ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elections: ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿಯಾಗುವುದೇ ವಿಜಯನಗರ ಜಿಲ್ಲೆ?

ಹೊಸ ಜಿಲ್ಲೆ ರಚನೆಯಾದ ನಂತರ ಮೊದಲ ಸಾರ್ವತ್ರಿಕ ಚುನಾವಣೆ
Published 28 ಏಪ್ರಿಲ್ 2023, 13:15 IST
Last Updated 28 ಏಪ್ರಿಲ್ 2023, 13:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾದ ನಂತರ ನೂತನ ವಿಜಯನಗರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ವಿಶೇಷ.

ದಕ್ಷಿಣ ಭಾರತದ ಶ್ರೀಮಂತ ಸಾಮ್ರಾಜ್ಯದ ಹೆಸರಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗಳಿಸಿ ಕೀರ್ತಿ ಪತಾಕೆ ಹಾರಿಸಬೇಕೆಂಬ ಜಿದ್ದಾಜಿದ್ದಿ ರಾಜಕೀಯ ಪಕ್ಷಗಳಲ್ಲಿ ಕಾಣಿಸುತ್ತಿದೆ. ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದು ಎರಡು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಈ ಅವಧಿಯಲ್ಲಿ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಅದೇ ರೀತಿ ಜಿಲ್ಲೆಯ ರಾಜಕಾರಣದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.

ವಿಜಯನಗರ ಜಿಲ್ಲೆ ಒಟ್ಟು ಆರು ತಾಲ್ಲೂಕುಗಳನ್ನು ಒಳಗೊಂಡಿದೆ. ಆದರೆ, ಇದರ ವ್ಯಾಪ್ತಿಗೆ ಐದು ವಿಧಾನಸಭಾ ಕ್ಷೇತ್ರಗಳಿವೆ. ವಿಜಯನಗರ (ಹೊಸಪೇಟೆ) ಹಾಗೂ ಹರಪನಹಳ್ಳಿ ಸಾಮಾನ್ಯ ಕ್ಷೇತ್ರಗಳಾದರೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಕೂಡ್ಲಿಗಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರು, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದ ಆನಂದ್‌ ಸಿಂಗ್‌ ವಿಜಯನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ವರ್ಷ ಕಳೆಯುವುದರೊಳಗೆ ರಾಜೀನಾಮೆ ನೀಡಿ, 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಸಚಿವರಾಗಿ ವಿಜಯನಗರ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಲ ಅವರು ಕಣದಿಂದ ಹಿಂದೆ ಸರಿದು ಮಗ ಸಿದ್ದಾರ್ಥ ಸಿಂಗ್‌ ಅವರಿಗೆ ವಿಜಯನಗರ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ.

27 ವರ್ಷ ವಯಸ್ಸಿನ ಸಿದ್ದಾರ್ಥ ಸಿಂಗ್‌ ಹಾಗೂ ಮಾಜಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆನಂದ್‌ ಸಿಂಗ್‌ ವಿರುದ್ಧ ಸಾಕಷ್ಟು ಅಕ್ರಮದ ಆರೋಪಗಳು ಕೇಳಿ ಬಂದದ್ದರಿಂದ ಅವರು ಕಣದಿಂದ ಹಿಂದೆ ಸರಿದು, ಮಗನಿಗೆ ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬ ಮಾತುಗಳಿವೆ. ಇನ್ನು, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪ ಬದಲಾದ ಸನ್ನಿವೇಶದಲ್ಲಿ ಆ ಪಕ್ಷ ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ‘ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಜನ ರೋಸಿ ಬದಲಾವಣೆ ಬಯಸಿದ್ದಾರೆ. ನನ್ನ ಗೆಲುವು ಶತಃಸಿದ್ಧ’ ಎಂಬ ವಿಶ್ವಾಸದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಆನಂದ್‌ ಸಿಂಗ್‌ ಸಹೋದರಿ ರಾಣಿ ಸಂಯುಕ್ತಾ ಹಾಗೂ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್‌ ಸೇರಿರುವುದರಿಂದ ‘ಕೈ’ಗೆ ಬಲ ಬಂದಿದೆ. ಸರಳ, ಸಜ್ಜನಿಕೆ, ಯಾವುದೇ ಕಳಂಕ ಇಲ್ಲದಿರುವುದು ಗವಿಯಪ್ಪ ಅವರ ಪ್ಲಸ್‌ ಪಾಯಿಂಟ್‌. ಇನ್ನು, ಸಿದ್ದಾರ್ಥ, ಬಿಬಿಎ, ಎಲ್‌ಎಲ್‌ಬಿ ಓದಿದ್ದಾರೆ. ಕ್ಷೇತ್ರಕ್ಕೆ ಹೊಸ ಮುಖ. ‘ಅಪ್ಪ, ವಿಜಯನಗರ ಜಿಲ್ಲೆ ರಚನೆಗಾಗಿ ಶ್ರಮಿಸಿದ್ದಾರೆ. ಈ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ’ ಎಂದು ತಿಳಿಸುತ್ತ ಮತ ಯಾಚಿಸುತ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ಕ್ಷೇತ್ರದಲ್ಲಿ ‘ನಗರ ಹಾಗೂ ಗ್ರಾಮ ವಾಸ’ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಜಿಲ್ಲೆಯಾದ ನಂತರ ನಿವೇಶನಗಳ ಬೆಲೆ, ಕಟ್ಟಡಗಳ ಬಾಡಿಗೆ ಗಗನಕ್ಕೆ ಏರಿರುವುದರಿಂದ ಜನ ಬೇಸರಗೊಂಡಿದ್ದಾರೆ. ಸ್ವಜನಪಕ್ಷಪಾತದ ಗಂಭೀರ ಆರೋಪಗಳಿವೆ. ಇದು ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಿಲ್ಲ.

ಹೂವಿನಹಡಗಲಿಯಲ್ಲಿ ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಇದ್ದಂತೆ ಕಂಡರೂ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‌ನ ಹಾಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ‘ಹ್ಯಾಟ್ರಿಕ್‌’ ಗೆಲುವಿನ ಭರವಸೆಯಲ್ಲಿದ್ದಾರೆ. ಅವರದೇ ಪಕ್ಷದ ಅಭ್ಯರ್ಥಿ, ಯುವ ಮುಖಂಡ ಕೃಷ್ಣ ನಾಯ್ಕ ಅವರನ್ನು ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸಿರುವುದು ಪರಮೇಶ್ವರ ನಾಯ್ಕ ಅವರ ಪ್ಲಸ್‌ ಪಾಯಿಂಟ್‌. ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಕೃಷ್ಣ ನಾಯ್ಕ ಅವರ ಬೆನ್ನಿಗೆ ನಿಂತಿರುವುದು ಪರಮೇಶ್ವರ ನಾಯ್ಕ ಅವರ ನಿದ್ದೆಗೆಡಿಸಿದೆ. ಕೃಷ್ಣ ನಾಯ್ಕ, ಮೆಕ್ಯಾನಿಕಲ್‌ ಎಂಜಿನಿಯರ್‌. ಇಟಲಿಯಲ್ಲಿ ಕೆಲಕಾಲ ಕೆಲಸ ಮಾಡಿದವರು. ಬೆಂಗಳೂರಿನಲ್ಲಿ ಉದ್ಯಮ ಹೊಂದಿದ್ದಾರೆ. ‘ನಾನು ಯುವಕ. ಉದ್ಯಮಿ. ಗೆಲ್ಲಿಸಿದರೆ ಉದ್ಯೋಗ ಸೃಷ್ಟಿಗೆ ಶ್ರಮಿಸುವೆ’ ಎಂದು ಮತ ಕೇಳುತ್ತಿದ್ದಾರೆ. ಇದು ಯುವ ಮತದಾರರನ್ನು ಆಕರ್ಷಿಸುತ್ತಿದೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಹಾಗೂ ಕೂಡ್ಲಿಗಿ ಕ್ಷೇತ್ರಗಳು ತ್ರಿಕೋನ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿವೆ. ಬಿಜೆಪಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತ, ಮಾದಿಗ ಸಮಾಜದ ಬಲ್ಲಾಹುಣ್ಸಿ ರಾಮಣ್ಣ ಅವರಿಗೆ ಟಿಕೆಟ್‌ ಕೊಟ್ಟಿರುವುದರಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ಮಾಜಿ ಶಾಸಕ ಕೆ. ನೇಮರಾಜ ನಾಯ್ಕ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿರುವುದರಿಂದ ಅವರು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಭೀಮ ನಾಯ್ಕ ‘ಹ್ಯಾಟ್ರಿಕ್‌’ ಗೆಲುವಿನ ಕನಸು ಕಾಣುತ್ತಿದ್ದಾರೆ. ಎರಡು ಬೃಹತ್‌ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ. ಸದಾ ಜನರ ನಡುವೆ ಇರುತ್ತಾರೆ. ಇದು ಭೀಮ ನಾಯ್ಕ ಬಗೆಗಿರುವ ಉತ್ತಮ ಅಭಿಪ್ರಾಯ. ಟಿಕೆಟ್‌ ಕೈತಪ್ಪಿದ್ದಕ್ಕೆ ನೇಮರಾಜ ನಾಯ್ಕ ಹಾಗೂ ಅವರ ಪತ್ನಿ, ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿರುವುದು ಕ್ಷೇತ್ರದಲ್ಲಿ ಅವರ ಬಗ್ಗೆ ಅನುಕಂಪ ಮೂಡಿದೆ. ಬಲ್ಲಾಹುಣ್ಸಿ ರಾಮಣ್ಣ ಅವರು ಹೊಸಬರಾದ ಕಾರಣ ಕ್ಷೇತ್ರದ ಮೇಲೆ ಹಿಡಿತವಿಲ್ಲ. ಮೋದಿ ಹಾಗೂ ಪಕ್ಷದ ಹೆಸರು ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌–ಜೆಡಿಎಸ್‌ ನಡುವೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ತೀರ ಕಡಿಮೆ ಇರಬಹುದು.

