ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣಿ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ಪೊಲೀಸ್ ಠಾಣೆ ಎದುರು ಶವದೊಂದಿಗೆ ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಆಗ್ರಹ
Last Updated 6 ಮಾರ್ಚ್ 2023, 13:04 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ): ಗಂಡ ಹಾಗೂ ಮನೆಯವರು ವರದಕ್ಷಿಣಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪಟ್ಟಣದ ಖಾಸಗಿ ಶಾಲೆ ಶಿಕ್ಷಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕುಟುಂಬದ ಸದಸ್ಯರು ಸೋಮವಾರ ಪೊಲೀಸ್ ಠಾಣೆ ಎದುರು ಕೆಲಕಾಲ ಶವದೊಂದಿಗೆ ಪ್ರತಿಭಟಿಸಿದರು.

ರೂಪ (ಬಸಮ್ಮ) (34) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪಟ್ಟಣದಲ್ಲಿ ತಮ್ಮದೇ ಖಾಸಗಿ ಶಾಲೆಯಲ್ಲಿ (ನ್ಯಾಷನಲ್ ಪಬ್ಲಿಕ್ ಶಾಲೆ) ಶಿಕ್ಷಕಿಯಾಗಿದ್ದ ರೂಪಾ, ಭಾನುವಾರ ಶಾಲೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಮಹಿಳೆ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಅರ್ಜುನ್ ಪರಶೆಟ್ಟಿ (37), ಅತ್ತೆ, ನಾದಿನಿ ಸೇರಿ 6 ಜನರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೂಪಾ ಮತ್ತು ಅರ್ಜುನ್ 10 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ನಂತರ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದರು. ‘ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ನಂತರ ಕೆಲ ವರ್ಷಗಳಿಂದೀಚಿಗೆ ಗಂಡ ಮತ್ತು ಮನೆಯವರು ವರದಕ್ಷಿಣಿಗಾಗಿ ಒತ್ತಡ ಹೇರಿದ್ದರಿಂದ ಕಲಹ ಏರ್ಪಟ್ಟಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಮದುವೆಯಾಗಿ 10 ವರ್ಷಗಳಾದರೂ ಮಕ್ಕಳನ್ನು ಹೆರಲಿಲ್ಲ ಎಂದು ಮೃತ ರೂಪಾಗೆ ಗಂಡ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು’ ಎಂದು ಆರೋಪಿಸಲಾಗಿದೆ.

ರೂಪ
ರೂಪ

‘ಮಗಳಿಗೆ ಕಿರುಕುಳ ನೀಡಿದ್ದಲ್ಲದೇ ಆತ್ಮಹತ್ಯೆಗೆ ಗಂಡ ಪ್ರಚೋದನೆ ನೀಡಿದ್ದಾನೆ’ ಎಂದು ಮೃತ ಮಹಿಳೆಯ ತಾಯಿ ಬಸೆಟ್ಟಿ ಪುಷ್ಪಾವತಿ ದೂರಿನಲ್ಲಿ ವಿವರಿಸಿದ್ದಾರೆ.

ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮಹಿಳೆ ಕುಟುಂಬದ ಸದಸ್ಯರು ಅಂಬ್ಯುಲೆನ್ಸ್‌ನಲ್ಲಿ ಶವ ತಂದು ಪೊಲೀಸ್ ಠಾಣೆಗೆ ಬಳಿ ಪ್ರತಿಭಟಿಸಿದರು.

ಮೃತ ರೂಪಾ ಅವರ ಸೋದರಮಾವ ಬಸೆಟ್ಟಿ ಪ್ರಕಾಶ್ ಮಾತನಾಡಿ, ‘ಗಂಡನ ಮನೆಯವರ ಕಿರುಕುಳಕ್ಕೆ ಅಮಾಯಕ ಜೀವ ಬಲಿಯಾಗಿದೆ. ಆಕೆಯ ಗಂಡ ಕೊನೆಯದಾಗಿ ಕಳಿಸಿದ ಮೊಬೈಲ್ ಸಂದೇಶದಿಂದ ಮನನೊಂದು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ ಅವಳ ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಪಿಎಸ್ಐ ಸಂತೋಷ ಡಬ್ಬಿನ, ಕುಟುಂಬದ ಸದಸ್ಯರನ್ನುಸಂತೈಸಿ, ‘ಈಗಗಾಲೇ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳ ಬಂಧನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ತನಿಖೆ ಚುರುಕುಗೊಳಿಸಲು ಸಹಕಾರ ನೀಡಿ’ ಎಂದು ಮನವಿ ಮಾಡಿದರು. ಆಗ ಕುಟುಂಬದ ಸದಸ್ಯರು ಶವ ಕೊಂಡೊಯ್ದರು.

ಡೆತ್ ನೋಟಲ್ಲಿ ಏನಿದೆ?
ನನ್ನ ಗಂಡ ನನ್ನ ಜೊತೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ನೊಂದು ಸಾಯಲು ನಿರ್ಧರಿಸಿದ್ದೇನೆ. ಗಂಡನ ಬಳಿ ಪರಿ ಪರಿಯಾಗಿ ಬೇಡಿಕೊಂಡರೂ ಒಪ್ಪಲಿಲ್ಲ. ಗಂಡನನ್ನು ಬಿಟ್ಟು ಬದುಕುವ ಶಕ್ತಿಯಾಗಲಿ, ಯುಕ್ತಿಯಾಗಲಿ ನನಗೆ ಇಲ್ಲ. ನಾನು ನನ್ನ ಜೀವಕ್ಕಿಂತ ಹೆಚ್ಚು ಗಂಡನನ್ನು ಪ್ರೀತಿಸುತ್ತಿದ್ದೆ.

ಆತ್ಮಹತ್ಯೆ ಮಹಾಪಾಪ ಎಂದು ಗೊತ್ತು. ನಾನು ಬದುಕಲು ನನ್ನ ಗಂಡನೇ ಅವಕಾಶ ಮಾಡಿಕೊಡುತ್ತಿಲ್ಲ. ನಾನು ಬದುಕುವುದಾದರೆ ನನ್ನ ಗಂಡನ ಜತೆ, ಗಂಡನ ಮನೆಯಲ್ಲಿ. ಅದಕ್ಕೆ ಅವಕಾಶ ಮಾಡಿಕೊಡದ ಕಾರಣ ಬೇರೆ ದಾರಿ ಇಲ್ಲದೇ ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ.
-ಇಂತಿ ನಿಮ್ಮ ರೂಪಾ (ಬಸಮ್ಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT