಲ್ಗೊಳ್ಳುವಿಕೆ ಇರಬೇಕು’ ಎಂದು ತಿಳಿಸಿದರು.

'ಮರಿಯಮ್ಮನಹಳ್ಳಿ ಕಿಲಾರಿ ಬಳಗ ಯುವ ಬರಹಗಾರರಿಗೆ ಅವಕಾಶ ನೀಡಿ ಕೊರೊನಾ ಕಾಲಘಟ್ಟದ ಅನುಭವವನ್ನು ಸಾಹಿತ್ಯವಾಗಿಸಿದ್ದು ಸಂತಸವಾಗಿದೆ. ಮುಂದಿನ ಪೀಳಿಗೆ ಈ ಪುಸ್ತಕವನ್ನು ಓದಿ ಕೊರೊನಾ ಸಂದರ್ಭದ ತವಕ ತಲ್ಲಣಗಳನ್ನು ಅರಿಯಬಹುದು’ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಯು.ರಾಘವೇಂದ್ರ ಮಾತನಾಡಿ, ಹೊಸಗನ್ನಡ ಸಾಹಿತ್ಯದ ಅಪ್ರತಿಮ ಕವಿಗಳೆಂದರೆ ಬೇಂದ್ರೆ ಮತ್ತು ಕುವೆಂಪು. ಆಡುಮಾತಿನ ಭಾಷೆಯನ್ನು ಸಾಹಿತ್ಯಕ್ಕಿಳಿಸಿದವರು ಬೇಂದ್ರೆ. ಜನ‌ಸಾಮಾನ್ಯರ ಕವಿ ಅವರಾಗಿದ್ದರು. ಯುವಜನರು, ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಪ್ರವೇಶಿಸಿ ಅಧ್ಯಯನ ಮಾಡಿದಾಗ ಅವರು ನಮ್ಮೊಂದಿಗೆ ಇರುವ ಅನುಭವ ಮೂಡುತ್ತದೆ ಎಂದರು.

ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ, ಪ್ರಾಂಶುಪಾಲ ಬಿ.ಜಿ‌.ಕನಕೇಶಮೂರ್ತಿ, ಆಡಳಿತ ಮಂಡಳಿ ಸದಸ್ಯ ಮಧುರಚೆನ್ನ ಶಾ‌ಸ್ತ್ರಿ, ಕೆ.ಬಾಬುರಾಜೇಂದ್ರ ಪ್ರಸಾದ್, ತಿಪ್ಪೇರುದ್ರ, ಕೆ.ತಾತಪ್ಪ, ಟಿ.ರಘುಪ್ರಸಾದ್, ನಾಗಣ್ಣ ಕಿಲಾರಿ, ಸರದಾರ ಬಾರಿಗಿಡ, ಎಚ್.ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT