ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು 1.94 ಅಡಿಯಷ್ಟೇ ಬಾಕಿ ಉಳಿದಿದ್ದು, ಜಲಾಶಯದಲ್ಲಿ 98.10 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ಕೆಲವು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ.
ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಗಿದ್ದು, ಸೋಮವಾರ ಬೆಳಿಗ್ಗೆ 1,631.06 ಅಡಿಯಷ್ಟು ನೀರಿನ ಮಟ್ಟ ಇತ್ತು. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಗೆ ಇನ್ನು ಏಳು ಟಿಎಂಸಿ ಅಡಿ ನೀರು ಮಾತ್ರ ಬೇಕಿದೆ. ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಸದ್ಯ 26,272 ಕ್ಯುಸೆಕ್‌ನಷ್ಟು ಇದೆ. ಹೊರ ಹರಿವಿನ ಪ್ರಮಾಣ 15,237 ಕ್ಯುಸೆಕ್‌ನಷ್ಟಿದೆ.
‘ಸದ್ಯದ ಸ್ಥಿತಿಯಲ್ಲೇ ಒಳಹರಿವಿನ ಪ್ರಮಾಣ ಇದ್ದರೆ ತಕ್ಷಣಕ್ಕೆ ಕ್ರಸ್ಟ್‌ಗೇಟ್ ತೆರೆಯುವ ಅಗತ್ಯ ಇಲ್ಲ. ಆದರೆ ಒಳಹರಿವಿನ ಪ್ರಮಾಣ 40 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಾದರೆ ಯಾವುದೇ ಕ್ಷಣದಲ್ಲಿ ಕ್ರಸ್ಟ್‌ಗೇಟ್ ತೆರೆದು ನೀರು ನದಿಗೆ ಹರಿಸುವುದು ಅನಿವಾರ್ಯವಾಗಬಹುದು. ಆದರೂ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಮಂಡಳಿ ಎರಡು ದಿನಗಳ ಹಿಂದೆ ಅಧಿಕೃತ ಪ್ರಕಟಣೆ ಹೊರಡಿಸಿ ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿತ್ತು. ಪ್ರತಿದಿನವೂ ಜಲಾಶಯಕ್ಕೆ ಎರಡು ಟಿಎಂಸಿ ಅಡಿಯಷ್ಟು ನೀರಿನ ಒಳಹರಿವು ಇರುವುದರಿಂದ ಇದೇ ಸ್ಥಿತಿಯಲ್ಲಿ ಇನ್ನು ಮೂರು ದಿನದೊಳಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಆದರೆ ಒಳಹರಿವು ಅಧಿಕ ಇರುವ ಸ್ಥಿತಿಯಲ್ಲಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗುವ ತನಕ ಕಾಯದೆ, ಅದಕ್ಕಿಂತ ಮೊದಲೇ ನೀರನ್ನು ನದಿಗೆ ಹರಿಸುವ ಪರಿಪಾಠ ಇದೆ. ಕಳೆದ ಜುಲೈ 22ರಂದು ಜಲಾಶಯದಲ್ಲಿ 98 ಟಿಎಂಸಿ ಅಡಿಯಷ್ಟು ನೀರಿದ್ದಾಗಲೇ ಮತ್ತು ಒಳಹರಿವಿನ ಪ್ರಮಾಣ ಲಕ್ಷದಷ್ಟು ಇದ್ದ ಕಾರಣ 3 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿತ್ತು.
ಅಧಿಕ ವಿದ್ಯುತ್ ಉತ್ಪಾದಿಸಿ ನೀರು ಹೊರಕ್ಕೆ: ಕಳೆದ ಎರಡು ದಿನಗಳಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕ್ರಸ್ಟ್ ಗೇಟ್ ತೆರೆಯದೆ, ಅಧಿಕ ಜಲವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಸುಮಾರು 5 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕ ನೀರು ಹೊರಬಿಡುವ ಸಂದರ್ಭ ಎದುರಾದಾಗ ಕ್ರಸ್ಟ್‌ಗೇಟ್ ತೆರೆಯುವುದು ಅನಿವಾರ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.