ಕೂಡ್ಲಿಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಅವರ ಮಗ ಡಾ.ಎನ್‌.ಟಿ. ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದರೆ, ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿರುವ ಲೋಕೇಶ್‌ ವಿ. ನಾಯಕ ಅವರು ‘ಕಮಲ’ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇನ್ನು, ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಕೊನೆಯ ಕ್ಷಣದಲ್ಲಿ ಜೆಡಿಎಸ್‌ ಸೇರಿರುವ ಕೋಡಿಹಳ್ಳಿ ಭೀಮಣ್ಣ ಅವರು ಆ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇದರಿಂದ ಬಿಜೆಪಿಗೆ ಮತ ವಿಭಜನೆಯ ಚಿಂತೆ ಕಾಡುತ್ತಿದೆ. ಲೋಕೇಶ್‌ ನಾಯಕ ಅವರು ಈ ಹಿಂದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಶ್ರೀನಿವಾಸ್‌ ಹಾಗೂ ಭೀಮಣ್ಣ ಅವರಿಗೆ ಮೊದಲ ಚುನಾವಣೆಯಿದು. ಯಾರೇ ಗೆದ್ದರೂ ಮೊದಲ ಸಲ ವಿಧಾನಸಭೆ ಪ್ರವೇಶಿಸುವರು.

ಹರಪನಹಳ್ಳಿ ಕ್ಷೇತ್ರ ಕೂಡ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಹಾಲಿ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಪುನರಾಯ್ಕೆ ಬಯಸಿ, ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು, ಕಾಂಗ್ರೆಸ್‌, ಉದ್ಯಮಿ ಎನ್‌. ಕೊಟ್ರೇಶ್‌ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಮಗಳು ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇದರಿಂದಾಗಿ ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಚುನಾವಣೆಗೆ ಕೆಲವೇ ತಿಂಗಳ ಮುಂಚೆ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ಕೊಟ್ಟಿರುವುದು ಕರುಣಾಕರ ರೆಡ್ಡಿ ಅವರ ಸಾಧನೆ. ಅದು ಎಷ್ಟರಮಟ್ಟಿಗೆ ಫಲ ಕೊಡುತ್ತದೆ ನೋಡಬೇಕಿದೆ. ಕೊಟ್ರೇಶ್‌ ಅವರು ಬೀಜೋತ್ಪಾದನೆ ಕಂಪನಿಯ ಮಾಲೀಕರು. ಕೃಷಿ ಬಗ್ಗೆ ಜ್ಞಾನ ಹೊಂದಿದ್ದಾರೆ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಅನುಕಂಪ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ತಂದೆಯ ಹೆಸರನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಅದಷ್ಟೇ ಅವರನ್ನು ಗೆಲುವಿನ ದಡ ಸೇರಿಸುವುದು ಅನುಮಾನ. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಈ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಸತತ ಎರಡು ಸಲ ಗೆದ್ದ ನಿದರ್ಶನಗಳಿಲ್ಲ. 

ಪಿ.ಟಿ. ಪರಮೇಶ್ವರ ನಾಯ್ಕ ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ
ಪಿ.ಟಿ. ಪರಮೇಶ್ವರ ನಾಯ್ಕ ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ
ಭೀಮ ನಾಯ್ಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ
ಭೀಮ ನಾಯ್ಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ
ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ
ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ
ಸಿದ್ದಾರ್ಥ ಸಿಂಗ್‌ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಸಿದ್ದಾರ್ಥ ಸಿಂಗ್‌ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಕೃಷ್ಣ ನಾಯ್ಕ ಹೂವಿನಹಡಗಲಿ ಬಿಜೆಪಿ ಅಭ್ಯರ್ಥಿ
ಕೃಷ್ಣ ನಾಯ್ಕ ಹೂವಿನಹಡಗಲಿ ಬಿಜೆಪಿ ಅಭ್ಯರ್ಥಿ
ಕೆ. ನೇಮರಾಜ ನಾಯ್ಕ ಹಗರಿಬೊಮ್ಮನಹಳ್ಳಿ ಜೆಡಿಎಸ್‌ ಅಭ್ಯರ್ಥಿ
ಕೆ. ನೇಮರಾಜ ನಾಯ್ಕ ಹಗರಿಬೊಮ್ಮನಹಳ್ಳಿ ಜೆಡಿಎಸ್‌ ಅಭ್ಯರ್ಥಿ
ಡಾ. ಎನ್‌.ಟಿ. ಶ್ರೀನಿವಾಸ್‌ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಡಾ. ಎನ್‌.ಟಿ. ಶ್ರೀನಿವಾಸ್‌ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಎನ್‌. ಕೊಟ್ರೇಶ್‌ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಎನ್‌. ಕೊಟ್ರೇಶ್‌ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಎಂ.ಪಿ. ಲತಾ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಎಂ.ಪಿ. ಲತಾ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಲೋಕೇಶ್‌ ವಿ. ನಾಯಕ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಲೋಕೇಶ್‌ ವಿ. ನಾಯಕ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಎಚ್‌.ಆರ್‌. ಗವಿಯಪ್ಪ ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಎಚ್‌.ಆರ್‌. ಗವಿಯಪ್ಪ ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ಪಕ್ಷಗಳ ಬಲಾಬಲ ಕ್ಷೇತ್ರ; 2013; 2018 ವಿಜಯನಗರ; ಬಿಜೆಪಿ; ಕಾಂಗ್ರೆಸ್‌ ಹಗರಿಬೊಮ್ಮನಹಳ್ಳಿ; ಜೆಡಿಎಸ್‌; ಕಾಂಗ್ರೆಸ್‌ ಹೂವಿನಹಡಗಲಿ; ಕಾಂಗ್ರೆಸ್‌; ಕಾಂಗ್ರೆಸ್‌ ಹರಪನಹಳ್ಳಿ; ಕಾಂಗ್ರೆಸ್‌; ಬಿಜೆಪಿ ಕೂಡ್ಲಿಗಿ; ಪಕ್ಷೇತರ; ಬಿಜೆಪಿ

‘ದೀಪದ ಕೆಳಗೆ ಕತ್ತಲು’ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಬಹುತೇಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯಗಳಿಲ್ಲ. ಮಳೆಯನ್ನೇ ಆಶ್ರಯಿಸಿ ಜನ ಈಗಲೂ ಕೃಷಿ ಮಾಡುತ್ತಿದ್ದಾರೆ. ‘ದೀಪದ ಕೆಳಗೆ ಕತ್ತಲು’ ಎಂಬಂತೆ ತುಂಗಭದ್ರಾ ಜಲಾಶಯದಿಂದ ಕೂಗಳತೆಯ ದೂರದಲ್ಲಿನ ಹೊಸಪೇಟೆ ನಗರದ ಬಹುತೇಕ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಉದ್ಯೋಗ ಸೃಷ್ಟಿಗೂ ಯಾವುದೇ ಯೋಜನೆ ರೂಪಿಸಿಲ್ಲ. ಇದರ ಪರಿಣಾಮ ಜಿಲ್ಲೆಯ ಹೆಚ್ಚಿನ ಜನ ಕೂಲಿ ಅರಸಿಕೊಂಡು ಕಾಫಿ ತೋಟ ಹಾಗೂ ಕಬ್ಬಿನ ಗದ್ದೆಗಳಲ್ಲಿ ಕೆಲಸಕ್ಕಾಗಿ ಬೇರೆಡೆ ಗುಳೆ ಹೋಗುತ್ತಾರೆ.

ಅಂಕಿ ಅಂಶ 1092011 ವಿಜಯನಗರ ಜಿಲ್ಲೆಯಲ್ಲಿರುವ ಮತದಾರರು 546255 ಪುರುಷರು 545610 ಮಹಿಳೆಯರು 146 ಲೈಂಗಿಕ ಅಲ್ಪಸಂಖ್ಯಾತರು 55 ಐದು ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT