ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಭಾರಿ ಸ್ಪರ್ಧೆ

ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್‌ ಟಿಕೆಟ್‌ಗೆ ಹಲವರಿಂದ ಅರ್ಜಿ ಸಲ್ಲಿಕೆ
Last Updated 15 ನವೆಂಬರ್ 2022, 7:24 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲೇ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹಲವರು ಅರ್ಜಿ ಸಲ್ಲಿಸಿದ್ದು, ಇದು ಭಾರಿ ಪೈಪೋಟಿಗೆ ಎಡೆ ಮಾಡಿಕೊಡುವ ಸೂಚನೆ ಕೊಟ್ಟಿದೆ.

ಬರುವ ಚುನಾವಣೆಗೆ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಅರ್ಜಿಗಳನ್ನು ಕರೆಯಲಾಗಿತ್ತು. ಅರ್ಜಿ ಸಲ್ಲಿಕೆಗೆ ನ. 15 ಕಡೆಯ ದಿನವಾಗಿದೆ. ಆಸಕ್ತರು ₹5 ಸಾವಿರ ಮೊತ್ತದ ಅರ್ಜಿ, ₹2 ಲಕ್ಷ ಡಿ.ಡಿ. ಸಲ್ಲಿಸಬೇಕಿದೆ. ಮಂಗಳವಾರ ಕೊನೆಯ ದಿನವಾಗಿದ್ದು, ಸೋಮವಾರ ಎಂಟಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಟಿಕೆಟ್‌ಗಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಈಶ್ವರಪ್ಪ ಅವರಿಗೆ ಅರ್ಜಿ ಸಲ್ಲಿಕೆ ಮಾಡಿರುವುದು ಕಾಂಗ್ರೆಸ್‌ ಮೂಲಗಳಿಂದ ‘ಪ್ರಜಾವಾಣಿ’ಗೆ ಗೊತ್ತಾಗಿದೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್, ಮುಖಂಡರಾದ ವೆಂಕಟರಾವ್ ಘೋರ್ಪಡೆ, ರಾಜಶೇಖರ್ ಹಿಟ್ನಾಳ್‌, ಕುರಿ ಶಿವಮೂರ್ತಿ, ಎಲ್.ಸಿದ್ದನಗೌಡ, ಸೈಯ್ಯದ್ ಮಹಮ್ಮದ್, ಕೆ.ಎಲ್.ಎಸ್.ಸ್ವಾಮಿ, ಮಹಮ್ಮದ್‌ ಇಮಾಮ್‌ ನಿಯಾಜಿ ಕೊನೆಯ ದಿನ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು. ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ, ಸಿರಾಜ್‌ ಶೇಕ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌ ಮಂಗಳವಾರ (ನ.15) ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ಮುಂಚೂಣಿಯಲ್ಲಿ ಮೂವರು:

ಕಾಂಗ್ರೆಸ್‌ ಟಿಕೆಟ್‌ ಕೋರಿ ಹಲವರು ಅರ್ಜಿ ಸಲ್ಲಿಸಿದ್ದರೂ ಕೂಡ ಪ್ರಮುಖವಾಗಿ ಮೂವರ ಹೆಸರುಗಳು ಮುಂಚೂಣಿಯಲ್ಲಿವೆ. ರಾಜಶೇಖರ್‌ ಹಿಟ್ನಾಳ್‌, ಎಚ್‌.ಆರ್‌. ಗವಿಯಪ್ಪ, ವೆಂಕಟರಾವ್‌ ಘೋರ್ಪಡೆ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತ ಗಳಿಸಿರುವ ಘೋರ್ಪಡೆ ಮತ್ತೊಮ್ಮೆ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು, ಗವಿಯಪ್ಪ ಬಿಜೆಪಿಯಿಂದ ಮಾತೃಪಕ್ಷಕ್ಕೆ ಮರಳಿದ್ದು, ಟಿಕೆಟ್‌ ಸಿಗುವ ಭರವಸೆಯಲ್ಲಿದ್ದಾರೆ. ಕ್ಷೇತ್ರದಾದ್ಯಂತ ಕಳೆದ ಒಂದು ವರ್ಷದಿಂದ ಬಿರುಸಿನಿಂದ ಓಡಾಡುತ್ತಿರುವ ರಾಜಶೇಖರ್‌ ಹಿಟ್ನಾಳ್‌ ಕೂಡ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ತನ್ನದೇ ಕಚೇರಿ ತೆಗೆದು ಪಕ್ಷ ಸಂಘಟನೆಗೆ ಬೆವರು ಹರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT