ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ತುಂಗಭದ್ರಾ ಜಲಾಶಯ: ಪರ್ಯಾಯ ಕಾಲುವೆಗೆ ಆಂಧ್ರಪ್ರದೇಶ ಬೇಡಿಕೆ?

ನವಲಿಯಲ್ಲಿ ಸಮತೋಲಿತ ಜಲಾಶಯ ನಿರ್ಮಿಸುವುದಾಗಿ ಡಿಸಿಎಂ ಹೇಳಿಕೆ
Published 3 ಜನವರಿ 2024, 5:47 IST
Last Updated 3 ಜನವರಿ 2024, 5:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೂಳು ತುಂಬಿದ ತುಂಗಭದ್ರಾ ಜಲಾಶಯದಿಂದ ಮಳೆಗಾಲದಲ್ಲಿ ನೀರು ಪೋಲಾಗಿ ಹೋಗುವುದನ್ನು ತಪ್ಪಿಸಲು ನವಲಿಯಲ್ಲಿ ಸಮತೋಲಿತ ಜಲಾಶಯ ನಿರ್ಮಿಸುವ ಉದ್ದೇಶವನ್ನು ಸರ್ಕಾರ ತಿಳಿಸಿದೆ. ಇದಕ್ಕೆ ಪೂರಕವಾಗಿ ಆಂಧ್ರಪ್ರದೇಶ ಸರ್ಕಾರ 38 ವರ್ಷಗಳ ಹಿಂದೆ ಸಲ್ಲಿಸಿದ್ದ ಪರ್ಯಾಯ ಕಾಲುವೆ ಪ್ರಸ್ತಾಪವೂ ಮುನ್ನೆಲೆಗೆ ಬಂದಿದೆ.

ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ (ಎಚ್‌ಎಲ್‌ಸಿ) ಪರ್ಯಾಯ ಕಾಲುವೆ ನಿರ್ಮಿಸಿ ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ಹರಿದುಹೋಗುವ ನೀರನ್ನು ಈ  ಕಾಲುವೆಯಲ್ಲಿ ಹರಿಸಬೇಕು, ಇದರಿಂದ ಮಳೆ ಸಮೃದ್ಧಿ ವರ್ಷಗಳಲ್ಲಿ ಅನಂತಪುರ ಜಿಲ್ಲೆಗೆ 10 ಟಿಎಂಸಿ ಅಡಿಯಷ್ಟು ನೀರು ಸಾಗಿಸಬಹುದು ಎಂಬುದು ಈ ಯೋಜನೆಯ ಉದ್ದೇಶ. ಆದರೆ, ಕರ್ನಾಟಕ ಸರ್ಕಾರ ಈವರೆಗೆ ಇದಕ್ಕೆ ಅನುಮತಿ ನೀಡಿಲ್ಲ ಎಂಬ ಭಾವನೆ ಆಂಧ್ರಪ್ರದೇಶದ್ದು ಎನ್ನಲಾಗುತ್ತಿದೆ.

‘ಕೃಷ್ಣಾ ಕೊಳ್ಳದ ನೀರನ್ನು ಗೋದಾವರಿ ಕೊಳ್ಳದತ್ತ ಸಾಗಿಸುವುದು ಸರಿಯಲ್ಲ ಎಂಬ ನೆಲೆಯಲ್ಲಿ ರಾಜ್ಯವು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ರಾಜ್ಯ ಸರ್ಕಾರ ನವಲಿಯ ಪ್ರಸ್ತಾಪ ಮಾಡುತ್ತಿದ್ದಂತೆಯೇ, ಪರ್ಯಾಯ ಕಾಲುವೆ ನಿರ್ಮಿಸಿ, ಹೆಚ್ಚುವರಿ ನೀರು ಹರಿದುಹೋಗುವಂತೆ ಮಾಡಿದರೆ ಕರ್ನಾಟಕಕ್ಕೂ ಅನುಕೂಲ. ನವಲಿಯಲ್ಲಿ ಸಮತೋಲಿತ ಜಲಾಶಯ ನಿರ್ಮಿಸುವ ಅಗತ್ಯವಿರಲ್ಲ’ ಎಂದು ಆಂಧ್ರಪ್ರದೇಶ ಹೇಳುತ್ತದೆ.

‘ನವಲಿಯ ಸಮತೋಲಿತ ಜಲಾಶಯದ ಬಗ್ಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜೊತೆ ಮಾತುಕತೆ ಆಗಿಲ್ಲ. ಈ ವಿಚಾರ ಚರ್ಚೆಗೆ ಬಂದಾಗ ಪರ್ಯಾಯ ಕಾಲುವೆಯ ಪ್ರಸ್ತಾವ ಮುನ್ನಲೆಗೆ ಬರುವುದು ಸಹಜ’ ಎಂದು ತುಂಗಭದ್ರಾ  ಮಂಡಳಿಯ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಪಿಆರ್ ಸಿದ್ಧ: ‘ನವಲಿ ಜಲಾಶಯದ ₹15,601 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 7,500 ಹೆಕ್ಟೇರ್‌ನಷ್ಟು ಭೂಸ್ವಾಧೀನ ಮಾಡಬೇಕಿದೆ. ಇಲ್ಲಿ ಬಹುತೇಕ ಖಾಸಗಿ ಕೃಷಿ ಜಮೀನು ಇರುವುದನ್ನು ಗುರುತಿಸಿ ಪರಿಹಾರ ಮೊತ್ತವನ್ನೂ ಸೇರಿಸಿ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಇದು ನಾವು ನಮ್ಮ ರೈತರ ಹಿತದೃಷ್ಟಿಯಿಂದ ಮಾಡಬಹುದಾದ ಕೆಲಸ’ ಎಂದು ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮ ಕೇಂದ್ರೀಯ ವಲಯದ ಮುಖ್ಯ ಎಂಜಿನಿಯರ್ ಎಲ್‌.ಬಸವರಾಜ್‌ ಹೇಳಿದರು.

‘ಸಮತೋಲಿತ ಜಲಾಶಯದಲ್ಲಿ ಸಂಗ್ರಹವಾಗುವ  33 ಟಿಎಂಸಿ ಅಡಿ ನೀರಿನಲ್ಲಿ 10 ಟಿಎಂಸಿ ಅಡಿ ನೀರನ್ನು ಆಂಧ್ರ  ಬಳಸಿಕೊಳ್ಳಲಿ. ಬೇಕಿದ್ದರೆ ಅ ನೀರನ್ನು ಎಚ್‌ಎಲ್‌ಸಿ ಕಾಲುವೆಯಲ್ಲೇ ಹರಿಸಿಕೊಳ್ಳಲಿ. ನಮ್ಮ ಯೋಜನೆಗೆ ಅವರು ಅಡ್ಡಿಪಡಿಸುವುದು ಸರಿಯಲ್ಲ. ಸದ್ಯ ಸರ್ಕಾರದ ಹಂತದಲ್ಲಿ ಈ ವಿಷಯವಿದ್ದು, ತುಂಗಭದ್ರಾ ಮಂಡಳಿಯ ಅನುಮತಿ ಪಡೆದು, ಆಂಧ್ರ, ತೆಲಂಗಾಣ ರಾಜ್ಯಗಳ ಜತೆಗೆ ಮಾತುಕತೆ ನಡೆದ ಬಳಿಕ ವಿಷಯ ಸ್ಪಷ್ಟವಾಗಬಹುದು’ ಎಂದು ಮೂಲಗಳು ತಿಳಿಸಿವೆ.

Highlights - ತುಂಗಭದ್ರಾ: ವೈಜ್ಞಾನಿಕ ನೀರು ಹಂಚಿಕೆಯ ಮಾದರಿ ಯೋಜನೆ 1985ರಲ್ಲೇ ಪ್ರವಾಹ ಕಾಲುವೆಗೆ ಆಂಧ್ರದಿಂದ ಪ್ರಸ್ತಾವ 70 ವರ್ಷದಲ್ಲಿ  9 ಬಾರಿ ಮಾತ್ರ ಭರ್ತಿಯಾಗದ ಜಲಾಶಯ

Cut-off box - ‘ನೀರಿನ ಪೂರ್ಣ ಬಳಕೆಯೇ ಆಗಿಲ್ಲ’ ‘ಅಂತರರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಅತ್ಯಂತ ವೈಜ್ಞಾನಿಕವಾಗಿ ಹಂಚಿಕೆಯಾದ ನೀರಾವರಿ ಯೋಜನೆ ತುಂಗಭದ್ರಾ ಜಲಾಶಯ ಯೋಜನೆ.  ಇಲ್ಲಿ ವಾರ್ಷಿಕವಾಗಿ ಲಭ್ಯವಿರುವ 212 ಟಿಎಂಸಿ ಅಡಿ ನೀರನ್ನು ಪೂರ್ತಿಯಾಗಿ ಬಳಸಿಕೊಂಡಿದ್ದೇ ಇಲ್ಲ. ಒಪ್ಪಂದದಂತೆ ಕರ್ನಾಟಕಕ್ಕೆ ಶೇ 65ರಷ್ಟು ಹಾಗೂ ಆಂಧ್ರಕ್ಕೆ ಶೇ 35ರಷ್ಟು ನೀರಿನ ಪಾಲು ಇದೆ (ಆಂಧ್ರ ಪ್ರದೇಶ ವಿಭಜನೆಗೊಂಡು ತೆಲಂಗಾಣ ನಿರ್ಮಾಣವಾಗಿದ್ದರೂ ನೀರಿನ ಪಾಲು ಅಷ್ಟೇ)’ ಎಂದು ನಿವೃತ್ತ ಅಧೀಕ್ಷಕ ಎಂಜಿನಿಯರ್ ಗೋವಿಂದುಲು ತಿಳಿಸಿದರು. ‘1953ರಲ್ಲಿ ಜಲಾಶಯ ಕಾರ್ಯಾರಂಭ ಮಾಡಿದ್ದು ವರ್ಷಕ್ಕೆ 0.45 ಟಿಎಂಸಿ ಅಡಿಯಷ್ಟು ಹೂಳು ತುಂಬುತ್ತದೆ. ಹೀಗಾಗಿ ಸದ್ಯ ಜಲಾಶಯದಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದ್ದು ನೀರು ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಅಡಿಗೆ ಕುಸಿದಿದೆ. ಈವರೆಗೆ 9 ಬಾರಿ ಮಾತ್ರ ಮಳೆಗಾಲದಲ್ಲಿ ಜಲಾಶಯ ಭರ್ತಿಯಾಗದೆ ಉಳಿದಿದೆ. ಪರ್ಯಾಯ ಕಾಲುವೆ ನಿರ್ಮಿಸುವುದೋ ಸಮತೋಲಿತ ಜಲಾಶಯ ನಿರ್ಮಿಸುವುದೋ ಎಂಬುದರ ಬಗ್ಗೆ ಸರ್ಕಾರಗಳು ಚರ್ಚಿಸಿ ನಿರ್ಧರಿಸಬೇಕು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT