ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 6 ಜನರ ಸಾವಿಗೀಡಾಗಿರುವ ಪ್ರಕರಣ ಸಂಬಂಧ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಡಿ.ಕುಮಾರ್ ಅವರನ್ನು ಕರ್ತವ್ಯಲೋಪ ಆರೋಪದ ಅಡಿಯಲ್ಲಿ ಸರ್ಕಾರ ಅಮಾನತುಗೊಳಿಸಿದೆ.
ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 170ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ 33 ಜನರ ಆರೋಗದ ಮೇಲೆ ತೀವ್ರತರ ದುಷ್ಪರಿಣಾಮ ಉಂಟಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ 6 ಜನರು ಮೃತಪಟ್ಟಿದ್ದರು.
ಸರ್ಕಾರ ಈ ಪ್ರಕರಣದ ತನಿಖೆಗೆ ಆದೇಶಿಸಿ, ಮನೀಷ್ ಮೌದ್ಗಿಲ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಗುರುವಾರ ತನಿಖಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಹೂವಿನಹಡಗಲಿ ತಾಲ್ಲೂಕಿನಲ್ಲಿ ಜಲ ಜೀವನ್ ಮೀಷನ್ ಯೋಜನೆಯಡಿ ಕಾರ್ಯಾದೇಶ ನೀಡಿದ 22 ಕಾಮಗಾರಿಗಳಲ್ಲಿ 6 ಕಾಮಗಾರಿ ಮಾತ್ರ ಪೂರ್ಣಗೊಳಿಸಿದ್ದು, 16 ಕಾಮಗಾರಿಗಳನ್ನು ಪ್ರಾರಂಭಿಸಿರುವುದಿಲ್ಲ. ಈ ಬಗ್ಗೆ ನೋಟಿಸ್ ನೀಡಿದ್ದರೂ ಕಾಲಮಿತಿಯೊಳಗೆ ಎಇಇ ಉತ್ತರ ನೀಡಿರಲಿಲ್ಲ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ಈಚೆಗೆ ಮಕರಬ್ಬಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುವಾಗ ಹಳೇ ಪೈಪ್ ಲೈನ್ ಜಖಂಗೊಂಡು ಕಲುಷಿತ ನೀರು ಮಿಶ್ರಣವಾಗಿರುವ ಬಗ್ಗೆ ದೂರುಗಳು ಬಂದಿದ್ದು, ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಎಇಇ ಬೇಜವ್ದಾರಿತನ ತೋರಿಸಿದ್ದಾರೆ ಎಂದು ಬಳ್ಳಾರಿ ಜಿ.ಪಂ. ಸಿಇಒ ಅವರು ಈಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸಿದ್ದೇಶ ಪೋತಲಕಟ್ಟಿ ಎಇಇ ಎಂ.ಡಿ.ಕುಮಾರ್ ಅವರನ್ನು ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ವಿಜಯನಾಯ್ಕ, ಗ್ರಾ.ಪಂ. ಶರಣಪ್ಪ ಅವರನ್ನು ಜಿ.ಪಂ. ಸಿಇಒ ಅಮಾನತುಗೊಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.