ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ

‘ಮೊಬೈಲ್‌ ಬಿಡಿ, ಗ್ರಂಥಾಲಯಕ್ಕೆ ಹೋಗಿ’
Published 21 ಫೆಬ್ರುವರಿ 2024, 8:14 IST
Last Updated 21 ಫೆಬ್ರುವರಿ 2024, 8:14 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಮಲಪನಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಿಂದ ಮೂರು ದಿನಗಳ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ ಆರಂಭವಾಗಿದ್ದು, 'ಮೊಬೈಲ್‌ ಬದಿಗಿಡಿ, ಗ್ರಂಥಾಲಯಕ್ಕೆ ತೆರಳಿ' ಎಂಬ ಸಂದೇಶ ಮೊಳಗಿದೆ.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ  ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿಕೊಂಡರೆ ಮಾತ್ರ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ, ಇಂತಹ ಜ್ಞಾನಾರ್ಜನೆಗೆ ಪುಸ್ತಕಗಳು ಬೇಕೇ ಬೇಕು. ಗ್ರಂಥಾಲಯಗಳಲ್ಲಿ ಮಕ್ಕಳ ಜ್ಞಾನ ವೃದ್ಧಿಗೆ ಬೇಕಾದ ಎಲ್ಲ ಸರಕುಗಳೂ ಇರುತ್ತವೆ ಎಂದರು.

‘ಮೊಬೈಲ್‌ಗಳಲ್ಲಿ ಬರುವ ಮಾಹಿತಿಗಳು ಗಂಭೀರ ಸ್ವರೂಪದ್ದಲ್ಲ. ಅವುಗಳನ್ನು ನೋಡಿ ಬಿಡುವ ಸ್ಥಿತಿ ಇರುತ್ತದೆ. ಆದರೆ ಗ್ರಂಥಾಲಯಗಳು ಹಾಗಲ್ಲ, ಅಲ್ಲಿ ನಮ್ಮ ಜೀವನಕ್ಕೆ ಬೇಕಾದ ಮಾರ್ಗದರ್ಶನ ಇರುತ್ತದೆ, ಅನುಭವ ಕಥನ ಇರುತ್ತದೆ, ಸಾಧಕರ ಸಾಧನೆಯ ಪರಿಚಯ ಇರುತ್ತದೆ. ಇದೆಲ್ಲವೂ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ. ಶಿಕ್ಷಕರು ಸಹ ಮಕ್ಕಳಿಗೆ ಇಂತಹ ಉಪಯುಕ್ತ ಪುಸ್ತಕಗಳನ್ನು ಓದುವುದಕ್ಕೆ ಪ್ರೇರಣೆ ಮಾಡಬೇಕು. ಮಕ್ಕಳ ಸಾಹಿತ್ಯ ಸಂಭ್ರಮ ಇಂತಹ ಪ್ರಯತ್ನದ ಫಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಉಮೇಶ್‌ ಮಾತನಾಡಿ, ಗ್ರಂಥಾಲಯಗಳ ಪರಿಕಲ್ಪನೆ ಇಂದು ಬದಲಾಗಿದೆ. ತಾಲ್ಲೂಕುಗಳಲ್ಲಿ ಈ ಹಿಂದೆ ಗ್ರಂಥಾಲಯ ಇದ್ದರೆ, ಇಂದು ಶಾಲೆಗಳಲ್ಲೂ ಮಿನಿ ಗ್ರಂಥಾಲಯಗಳಿವೆ, ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್‌ ರಾಜ್‌ ವತಿಯಿಂದಲೇ ಗ್ರಂಥಾಲಯಗಳು ನಡೆಯುತ್ತಿರುವುದರಿಂದ ವ್ಯವಸ್ಥೆ ಉತ್ತಮಗೊಂಡಿದೆ. ಮಕ್ಕಳ ಜ್ಞಾನಾರ್ಜನೆಗೆ ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಜ್ಞಾನ ವಿಕಾಸಕ್ಕೆ, ಅವರ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಸಂಭ್ರಮ ಉತ್ತಮ ಅವಕಾಶವಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ವ್ಯಾಪಕಗೊಳಿಸಬೇಕು ಎಂದರು. ಪಂಚಾಯತ್‌ ರಾಜ್‌ ಇಲಾಖೆಯೇ ಗ್ರಂಥಾಲಯಗಳ ಹೊಣೆ ಹೊತ್ತಿರುವುದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು.

ಮಲಪನಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್‌, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರಪ್ಪ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸೌಭಾಗ್ಯಲಕ್ಷ್ಮಿ, ಉಷಾರಾಣಿ ಇತರರು ಇದ್ದರು. 

ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಡೊಳ್ಳು ಕಲಾವಿದ ಕಾರಮಂಚಪ್ಪ ಅವರನ್ನು ಸನ್ಮಾನಿಸಲಾಯಿತು.

ಏನಿದು ಮಕ್ಕಳ ಸಾಹಿತ್ಯ ಸಂಭ್ರಮ?

ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೂರಕ್ಕೂ ಅಧಿಕ ಮಕ್ಕಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಕತೆ, ಕವನ, ನಾಟಕ ಮತ್ತು ವರದಿಗಾರಿಕೆ ಮಾಡಿಸುವುದು ಸಾಹಿತ್ಯ ಸಂಭ್ರಮದ ಸ್ಥೂಲ ನೋಟ. ಸುಮಾರು 22 ಮಂದಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರೂ, ಬಹುತೇಕ ವಿದ್ಯಾರ್ಥಿಗಳ ಸೃಜನಶೀಲತೆಗೇ ಇಲ್ಲಿ ಆದ್ಯತೆ ಇರುತ್ತದೆ. ಮೂರು ದಿನಗಳಲ್ಲಿ ಹಲವು ಕತೆ, ಕವನ, ನಾಟಕಗಳು ರಚನೆಗೊಳ್ಳಲಿದ್ದು, ಹೊರಗಡೆ ಕರೆದೊಯ್ಯುವ ವಿದ್ಯಾರ್ಥಿಗಳು ವರದಿಗಾರಿಕೆ ಮಾಡಿ ತೋರಿಸಲಿದ್ದಾರೆ. ಕೊನೆಯಲ್ಲಿ ಇವುಗಳ ಮೌಲ್ಯಮಾಪನವೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT