ಶನಿವಾರ, ಅಕ್ಟೋಬರ್ 16, 2021
29 °C
ಮನೆ ಮಾಡಿದ ಆತಂಕ

ಮಕರಬ್ಬಿ: ವಾಂತಿ, ಭೇದಿ ಪ್ರಕರಣದಿಂದ ನಿರಂತರ ಹೆಚ್ಚುತ್ತಿದೆ ಸಾವಿನ ಸಂಖ್ಯೆ

ಕೆ. ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ತಾಲ್ಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದವರ ಪೈಕಿ ಸೋಮವಾರ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸಾವಿನ ಸರಣಿ ಮುಂದುವರಿದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಕರಬ್ಬಿಯ ಕೆಂಚಮ್ಮ (73) ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ವಾಂತಿ, ಭೇದಿಯಿಂದ ಈವರೆಗೆ ಗ್ರಾಮದ ಆರು ಮಂದಿ ಪ್ರಾಣ ಹೋಗಿದೆ.

15 ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿ ಉಲ್ಬಣಿಸಿ 150ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಈ ಪೈಕಿ ಕೆಲವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರೆ, ಚಿಕಿತ್ಸೆ ಫಲಕಾರಿಯಾಗದೇ ದಿನೇ ದಿನೇ ಸಾವುಗಳು ಸಂಭವಿಸುತ್ತಿವೆ. ಇದರಿಂದ ಜನರಲ್ಲಿ ದುಗುಡ ಹೆಚ್ಚಾಗಿದೆ.

ನಿರ್ಲಕ್ಷ್ಯವೇ ಸಾವಿಗೆ ಕಾರಣ

2,000 ಜನಸಂಖ್ಯೆಯಿರುವ ಮಕರಬ್ಬಿಯಲ್ಲಿ ಕುಡಿಯುವ ನೀರಿನ ಐದು ಕೊಳವೆ ಬಾವಿಗಳಿವೆ. ಆಗಸ್ಟ್ ಅಂತ್ಯದಲ್ಲಿ 9 ಜನರಿಗೆ ವಾಂತಿ,ಭೇದಿ ಕಾಣಿಸಿಕೊಂಡಿದ್ದರಿಂದ ಆರೋಗ್ಯ ಇಲಾಖೆಯವರು ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದರು. ಮೂರು ಕೊಳವೆ ಬಾವಿಯ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದರು. ಈ ಪೈಕಿ ಎರಡು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಯೋಗಾಲಯ ವರದಿ ಆಧರಿಸಿ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದರೂ ಅದೇ ನೀರು ಪೂರೈಕೆಯಾಗಿದ್ದರಿಂದ 20 ದಿನಗಳ ನಂತರ ಮತ್ತೆ ವಾಂತಿ ಭೇದಿ ಮರುಕಳಿಸಿ 150ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರುವಂತಾಗಿತ್ತು.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ 33 ಜನರನ್ನು ಹೂವಿನಹಡಗಲಿ, ಹೊಳಲು, ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಿಸದೇ ಹಾವನೂರು ಬಸಮ್ಮ, ಬೆಳವಿಗಿ ನೀಲಮ್ಮ, ಅಂಗೂರುಗಟ್ಟಿ ಗೋಣೆಪ್ಪ, ಬೆಳ್ಳಟ್ಟಿಯ ಮಹಾದೇವಪ್ಪ ಹಳ್ಳೆಪ್ಪನವರ್ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಷರೀಫ್ ಸಾಹೇಬ್ ಎಂಬುವವರು ಪಾರ್ಶ್ವವಾಯುವಿಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗದಗ ಆಸ್ಪತ್ರೆ ಇಬ್ಬರು, ಹುಬ್ಬಳ್ಳಿಯ ಎಸ್.ಡಿ.ಎಂ., ಕಿಮ್ಸ್ ಹಾಗೂ ದಾವಣಗೆರೆ ಎಸ್.ಎಸ್. ಆಸ್ಪತ್ರೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಿರ್ಲಕ್ಷ್ಯದಿಂದ ಆರು ಜನ ಸತ್ತಿದ್ದಾರೆ. ಜಿಲ್ಲಾಡಳಿತ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಅಂಜನಪ್ಪ ದಾಸರ್, ಮಾಬುಸಾಬ್ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು